ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಕೊಡಿಗೇಹಳ‍್ಳಿ ಸಮೀಪದ ಚಿನ್ನಾಭರಣ ಮಳಿಗೆ ಮಾಲಿಕನ ಮತ್ತು ಅವರ ಸೋದರ ಸಂಬಂಧಿ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಮಧ್ಯಪ್ರದೇಶ ರಾಜ್ಯದ ಕುಖ್ಯಾತ ದರೋಡೆಕೋರರ ತಂಡವನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಮಧ್ಯಪ್ರದೇಶ ರಾಜ್ಯದ ಮೊರೋನಾ ಜಿಲ್ಲೆಯ ಖಾನ ಶರ್ಮಾ, ಆಶು ಶರ್ಮಾ, ಪ್ರದೀಪ್ ಶರ್ಮಾ, ವಿಕಾಸ್ ಪಂಡಿತ್ ಬಂಧಿತರಾಗಿದ್ದು, ಆರೋಪಿಗಳಿಂದ ಮೂರು ನಾಡ ಪಿಸ್ತೂಲ್‌ಗಳು ಮತ್ತು 12 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದ ವೇಳೆ ಗುಂಡು ತಗುಲಿ ಗಾಯಗೊಂಡಿದ್ದ ಮತ್ತೊಬ್ಬ ಆರೋಪಿ ಸೂರಜ್ ಮೃತಪಟ್ಟಿದ್ದಾನೆ.
ಇದೇ ತಿಂಗಳ 14ರಂದು ಕೊಡಿಗೇಹಳ್ಳಿ ಸಮೀಪದ ದೇವಿನಗರದ ರಾಜಸ್ಥಾನ ಮೂಲದ ಅಪ್ಪುರಾವ್ ಮಾಲಿಕತ್ವದ ‘ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್’ಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆಗೆ ಆರೋಪಿಗಳು ಯತ್ನಿಸಿದ್ದರು.
ಈ ಕೃತ್ಯಕ್ಕೆ ಪ್ರತಿರೋಧಿಸಿದಾಗ ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮಾಲಿಕ ಅಪ್ಪುರಾವ್ ಹಾಗೂ ಆತನ ಅಕ್ಕನ ಮಗ ಆನಂತರಾಮ್ ಗಾಯಗೊಂಡಿದ್ದರು.
ಈ ಕೃತ್ಯ ಎಸಗಿ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಈಶಾನ್ಯ ವಿಭಾಗದ ಪೊಲೀಸರು ಕರೆತಂದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಬೆಂಗಳೂರು-ಮಧ್ಯಪ್ರದೇಶ ಚೇಸಿಂಗ್: ಖಾನ ಶರ್ಮಾ ಹಾಗೂ ವಿಕಾಸ್ ಕುಖ್ಯಾತ ದರೋಡೆಕೋರರಾಗಿದ್ದು, ಈ ದುಷ್ಕರ್ಮಿಗಳ ವಿರುದ್ಧ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಖಾನ ವಿರುದ್ಧವೇ ಸುಲಿಗೆ ಹಾಗೂ ದರೋಡೆ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳಿವೆ.
ತಮ್ಮೂರಿನಿಂದ ಕೆಲಸದ ಸೋಗಿನಲ್ಲಿ ನಗರಗಳಿಗೆ ತೆರಳಿ ಚಿನ್ನಾಭರಣ ಮಳಿಗೆಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸಿ ಖಾನ ತಂಡ ಪರಾರಿಯಾಗುತ್ತಿತ್ತು.
ಅಂತೆಯೇ ಬೆಂಗಳೂರಿನಲ್ಲಿ ದರೋಡೆಗೆ ವಿಕಾಸ್ ಹಾಗೂ ಖಾನ ಯೋಜಿಸಿದ್ದರು. ಹಲವು ದಿನಗಳಿಂದ ನಗರದಲ್ಲಿ ಟೈಲ್ಸ್ ಕೆಲಸಗಾರನಾಗಿ ದುಡಿಯುತ್ತಿದ್ದ ತಮ್ಮ ತಂಡದ ಸದಸ್ಯ ಪ್ರದೀಪ್ ಶರ್ಮಾನನ್ನು ಸಂಪರ್ಕಿಸಿ ಬೆಂಗಳೂರಿನ ಬಗ್ಗೆ ವಿಕಾಸ್ ವಿಚಾರಿಸಿಕೊಂಡಿದ್ದ.
