ದೇವನಹಳ್ಳಿ: ಅವಸಾನದ ಅಂಚಿನಲ್ಲಿರುವ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು ಬಿಜೆಪಿ ಪಕ್ಷ ಪ್ರತಿ ಗ್ರಾಮದಲ್ಲೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿಗೆ ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ ಮುನಿಕೃಷ್ಣ ತಿಳಿಸಿದರು.

ತಾಲೂಕಿನ ಕುಂದಾಣ ಹೋಬಳಿ ಮುದ್ದನಾಯಕನಹಳ್ಳಿಯಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕಲೆಗಳ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಇತ್ತೀಚಿನ ಹೈಟೆಕ್ ಜೀವನದಲ್ಲಿ ಮಹಿಳೆಯರು ರಂಗೋಲಿ ಕಲೆಯನ್ನೇ ಮರೆಯುತ್ತಿದ್ದಾರೆ. ಅದನ್ನು ಅವರಿಗೆ ಮರು ನೆನಪಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಸೋಲು ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುವುದು ಮುಖ್ಯ ಎಂದರು.

ಬಿಜೆಪಿ ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒತ್ತಡ ಜೀವನದ ನಡುವೆ ಚಾಕ್‌ಪೀಸ್‌ನಲ್ಲಿ ರಂಗೋಲಿ ಬಿಡಿಸಿ ಹಳೆಯ ಕಲೆಗಳನ್ನು ಮರೆಯುತ್ತಿದ್ದಾರೆ. ಅವುಗಳನ್ನು ಅವರಿಗೆ ಮರು ನೆನೆಪಿಸುವ ಉದ್ದೇಶದಿಂದ ಬಿಜೆಪಿ ಪಕ್ಷ ರಂಗೋಲಿ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಕೆಲಸ. ಯುವ ಪೀಳಿಗೆಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ನಮ್ಮ ಕಲೆಗಳಿಗೆ ಮತ್ತಷ್ಟು ಮೆರುಗು ಬರಲಿದೆ. ಸ್ಥಳೀಯ ಕಲೆಗಳನ್ನು ಹೊರತರುವುದು ನಮ್ಮ ಕೆಲಸ. ಭಾರತದ ಪ್ರತಿ ಹಬ್ಬಕ್ಕೂ ಒಂದೊಂದು ಸಂಸ್ಕೃತಿ ಇದೆ. ಅವುಗಳನ್ನು ನಾವು ಮರೆತು ತಿಂಡಿ ತಿನಿಸುಗಳತ್ತ ಗಮನ ಹರಿಸುತ್ತಿದ್ದೇವೆಯೇ ಹೊರತು ಆ ಹಬ್ಬಗಳ ವೈಶಿಷ್ಟ್ಯವನ್ನು ಪಾಲಿಸುತ್ತಿಲ್ಲ. ಹಾಗಾಗಿ ಯುವ ಪೀಳಿಗೆ ಪ್ರತಿ ಹಬ್ಬಗಳ ವೈಶಿಷ್ಠ್ಯವನ್ನು ಅರಿತು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಕುಪ್ಪಸ ವಿತರಿಸಿದರು. ಇದೆ ವೇಳೆ ಬಿಜೆಪಿ ಒಬಿಸಿ ಮೋರ್ಚ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಮುಖಂಡರಾದ ಒಬದೇನಹಳ್ಳಿ ಮುನಿಯಪ್ಪ, ದೇಸುನಾಗರಾಜ್, ಪ್ರಭು, ಆನಂದ್, ನಾಗೇಶ್, ಮುನಿಯಪ್ಪ, ಬಿ.ಟಿ.ಅನಿಲ್‌ಕುಮಾರ್, ಮಂಜುನಾಥ್, ನಾಗರಾಜ್, ಮುನೀಂದ್ರ, ಇಂಡ್ರಸನಹಳ್ಳಿ ಮಂಜು, ಆನಂದ್‌ಗೌಡ, ಪಿಳ್ಳೇಗೌಡ, ಅಶ್ವತ್ಥನಾರಾಯಣ್, ಕೇಶವ ಮಹಿಳಾಮೋರ್ಚ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಯಶೋಧ, ತಾಲೂಕು ಮನ್‌ಕಿ ಬಾತ್ ಸಹ ಸಂಚಾಲಕ ದಿವ್ಯಶ್ರೀ, ವಿಜಯಪುರ ಹೋಬಳಿಉಪಾಧ್ಯಕ್ಷೆ ತಾಯಮ್ಮ, ಭಾಗ್ಯಮ್ಮ ಪ್ರೇಮಮ್ಮ, ಮುದ್ದನಾಯಕನಹಳ್ಳಿ ಮಹಿಳೆಯರು ಉಪಸ್ಥಿತರಿದ್ದರು.

೦೧ ದೇವನಹಳ್ಳಿ ಚಿತ್ರಸುದ್ದಿ: ೦೧


ದೇವನಹಳ್ಳಿ ತಾಲೂಕಿನ ಮುದ್ದನಾಯಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ವೇದಿಕೆ ಕಾರ್ಯಕ್ರಮವನ್ನು ಬಿಜೆಪಿ ತಾಲೂಕು ಅಧ್ಯಕ್ಷ ಮುನಿಕೃಷ್ಣ ಉದ್ಘಾಟಿಸಿದರು.