ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಇಂದು ದೇವರ ಅಸ್ತಿತ್ವ ಕುರಿತು ಪ್ರಶ್ನಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದಕ್ಕೆ ೧೨ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮರ್ಪಕವಾದ ಉತ್ತರ ನೀಡಿದ್ದಾರೆಂದು ಆನಂದಪುರಂ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಆಶೀವರ್ಚನ ನೀಡಿದರು.
ದೇವರು ಬೇರೆ ಎಲ್ಲಿಯೂ ಇಲ್ಲ. ಯಾರಿಗೂ ದೇವರನ್ನು ಹುಡುಕುವ ಅವಶ್ಯಕತೆ ಇಲ್ಲ. ದೇವರು ನಮ್ಮಲ್ಲಿಯೇ ಇದ್ದು, ನಾವು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ಶರಣರು ೧೨ನೇ ಶತಮಾನದಲ್ಲಿಯೇ ತಿಳಿಸಿಕೊಟ್ಟಿದ್ದಾರೆ. ಇದನ್ನು ನಾವುಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂದು ಸಮಾಜದಲ್ಲಿ ಮೂಢನಂಬಿಕೆಗಳು, ಅಜ್ಞಾನಗಳು ಹಾಗು ಮೌಢ್ಯಗಳು ಹೆಚ್ಚಾಗುತ್ತಿದ್ದು, ಇದರಿಂದ ಹೊರಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು..ಈ ಹಿಂದೆ ಸಮಾಜದಲ್ಲಿ ಕಂಡು ಬರುತ್ತಿದ್ದ ಕಾಯಕಗಳು ಪ್ರಸ್ತುತ ಜಾತಿಗಳಾಗಿ ಸಮಾಜದಲ್ಲಿ ವಿಜೃಂಭಿಸಿ ಭೇದಭಾವ ಉಂಟುಮಾಡಿ ವಿಘಟನೆಗಳಿಗೆ ಮುಖ್ಯ ಕಾರಣವಾಗಿವೆ. ಇದರ ಪರಿಣಾಮ ಇಂದು ಎಲ್ಲಿ ನೋಡಿದರೂ ಅಶಾಂತಿ, ಸಂಘರ್ಷದ ವಾತಾವರಣ ಉಂಟಾಗಿ ನೆಮ್ಮದಿ ಜೀವನ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು
ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಗೌರವಿಸಿ ರಾಜ್ಯದ ರಾಯಭಾರಿಯನ್ನಾಗಿ ಮಾಡಿ ಗೌರವಿಸಿದೆ. ನಾಯಕನೆಂದರೆ ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಮುಂದೆ ಸಾಗುವುದಾಗಿದೆ. ಪ್ರಸ್ತುತ ಸಮಾಜದಲ್ಲಿ ಇಂತಹ ನಾಯಕರ ಅವಶ್ಯಕತೆ ಇದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್, ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಬದುಕು ಆದರ್ಶಪ್ರಾಯವಾಗಿದೆ. ಬಸವಣ್ಣನವರ ಕುರಿತು ವಿಚಾರಧಾರೆಗಳು ನಿರಂತರವಾಗಿ ಎಲ್ಲೆಡೆ ತಲುಪುವಂತಾಗಲಿ. ಆ ಮೂಲಕ ಭವಿಷ್ಯದ ಸಮಾಜ ರೂಪುಗೊಳ್ಳಬೇಕೆಂದರು.
ಸಾಹಿತಿ ಡಾ. ಕುಮಾರ ಚಲ್ಯ ಉಪನ್ಯಾಸ ನಡೆಸಿಕೊಟ್ಟರು. ನೂತನ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿಶೇಷವಾಗಿ ಡಾ.ಧನಂಜಯ ಸರ್ಜಿ ಹಾಗು ಬಲ್ಕೀಶ್ ಬಾನುರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕದಳಿ ಮಹಿಳಾ ವೇದಿಕೆ ಸದಸ್ಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಕತ್ತಲಗೆರೆ ತಿಮ್ಮಪ್ಪ ಸ್ವಾಗತಿಸಿದರು. ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿ, ಮಲ್ಲಿಕಾಂಬ ವಿರುಪಾಕ್ಷಪ್ಪ ವಂದಿಸಿದರು.