ಕದ್ದ ಎತ್ತುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

| Published : Jun 18 2024, 12:48 AM IST

ಸಾರಾಂಶ

₹90 ಸಾವಿರ ಬೆಲೆ ಬಾಳುವ ಎತ್ತುಗಳನ್ನು ಕಳವು ಮಾಡಿ, ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಬಸವಾಪಟ್ಟಣ ಕ್ರಾಸ್‌ ಬಳಿ ಹೊನ್ನಾಳಿ ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ಮಹಮ್ಮದ್ ಆಸೀಫ್ (29) ಬಂಧಿತ ಆರೋಪಿಯಾಗಿದ್ದು, ತಾಲೂಕಿನ ಚೀಲಾಪುರ ಗ್ರಾಮ ನಿವಾಸಿಯಾಗಿದ್ದಾನೆ.

- ದೂರು ದಾಖಲಿಸಿದ್ದ ಮಾಲೀಕನಿಗೆ ಎತ್ತುಗಳ ಹಸ್ತಾಂತರ: ಎಸ್‌ಪಿ ಶ್ಲಾಘನೆ

- - -

- ಆರೋಪಿ ಚೀಲಾಪುರದ ಮಹಮದ್‌ ಆಸೀಫ್‌ಗೆ ನ್ಯಾಯಾಂಗ ಬಂಧನ: ಪಿಐ

- ಬಸವಾಪಟ್ಟಣ ಕ್ರಾಸ್‌ ಬಳಿ ಆರೋಪಿಯನ್ನು ಬಂಧಿಸಿದ ಹೊನ್ನಾಳಿ ಪೊಲೀಸರು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

₹90 ಸಾವಿರ ಬೆಲೆ ಬಾಳುವ ಎತ್ತುಗಳನ್ನು ಕಳವು ಮಾಡಿ, ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಬಸವಾಪಟ್ಟಣ ಕ್ರಾಸ್‌ ಬಳಿ ಹೊನ್ನಾಳಿ ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.

ಮಹಮ್ಮದ್ ಆಸೀಫ್ (29) ಬಂಧಿತ ಆರೋಪಿಯಾಗಿದ್ದು, ತಾಲೂಕಿನ ಚೀಲಾಪುರ ಗ್ರಾಮ ನಿವಾಸಿಯಾಗಿದ್ದಾನೆ. ಸೋಮವಾರ ಬಕ್ರೀದ್ ಹಬ್ಬದ ಹಿನ್ನೆಲೆ ಹೊನ್ನಾಳಿಯಿಂದ ಹೊರಹೋಗುವ ಮಾರ್ಗಗಳಲ್ಲಿ ಜೂನ್ 16ರಂದು ವಾಹನಗಳ ತಪಾಸಣೆಗಾಗಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಹೊನ್ನಾಳಿ ಗೊಲ್ಲರಹಳ್ಳಿ ಸಮೀಪದ ಬಸವಾಪಟ್ಟಣ ಕ್ರಾಸ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.

ಇದೇ ವೇಳೆ ಎತ್ತುಗಳನ್ನು ತುಂಬಿಕೊಂಡು ಬಂದ ವಾಹನವನ್ನು ಪೊಲೀಸರು ನಿಲ್ಲಿಸುವಂತೆ ಚಾಲಕನಿಗೆ ಕೈಗಳಿಂದ ಸನ್ನೆ ಮಾಡಿದ್ದಾರೆ. ಈ ವೇಳೆ ಗಲಿಬಿಲಿಗೊಂಡ ಚಾಲಕ ಮಹಮದ್‌ ಆಸೀಫ್‌, ವಾಹನವನ್ನು ಸ್ಥಳದಲ್ಲೇ ನಿಲ್ಲಿಸಿ, ಓಡಿಹೋಗಲು ಪ್ರಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನ ಬೆನ್ನಟ್ಟಿ ಹಿಡಿದು, ವಿಚಾರಣೆ ನಡೆಸಿದ್ದಾರೆ. ಆಗ ಕದ್ದಿದ್ದ ಎತ್ತುಗಳು ವಾಹನದಲ್ಲಿ ಸಾಗಿಸುತ್ತಿದ್ದ ವಿಚಾರ ಬಯಲಾಗಿದೆ.

ಪೊಲೀಸರು ಜಾನುವಾರುಗಳನ್ನು ರಕ್ಷಿಸಿ, ವಾಹನ ಜಪ್ತಿ ಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್‌ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಚೀಲಾಪುರ ಗ್ರಾಮದ ಧರ್ಮನಾಯ್ಕ ಎಂಬವರ ಮನೆಯಿಂದ ಎತ್ತುಗಳು ಕಳವಾಗಿರುವ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆ ಪೊಲೀಸರು ಜಾನುವಾರುಗಳ ಸಾಗಣೆ ಬಗ್ಗೆಯೂ ಹೆಚ್ಚಿನ ನಿಗಾವಹಿಸಿದ್ದರು. ಪತ್ತೆಯಾದ ಎತ್ತುಗಳನ್ನು ಅವುಗಳ ಮಾಲೀಕ ಹಾಗೂ ದೂರುದಾರ ಧರ್ಮನಾಯ್ಕ ಅವರಿಗೆ ಒಪ್ಪಿಸಲಾಗಿದೆ.

ಎತ್ತುಗಳ ಕಳವು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹೊನ್ನಾಳಿ ಪೊಲೀಸ್ ಠಾಣೆಯ ಪಿಐ ಸುನೀಲ್ ಕುಮಾರ್, ಎಎಸ್‌ಐ ತಿಪ್ಪೇಸ್ವಾಮಿ ಹಾಗೂ ಹರೀಶ್, ಪೇದೆಗಳಾದ ಎಸ್.ರವಿ, ಚೇತನ್ ಕುಮಾರ್, ಮನೋಹರ ಅವರ ಕಾರ್ಯವನ್ನು ದಾವಣಗೆರೆ ಜಿಲ್ಲಾ ಎಸ್‌ಪಿ ಪ್ರಶಂಸಿಸಿದ್ದಾರೆ.

- - -

-17ಎಚ್.ಎಲ್.ಐ2:

ಹೊನ್ನಾಳಿ ಪೊಲೀಸರು ಜಾನುವಾರು ಕಳ್ಳನನ್ನು ಬಂಧಿಸಿ ವಾಹನ ಸಮೇತ ಎತ್ತುಗಳನ್ನು ವಶಕ್ಕೆ ಪಡೆದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ.