ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು, ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರಳಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಒದಗಿಸುವುದು ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಉದ್ದೇಶವಾಗಿದೆ.
ಅಂಕೋಲಾ:ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು, ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರಳಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಒದಗಿಸುವುದು ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಶನಿವಾರ ಅಂಕೋಲಾ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಆಯೋಜಿಸಲಾದ ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟಿಸಿ ಮಾತನಾಡಿದರು.ಕರಾವಳಿ, ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳು, ಬರದ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ವಿಚಾರಗಳ ಕುರಿತು ಚರ್ಚಿಸಲು ಮುಂಬರುವ ದಿನಗಳಲ್ಲಿ ವಿಶೇಷ ಅಧಿವೇಶನ ಕರೆಯಲಾಗುವುದು. ಅಲ್ಲದೆ ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಪ್ರಜಾಸೇವೆ ಆಂದೋಲನದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಲು ಪ್ರಯತ್ನಿಸಲಾಗುವುದು ಅಂಕೋಲಾ ತಾಲೂಕಿನಲ್ಲಿ ತಜ್ಞ ವೈದ್ಯರ ಕೊರತೆ, ಮೀನುಗಾರರ ಸಮಸ್ಯೆಗಳು, ಬ್ರೇಕ್ ವಾಟರ್ ಮುಂತಾದ ಸಮಸ್ಯೆಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಅಂಕೋಲಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಎಂದರುಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷಿಪ್ರಿಯಾ, ಪ್ರಜಾಸೇವೆ ಇಲಾಖೆಯ ಉದ್ದೇಶಗಳನ್ನು ವಿವರಿಸಿ, ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಉಳಿದ ಶನಿವಾರಗಳಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ/ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳು ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಐ.ಪಿ.ಜಿ.ಆರ್.ಎಸ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ದಾಖಲಿಸಿ, 21 ದಿನಗಳ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಪುರಷೋತ್ತಮ ನಾಯ್ಕ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಂಡುರಂಗ ಕೆ ಗೌಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಎಸ್ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣಕುಮಾರ್, ತಹಶೀಲ್ದಾರ ನಿಶ್ಚಲ್ ನರೋನ್ಹಾ, ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು 653 ಅಹವಾಲುಗಳನ್ನು ಸಲ್ಲಿಸಿದ್ದು, ಬಹುತೇಕ ಅರ್ಜಿಗಳು ಪಡಿತರ ಚೀಟಿ, ವಸತಿ ಬೇಡಿಕೆ, ರಸ್ತೆ ಬೇಡಿಕೆಗಳ ಕುರಿತು ಇದ್ದು, ಇವುಗಳ ಕುರಿತಂತೆ ನಿಗಧಿತ ಅವಧಿಯೊಳಗೆ ಪರಿಹಾರ ನೀಡುವಂತೆ ಸಚಿವರು ಸೂಚಿಸಿದರು. ಸಮಾರಂಭದಲ್ಲಿ 27 ಜನರಿಗೆ ಪಿಂಚಣಿ ಆದೇಶ, ಅಗ್ನಿಶಾಮಕ ಇಲಾಖೆಯಿಂದ 5 ಅಪತ್ ಮಿತ್ರರಿಗೆ ಕಿಟ್ ವಿತರಣೆ, ಪಶುಪಾಲನೆ ಇಲಾಖೆ ವತಿಯಿಂದ ಮರಣ ಹೊಂದಿದ ಜಾನುವಾರುಗಳ 3 ಮಂದಿ ಮಾಲೀಕರಿಗೆ 2.85 ಲಕ್ಷ ಪರಿಹಾರದ ಚಕ್, ಕಾರ್ಮಿಕ ಇಲಾಖೆ ವತಿಯಿಂದ 161 ಮಂದಿಗೆ ಸುರಕ್ಷತ ಕಿಟ್ ಮತ್ತು ಮದುವೆ ಧನ ಸಹಾಯ ಚೆಕ್, ತೋಟಗಾರಿಕೆ ಇಲಾಖೆ ವತಿಯಿಂದ 7 ಮಂದಿ ರೈತರಿಗೆ ಜೇನು ಪೆಟ್ಟಿಗೆ ಸೇರಿದಂತೆ ಯಂತ್ರೋಪಕರಣ, ಅಂಕೋಲಾ ಪುರಸಭೆಯಿಂದ ವಿಶೇಷಚೇತನರು ಸೇರಿದಂತೆ 14 ಮಂದಿಗೆ ವಿವಿಧ ಉಪಕರಣ ವಿತರಣೆ, ಜಿಪಂನಿಂದ ಜಾಬ್ ಕಾರ್ಡ್ ವಿತರಣೆ ಜಿಲ್ಲೆಯಲ್ಲಿ ಹೊಸದಾಗಿ 59 ಪಡಿತರ ಅಂಗಡಿ ತೆರೆಯುವ ಅಧಿಸೂಚನೆ ಹೊರಡಿಸಲಾಯಿತು. ಪ್ರಮುಖ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆದು ಇಲಾಖಾ ಸೌಲಭ್ಯಗಳ ಬಗ್ಗೆ ಮತ್ತು ಅರಿವು ಮೂಡಿಸಲಾಯಿತು. ಆಧಾರ್ ನೋಂದಣಿ, ಪಿಂಚಣಿ ಯೋಜನೆಗಳು ಸೇರಿದಂತೆ ಎಸ್.ಐ.ಆರ್ ಕುರಿತು ಕೂಡಾ ಜಾಗೃತಿ ಮೂಡಿಸಲಾಯಿತು.