ನಾಡಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಅಮೋಘ

| Published : Jun 06 2024, 12:30 AM IST

ನಾಡಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಅಮೋಘ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್‌ಎಸ್ ಅಣೆಕಟ್ಟು, ವಾಣಿ ವಿಲಾಸ ಸಾಗರ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್ ಆಸ್ಪತ್ರೆ, ಮಿಂಟೋ ಆಸ್ಪತ್ರೆ ಮೊದಲಾದ ಹಲವಾರು ಶಾಶ್ವತ ಯೋಜನೆಗಳನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಎಂದು ಕೆ.ರಾಘವೇಂದ್ರ ನಾಯರಿ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- 140ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಕೆ.ರಾಘವೇಂದ್ರ ನಾಯರಿ ಅಭಿಮತ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಕನ್ನಡ ನಾಡಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್‌ಎಸ್ ಅಣೆಕಟ್ಟು, ವಾಣಿ ವಿಲಾಸ ಸಾಗರ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್ ಆಸ್ಪತ್ರೆ, ಮಿಂಟೋ ಆಸ್ಪತ್ರೆ ಮೊದಲಾದ ಹಲವಾರು ಶಾಶ್ವತ ಯೋಜನೆಗಳನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಎಂದು ಕೆ.ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಒಡೆಯರ್ ಆಡಳಿತಾವಧಿಯಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯ ಕಂಡಿದೆ. ಇದರಿಂದಾಗಿ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಆಡಳಿತ ಸುಧಾರಣೆ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯನ್ನು ಒಡೆಯರ್ ಮಾಡಿದ್ದರು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವ ಚಿಂತನೆಯ ಫಲವಾಗಿ 1915 ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು 109 ವರ್ಷಗಳ ಭವ್ಯವಾದ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಕನ್ನಡ ನಾಡು- ನುಡಿಯ ಉನ್ನತಿಗಾಗಿ ವರ್ಷಪೂರ್ತಿ ಕೆಲಸ ಮಾಡುವ ಯಾವುದಾದರೂ ಸಂಸ್ಥೆ ಕನ್ನಡ ನಾಡಿನಲ್ಲಿ ಇದೆ ಅಂತಾದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಎಂದರು.

ಕನ್ನಡ ನಾಡನ್ನು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಂಪದ್ಭರಿತವಾಗಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಬಹು ದೊಡ್ಡದು. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಲ್ಲದೇ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸಾಮಾಜಿಕ ಕಾನೂನುಗಳ ಹರಿಕಾರರಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅವರಗೆರೆ ಎಚ್.ಜಿ. ಉಮೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಕ್ಕರಗೊಳ್ಳ ಪರಮೇಶ್ವರಪ್ಪ, ಅವರಗೆರೆ ರುದ್ರಮುನಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಕೆ.ಎಸ್. ವೀರೇಶ್‌ ಪ್ರಸಾದ್, ರೇವಣಸಿದ್ದಪ್ಪ ಅಂಗಡಿ, ಬಿ. ದಿಳ್ಯಪ್ಪ, ಸತ್ಯಭಾಮಾ ಮಂಜುನಾಥ್, ತಾಲೂಕು ಕಸಾಪ ಪದಾಧಿಕಾರಿಗಳಾದ ಬೇತೂರು ಷಡಾಕ್ಷರಪ್ಪ, ಕುರ್ಕಿ ಸಿದ್ದೇಶ್, ರುದ್ರಾಕ್ಷಿ ಬಾಯಿ, ನಾಗೇಶ್ವರಿ ನಾಯರಿ, ಎಚ್.ಚಿದಾನಂದ, ಎ.ಜಿ. ವೀರೇಶ್, ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.

- - - -4ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಕ.ಸಾ.ಪ.ದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಆಚರಿಸಲಾಯಿತು.