ಹೈನೋತ್ಪಾದನೆಯಲ್ಲಿ ಬೀದರ್‌ ಜಿಲ್ಲೆ ಮಾದರಿಯಾಗಿಸುವ ಗುರಿ

| Published : Sep 03 2024, 01:33 AM IST

ಸಾರಾಂಶ

ಸೆ.5ರಂದು ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದ ಮೂಲ ಸೌಕರ್ಯಗಳ ಉದ್ಘಾಟನಾ ಸಮಾರಂಭ ಹಾಗೂ ಹೈನುಗಾರರ ಸಮಾವೇಶವನ್ನು ಇಲ್ಲಿನ ಬಿ.ವಿ.ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಬೀದರ್‌

ಹೈನೋತ್ಪಾದನೆಯಲ್ಲಿ ರಾಷ್ಟ್ರದಲ್ಲಿಯೇ ಬೀದರ್‌ನ್ನು ಮಾದರಿ ಜಿಲ್ಲೆಯನ್ನಾಗಿಸುವ ಗುರಿಯನ್ನು ಡಾ.ಹೆಗ್ಗಡೆ ಅವರು ಹೊಂದಿದ್ದಾರೆ. ಅವರು ಜಿಲ್ಲೆಗೆ ತಮ್ಮ ಸಂಸದರ ನಿಧಿಯಿಂದ ₹5 ಕೋಟಿ ಅನುದಾನ ನೀಡಿದ್ದು ಅದರ ಬಳಕೆ ಕುರಿತು ಸೆ.5ರಂದು ಅವರು ಮಾಹಿತಿ ಪಡೆಯಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟನ್‌ ಹೈನುಗಾರಿಕಾ ಕಾರ್ಯಕ್ರಮದ ನಿರ್ದೇಶಕ ಡಾ.ಎಸ್‌.ಎಸ್‌ ಹಿರೇಮಠ ಮಾತನಾಡಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲಾ ಹಾಲು ಒಕ್ಕೂಟ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ ಸಂಯುಕ್ತಾಶ್ರಮದಲ್ಲಿ ಇದೇ ಸೆ.5ರಂದು ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದ ಮೂಲ ಸೌಕರ್ಯಗಳ ಉದ್ಘಾಟನಾ ಸಮಾರಂಭ ಹಾಗೂ ಹೈನುಗಾರರ ಸಮಾವೇಶವನ್ನು ಇಲ್ಲಿನ ಬಿ.ವಿ.ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಸಾನ್ನಿಧ್ಯದಲ್ಲಿ ಅಂದು ಕಾರ್ಯಕ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಹಾಲು ಪರೀಕ್ಷಾ ಪರಿಕರಗಳ ವಿತರಣೆಯನ್ನು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಮಾಡಿದರೆ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಪಾಟೀಲ್‌ ಸಾಧನಾ ವರದಿ ಬಿಡುಗಡೆ ಮಾಡಲಿದ್ದಾರೆ. ಸಚಿವ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಲಿದ್ದಾರೆ ಇನ್ನುಳಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹೈನೋತ್ಪಾದನೆಯಲ್ಲಿ ಬೀದರ್‌ ಜಿಲ್ಲೆಯನ್ನು ಇಡೀ ರಾಷ್ಟ್ರದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಪಣ ತೊಟ್ಟಿದೆ. ಬೀದರ್‌ ಜಿಲ್ಲೆಯಲ್ಲಿ ಲಭ್ಯವಿರುವ ದೇವಣಿ ತಳಿ ಸದುಪಯೋಗಪಡಿಸಿಕೊಂಡು ಇಲ್ಲಿಯ ಹೈನೋತ್ಪಾದಕರ ಸಂಘಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದರು.

ರಾಜ್ಯಸಭಾ ಸಂಸದರ ನಿಧಿಯಲ್ಲಿ 2022-23ನೇ ಸಾಲಿನ ಮೊದಲ ಹಂತದ ₹250 ಲಕ್ಷ ವೆಚ್ಚದಲ್ಲಿ ಬೀದರ್‌ ಜಿಲ್ಲೆಯಲ್ಲಿ ನೂತನವಾಗಿ 07 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲಾಗಿದೆ. 42 ಹಾಲು ಉತ್ಪಾದಕ ಸಂಘಗಳಿಗೆ ಪಾರದರ್ಶಕತೆ ಮೂಡಿಸಲು ಪರೀಕ್ಷೆ ಉಪಕರಣಗಳನ್ನು ಎಎಂಸಿಯು ಯಂತ್ರ ವಿತರಿಸಲಾಗಿದೆ. 34 ಸಂಘಗಳಿಗೆ ನಿಖರವಾಗಿ ತೂಕ ಕಂಡು ಹಿಡಿಯಲು ಅಳತೆ ಯಂತ್ರ, 49 ಸಂಘಗಳಿಗೆ ಹಾಲಿನಲ್ಲಿರುವ ಜಿಡ್ಡು ಪರೀಕ್ಷೆ ಮಾಡುವ ಯಂತ್ರಗಳನ್ನು ನೀಡಲಾಗಿದೆ, 192 ಸಂಘಗಳಿಗೆ 1500 ಸ್ಟೀಲ್‌ ಕ್ಯಾನ್‌ಗಳನ್ನು ನೀಡುವ ಮೂಲಕ ಬೀದರ್‌ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಮುಕ್ತ ಹೈನೋದ್ಯಮ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಹೀಗೆಯೇ ಅನೇಕ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಎರಡನೇ ಹಂತದಲ್ಲಿ ಒಟ್ಟು ಜಿಲ್ಲೆಯ 311 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮೂಲಭೂತ ಸೌಕಾರ್ಯಗಳು ಮಂಜೂರಾಗಿವೆ. ಜಿಲ್ಲೆಯಲ್ಲಿ ಹಸಿರು ಮೇವಿನ ಬೆಳೆ ಬೆಳೆಯಲು ಪ್ರೋತ್ಸಹ ರೂಪವಾಗಿ ಹಸಿರು ಮೇವಿನ ಬೀಜಗಳ ಮತ್ತು ಬೇರುಗಳು ಉಚಿತವಾಗಿ ನೀಡಲಾಗಿರುತ್ತದೆ, ಶುದ್ಧ ಹಾಲಿನ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲು ಹಾಲು ಉತ್ಪಾದಕರಿಗೆ ಮತ್ತು ಸಂಘಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಪರೀಶೀಲನೆ ಮಾಡಲಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಹೆಚ್ಚಿಲು ಉತ್ತಮ ಹಾಲು ಹಾಗೂ ಹಾಲಿನ ಉತ್ಪನಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದರು.

ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರುಪಾಕ್ಷ ಗಾದಗಿ, ಬೀದರ್‌ ಉತ್ತರ ಕ್ಷೇತ್ರದ ನಿರ್ದೇಶಕ ಧರ್ಮೇಂದ್ರ, ಬೀದರ್‌ ದಕ್ಷಿಣ ಕ್ಷೇತ್ರದ ನಿರ್ದೇಶಕ ಸಂಜಯ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.