ಬಳಿಕ ಮಾ.5ರಂದು ನಗರಕ್ಕೆ ಬಂದ ವಿಕಾಸ್, ಕೆ.ಆರ್.ಪುರದಲ್ಲಿದ್ದ ಪ್ರದೀಪ್ ಮನೆಯಲ್ಲಿ ಎರಡು ದಿನಗಳಿದ್ದು, ಇಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಮಧ್ಯಪ್ರದೇಶಕ್ಕೆ ಮರಳಿದ್ದ.
ಆನಂತರ ಅಲ್ಲಿ ಖಾನ ಜತೆ ಸೇರಿ ದರೋಡೆಗೆ ಪೂರ್ವಸಿದ್ಧತೆ ಮಾಡಿಕೊಂಡ ಆತ, ತನ್ನ ತಂಡದ ಜತೆ ಮಾ.10ರಂದು ಬೆಂಗಳೂರಿಗೆ ಬಂದಿದ್ದ.
ಆ ವೇಳೆ ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು ಬಳಿ ನಿರ್ಮಾಣ ಹಂತದ ಕಟ್ಚಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಪ್ರದೀಪ್ ಮನೆಯಲ್ಲಿ ದರೋಡೆಕೋರರು ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ಕೃತ್ಯಕ್ಕಾಗಿ ಮಾ.13ರಂದು ರಾತ್ರಿ ಎಚ್‌ಎಸ್ಆರ್ ಲೇಔಟ್‌ನಲ್ಲಿ ಹಾಗೂ ಮರುದಿನ ವಿದ್ಯಾರಣ್ಯಪುರ ಬಳಿ ಎರಡು ಬೈಕ್‌ಗಳನ್ನು ಆರೋಪಿಗಳು ಕಳವು ಮಾಡಿದ್ದರು.
ಮಾ.14ರಂದು ಬೆಳಗ್ಗೆ 11.20ಕ್ಕೆ ದೇವಿನಗರಕ್ಕೆ ಆ ಬೈಕ್‌ಗಳಲ್ಲಿ ಐವರು ಬಂದಿದ್ದರು. ಆಗ ಲಕ್ಷ್ಮೀ ಜ್ಯುವಲೆರ್ಸ್ ಮಳಿಗೆಯೊಳಗೆ ಪಿಸ್ತೂಲ್ ಸಮೇತ ಸೂರಜ್ ಹಾಗೂ ಖಾನ ಪ್ರವೇಶಿಸಿದರೆ, ಇನ್ನುಳಿದವರು ಹೊರಗೆ ನಿಂತು ನಿಗಾವಹಿಸಿದ್ದರು.
ತಮಗೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ನೀಡುವಂತೆ ದರೋಡೆಕೋರರು ಧಮ್ಕಿ ಹಾಕಿದಾಗ ಮಾಲಿಕ ಅಪ್ಪುರಾವ್ ಹಾಗೂ ಅವರ ಸೋದರಿ ಪುತ್ರ ಆನಂತರಾಮ್ ಪ್ರತಿರೋಧ ತೋರಿದ್ದಾರೆ.
ಈ ಹಂತದಲ್ಲಿ ‘ನಿಕಾಲ್, ನಿಕಾಲ್’ ಎಂದು ಹೇಳುತ್ತಲೇ ನಾಲ್ಕು ಬಾರಿ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಆಗ ಮಾಲಿಕನ ಹೊಟ್ಟೆಗೆ ಎರಡು ಗುಂಡುಗಳು ಹಾಗೂ ಅವರ ಸೋದರಿ ಪುತ್ರನ ತೊಡೆಗೆ ಒಂದು ಗುಂಡು ಹೊಕ್ಕಿದೆ.
