ಸಾರಾಂಶ
ಕಾರಟಗಿ:
ಇಲ್ಲಿನ ಪುರಸಭೆ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವ ಮೂಲಕ ೨೦೨೫-೨೬ನೇ ಸಾಲಿನ ಒಟ್ಟು ₹ 10 ಲಕ್ಷ ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಬುಧವಾರ ಮಂಡಿಸಿದರು.ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಮನೆ ತೆರಿಗೆ, ನೀರಿನ ಶುಲ್ಕ, ಬಾಡಿಗೆ, ಮಾರುಕಟ್ಟೆ, ಕಟ್ಟಡ ಕಾಯ್ದೆ ಯೋಜನೆಗೆ ಸಂಬಂಧಿಸಿದ ಶುಲ್ಕ, ಅಭಿವೃದ್ಧಿ ಶುಲ್ಕ ಮತ್ತು ಇತರೆ, ವ್ಯಾಪಾರ ಪರವಾನಗಿ ಶುಲ್ಕ, ರಾಜ್ಯ ಹಣಕಾಸು ಆಯೋಗದ ವೇತನ ಅನುದಾನ, ರಾಜ್ಯ ಹಣಕಾಸು ಆಯೋಗದ ನಿಬಂರ್ಧಿತ ಅನುದಾನ, ಸರ್ಕಾರದಿಂದ ನಿರೀಕ್ಷಿಸಲಾದ ಅನುದಾನಗಳಲ್ಲಿ ೧೫ನೇ ಹಣಕಾಸು ಆಯೋಗದ ಅನುದಾನ, ಸಂಸತ್ ಹಾಗೂ ಇತರೆ ಅಭಿವೃದ್ಧಿ ಅನುದಾನ, ನಗರೋತ್ಥಾನ ಯೋಜನೆಯಡಿ ಅನುದಾನ, ಸ್ವಚ್ಛ ಭಾರತ ಯೋಜನೆಯಡಿ ಅನುದಾನ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳು ಸೇರಿ ಒಟ್ಟಾರೆ ₹ 22.96 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
ಸಾಮಾನ್ಯ ಆಡಳಿತ ಹಾಗೂ ಸಿಬ್ಬಂದಿ ವೇತನ ಖರ್ಚು, ಸಾರ್ವಜನಿಕ ವಿದ್ಯುತ್ ಮತ್ತು ಬೀದಿ ದೀಪ, ಸಾರ್ವಜನಿಕ ಆರೋಗ್ಯ, ನೀರು ಸರಬರಾಜು ನಿರ್ವಹಣೆ, ನೈರ್ಮಲ್ಯ ಹಾಗೂ ಘನ ತ್ಯಾಜ್ಯ ವಸ್ತು ನಿರ್ವಹಣೆ, ಕಟ್ಟಡ ಹಾಗೂ ಇತರೆ ಸ್ಥಿರಾಸ್ತಿಗಳ ನಿರ್ಮಾಣ, ಚರಂಡಿ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಹಾಗೂ ನೀರು ಸರಬರಾಜು ಯೋಜನೆ ಖರ್ಚು, ಕಚೇರಿ ಉಪಕರಣ, ವಾಹನ ಹಾಗೂ ಲಘು ವಾಹನ ಮತ್ತು ಯಂತ್ರೋಪಕರಣ ಖರೀದಿ, ಪಟ್ಟಣದ ನೂತನ ಬಡಾವಣೆಗಳಲ್ಲಿ ಉದ್ಯಾನವನ ನಿರ್ಮಾಣ, ೨ಮತ್ತು ೩ನೇ ವಾರ್ಡ್‌ಗಳಲ್ಲಿ ಸ್ಮಶಾನ ಅಭಿವೃದ್ಧಿ ಇತರೆ ಖರ್ಚುಗಳು ಸೇರಿ ಒಟ್ಟಾರೆ ₹ 22.86 ಕೋಟಿ ಖರ್ಚು ಅಂದಾಜಿಸಲಾಗಿದ್ದು, ₹ ೧೦ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.ಅಭಿವೃದ್ಧಿ, ಸ್ವಚ್ಛ ಹಾಗೂ ಸುಂದರ ಪಟ್ಟಣವಾಗಿಸಲು ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ತೆರಿಗೆ ವಸೂಲಾತಿಯಲ್ಲಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಿ ಉತ್ತಮ ಆಡಳಿತ ನೀಡಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಪಟ್ಟಣವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುತ್ತದೆ. ಮೂಲಸೌಕರ್ಯ ಒದಗಿಸಲು ಹೆಚ್ಚಿನ ಪ್ರಾಧಾನ್ಯ ನೀಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಈ ವೇಳೆ ಸ್ಥಾಯಿ ಸಮಿತಿ ಸದಸ್ಯ ಎಚ್. ಈಶಪ್ಪ, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರಿಗೆ, ಫಕೀರಪ್ಪ ನಾಯಕ, ರಮೇಶ ನಾಯಕ, ಹಿರೇಬಸಪ್ಪ ಸಜ್ಜನ, ಮಂಜುನಾಥ ಮೇಗೂರು, ದೊಡ್ಡಬಸವರಾಜ ಬೂದಿ, ಬಸವರಾಜ ಕೊಪ್ಪದ, ಶ್ರೀನಿವಾಸ ಕಾನುಮಲ್ಲಿ, ಸುರೇಶ, ಲಕ್ಷ್ಮೀದೇವಿ ಎತ್ತಿನಮನಿ, ಸುಜಾತಾ ನಾಗರಾಜ, ಹುಸೇನಬಿ, ನಾಮ ನಿರ್ದೇಶಿತ ಸದಸ್ಯ ಸಿದ್ದಪ್ಪ ಬೇವಿನಾಳ ಸೇರಿದಂತೆ ಪುರಸಭೆ ಎಂಜಿನಿಯರ್ ಮಂಜುನಾಥ, ಕಂದಾಯ ಅಧಿಕಾರಿ ಸೀಮಾರಾಣಿ, ಕಂದಾಯ ನಿರೀಕ್ಷಕ ಆದೆಪ್ಪ, ವ್ಯವಸ್ಥಾಪಕ ಪರಮೇಶ್ವರಪ್ಪ ಹಾಗೂ ರಾಘವೇಂದ್ರ ಅಕೌಂಟೆಂಟ್ ನಾಗರಾಜ್ ತಳವಾರ ಇದ್ದರು.