ವಿಗ್ರಹ ಭಗ್ನಗೊಳಿಸುವ ಕೃತ್ಯ ಮರುಕಳಿಸಬಾರದು

| Published : Nov 05 2025, 12:30 AM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫ್ಲೆಕ್ಸ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿದ ಪ್ರಕರಣ ನಡೆದ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫ್ಲೆಕ್ಸ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿದ ಪ್ರಕರಣ ನಡೆದ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.

ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಅಧ್ಯಕ್ಷರು, ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯ ಸಂದೇಶ ನೀಡಿದ ಮಹನೀಯರ ವಿಗ್ರಹಗಳನ್ನು ಭಗ್ನಗೊಳಿಸುವಂತಹ ಕೃತ್ಯಗಳು ಎಲ್ಲಿಯೂ ಮರುಕಳಿಸಬಾರದು. ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು ಎಂದರು.

ಜ್ಯೋತಿಗೌಡನಪುರದಲ್ಲಿ ನಡೆದ ಕೃತ್ಯ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ನಿರಂತರ ಸಂಪರ್ಕದಲ್ಲಿದ್ದು ಎಲ್ಲ ವಿವರವನ್ನು ಅಧಿಕಾರಿಗಳು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಆಯೋಗವು ದೌರ್ಜನ್ಯ, ಜಮೀನು ವಿವಾದ, ಇನ್ನಿತರ ಹಲವಾರು ಅಹವಾಲುಗಳನ್ನು ಆಲಿಸಿ ಪರಿಹಾರಕ್ಕಾಗಿ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದೆ. ೨೫೭೩ ಪ್ರಕರಣಗಳು ಆಯೋಗದಲ್ಲಿ ದಾಖಲಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ನಾನು ಅಯೋಗದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು, ೧೨೫ ಪ್ರಕರಣಗಳನ್ನು ಕೈಗೆತ್ತಿಕೊಂಡು ೨೫ ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೇನೆ ಎಂದು ತಿಳಿಸಿದರು.

ಖಾತೆ, ಆರ್.ಟಿ.ಸಿ ಯಂತಹ ಅನೇಕ ಕಾರ್ಯಗಳಿಗೆ ಅಧಿಕಾರಿಗಳು ನ್ಯಾಯಯುತವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು. ಜಿಲ್ಲಾ, ತಾಲೂಕುಗಳಲ್ಲಿ ಸಾಕಷ್ಟು ಜಮೀನು ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಮಾಣ ಪತ್ರಗಿರಲಿ, ಯಾವುದೇ ಸೇವೆಗಳಿರಲಿ, ಸರ್ಕಾರಿ ಅಧಿಕಾರಿಗಳು ಆದ್ಯ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಆಯೋಗ ಸೂಚನೆ ನೀಡುತ್ತಿದೆ ಎಂದು ಅಧ್ಯಕ್ಷರಾದ ಎಲ್. ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿದರು. ಆಯೋಗದ ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್. ಶಿವರಾಮು, ತಹಶೀಲ್ದಾರ್ ಗಿರಿಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಮುಖಂಡರಾದ ವೆಂಕಟರಮಣ ಪಾಪು, ಶಿವಕುಮಾರ್, ಆರ್. ಮಹದೇವು, ನರೇಂದ್ರ, ಇನ್ನಿತರ ಮುಖಂಡರು ಇದ್ದರು.