ಆಗ ಅಂಗಡಿಯಲ್ಲಿದ್ದ ಸೈರನ್ ಅನ್ನು ಗಾಯಾಳು ಒತ್ತಿದ ಕೂಡಲೇ ಭೀತಿಗೊಂಡು ದರೋಡೆಕೋರರು ಸ್ಥಳದಲ್ಲೇ ಪಿಸ್ತೂಲ್ ಬಿಟ್ಟು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದರೋಡೆಕೋರರ ಬೆನ್ನಟ್ಟಿದ ಸ್ಥಳೀಯರು: ಗುಂಡಿನ ಮೊರತೆ ಕೇಳಿದ ಕೂಡಲೇ ಜಮಾಯಿಸಿದ ಸ್ಥಳೀಯರು, ಎರಡು ಬೈಕ್‌ಗಳಲ್ಲಿ ಪರಾರಿ ಆಗುತ್ತಿದ್ದ ದರೋಡೆಕೋರರನ್ನು ಬೆನ್ನತ್ತಿದ್ದಾರೆ. ಅಷ್ಟರಲ್ಲಿ ಮಾಹಿತಿ ಪಡೆದು ಕೃತ್ಯದ ನಡೆದ ಐದನೇ ನಿಮಿಷದಲ್ಲೇ ಘಟನಾ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ತಲುಪಿದ್ದಾರೆ.
ಗೊರಗುಂಟೆಪಾಳ್ಯ ಕಡೆಗೆ ಆರೋಪಿಗಳು ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದರು. ಘಟನಾ ಸ್ಥಳದಲ್ಲಿ ಪತ್ತೆಯಾದ ಪಿಸ್ತೂಲ್ ಮೇಲಿನ ಬೆರಳಚ್ಚನ್ನು ರಾಷ್ಟ್ರೀಯ ಅಪರಾಧಿ ದಾಖಲಾತಿ ಕೇಂದ್ರದ ಪೋರ್ಟ್‌ನಲ್ಲಿ ಪರಿಶೀಲಿಸಿದಾಗ ಅದು ಮಧ್ಯಪ್ರದೇಶ ಕುಖ್ಯಾತ ದರೋಡೆಕೋರ ಖಾನ ಶರ್ಮಾ ಬೆರಳಚ್ಚಿಗೆ ಹೋಲಿಕೆಯಾಯಿತು. ಈ ಸುಳಿವು ಲಭ್ಯವಾದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಖಾನ ಬೆನ್ನಟ್ಟಿದ್ದರು.
ಗೊರಗುಂಟೆಪಾಳ್ಯದಿಂದ ತುಮಕೂರು-ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಅನಂತಪುರ ರೈಲ್ವೆ ನಿಲ್ದಾಣ ತಲುಪಿ ಅಲ್ಲಿಂದ ಮಧ್ಯಪ್ರದೇಶ ರೈಲನ್ನೇರಿ ದರೋಡೆಕೋರರು ಪರಾರಿಯಾಗಿದ್ದರು.
ಈ ರೈಲಿನ ಪ್ರಯಾಣದ ಮಾಹಿತಿ ಪಡೆದು ಬೆನ್ನತ್ತಿದ ಪೊಲೀಸರು, ಕೊನೆಗೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶನಿವಾರ ಮುಂಜಾನೆ ಮಧ್ಯಪ್ರದೇಶದ ಗ್ವಾಲಿಯರ್‌ನ ರೈಲ್ವೆ ನಿಲ್ದಾಣದಲ್ಲಿ ಖಾನ ತಂಡವನ್ನು ಬಂಧಿಸಿದ್ದಾರೆ.
ಆಗ ಗುಂಡಿನಿಂದ ಗಾಯಗೊಂಡಿದ್ದ ಸೂರಜ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಗುಂಡು ಹೊಕಿದ್ದರೂ 24 ತಾಸು ಪ್ರಯಾಣ: ಜ್ಯುವೆಲರ್ಸ್‌ನಲ್ಲಿ ದರೋಡೆಗೆ ಯತ್ನಿಸಿದ್ದಾಗ ಮಾಲಿಕ ಮತ್ತು ಅವರ ಕೆಲಸಗಾರ ಜತೆ ದರೋಡೆಕೋರರ ಕೈ-ಕೈ ಮಿಲಾಯಿಸಿದ್ದರು. ಈ ತಿಕ್ಕಾಟದಲ್ಲಿ ದರೋಡೆಕೋರರ ಪಿಸ್ತೂಲ್‌ನಿಂದ ಹಾರಿದ ಒಂದು ಗುಂಡು ಅದೇ ತಂಡದ ಸದಸ್ಯ ಸೂರಜ್‌ಗೆ ಹೊಕ್ಕಿತು.
ಆದರೆ ಗುಂಡೇಟು ಬಿದ್ದರೂ ಜಗ್ಗದೆ ಘಟನಾ ಸ್ಥಳದಿಂದ ತಪ್ಪಿಸಿಕೊಂಡು 24 ತಾಸು ರೈಲಿನಲ್ಲಿ ಪ್ರಯಾಣಿಸಿ ಮಧ್ಯಪ್ರದೇಶದ ಗಾಲ್ವಿಯರ್‌ಗೆ ಗಾಯಾಳು ಆರೋಪಿ ತಲುಪಿದ್ದ.
ಅಲ್ಲಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದ ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಕುತ್ತಿಗೆ ಮೂಲಕ ದೇಹದೊಳಗೆ ಹೊಕ್ಕಿದ್ದ ಗುಂಡು ನಂಜಾದ ಪರಿಣಾಮ ಚಿಕಿತ್ಸೆ ಫಲಿಸದೆ ಸೂರಜ್ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದರೋಡೆಕೋರರ ಕೈಯಿಂದ ಪಿಸ್ತೂಲ್ ಕಸಿದುಕೊಂಡು ಆತ್ಮರಕ್ಷಣೆಗೆ ಆನಂತರಾವ್ ಗುಂಡು ಹಾರಿಸಿದ್ದರು ಎನ್ನಲಾಗಿದೆ.
ಚಿನ್ನಾಭರಣ ನೋಡಿ ದರೋಡೆಗೆ ಸಂಚು: ದೇವಿನಗರದಲ್ಲಿ ಅಪ್ಪುರಾವ್ ಅವರ ಮಳಿಗೆ ಸೇರಿದಂತೆ ನಾಲ್ಕೈದು ಚಿನ್ನಾಭರಣ ಮಳಿಗೆಗಳು ಅಜುಬಾಜಿನಲ್ಲೇ ಇವೆ. ಆದರೆ ಈ ಅಂಗಡಿಗಳ ಪೈಕಿ ಅಪ್ಪುರಾವ್ ಮಳಿಗೆಯಲ್ಲಿ ಚಿನ್ನಾಭರಣ ಪ್ರದರ್ಶನ ಹೆಚ್ಚಾಗಿತು.
ಅಲ್ಲದೆ ಈ ಮಳಿಗೆ ಪಕ್ಕದ ಅಂಗಡಿಗೆ ಟೈಲ್ಸ್ ಕೆಲಸಕ್ಕೆ ಪ್ರದೀಪ್ ಬಂದಿದ್ದಾಗ ಅಲ್ಲಿನ ಪರಿಸ್ಥಿತಿ ಮಾಹಿತಿ ಕಲೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕೊಡಿಗೇಹಳ್ಳಿ ಚಿನ್ನಾಭರಣ ದರೋಡೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರು ಉತ್ತಮ ತನಿಖೆ ನಡೆಸಿದ್ದಾರೆ. ಈ ದರೋಡೆಕೋರರನ್ನು ಬಂಧಿಸಿದ ಈಶಾನ್ಯ ವಿಭಾಗದ ಪೊಲೀಸರು ಹಾಗೂ ಮಧ್ಯಪ್ರದೇಶದ ಪೊಲೀಸರಿಗೆ ತಲಾ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. -ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು.