ಬೆಳಗಾವಿ ಸಮಾವೇಶದ ಔಚಿತ್ಯದ ಪ್ರಶ್ನೆಗೆ ಅಲ್ಲೇ ಉತ್ತರ : ರಣದೀಪಸಿಂಗ್ ಸುರ್ಜೇವಾಲಾ

| Published : Jan 19 2025, 02:16 AM IST / Updated: Jan 19 2025, 01:28 PM IST

ಬೆಳಗಾವಿ ಸಮಾವೇಶದ ಔಚಿತ್ಯದ ಪ್ರಶ್ನೆಗೆ ಅಲ್ಲೇ ಉತ್ತರ : ರಣದೀಪಸಿಂಗ್ ಸುರ್ಜೇವಾಲಾ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘರ್ಷ ಹಾಗೂ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಬೃಹತ್ ಸಮಾವೇಶದ ಮೂಲಕ ದೇಶದ ಜನತೆಗೆ ತಿಳಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಲ್ಲದೇ, ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾರಂಭದ ಔಚಿತ್ಯದ ಬಗ್ಗೆ ಮುಂದಿನ ಪೀಳಿಗೆ ಕೇಳಬಹುದು. ಅವರ ಪ್ರಶ್ನೆಗೆ ಈ ಸಮಾವೇಶದ ಮೂಲಕ ಉತ್ತರ ನೀಡಲಾಗುತ್ತಿದೆ.

ಹುಬ್ಬಳ್ಳಿ:  ಬಹಳಷ್ಟು ಸಂಘರ್ಷ ಹಾಗೂ ನೂರಾರು ವರ್ಷದ ಹೋರಾಟದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬೆಳಗಾವಿಯಲ್ಲಿ ನಡೆಯುವ ಸಮಾವೇಶದ ಮೂಲಕ ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಕೆಪಿಸಿಸಿ ನೇತೃತ್ವದಲ್ಲಿ ಜ. 21ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಂಘರ್ಷ ಹಾಗೂ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಬೃಹತ್ ಸಮಾವೇಶದ ಮೂಲಕ ದೇಶದ ಜನತೆಗೆ ತಿಳಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಲ್ಲದೇ, ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾರಂಭದ ಔಚಿತ್ಯದ ಬಗ್ಗೆ ಮುಂದಿನ ಪೀಳಿಗೆ ಕೇಳಬಹುದು. ಅವರ ಪ್ರಶ್ನೆಗೆ ಈ ಸಮಾವೇಶದ ಮೂಲಕ ಉತ್ತರ ನೀಡಲಾಗುತ್ತಿದೆ. ಹೀಗಾಗಿ ಇಂತಹ ಹತ್ತು ಹಲವು ಅಂಶಗಳ ಬಗ್ಗೆ ಸಮಾವೇಶದಲ್ಲಿ ಬೆಳಕು ಚೆಲ್ಲಲಾಗುವುದು ಎಂದರು.

ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್ ವಿಚಾರಧಾರೆ ಹಾಗೂ ಸಂವಿಧಾನ ರಕ್ಷಿಸಬೇಕಾದ ಸಂಸತ್ತಿನಲ್ಲಿಯೇ ಅಂಬೇಡ್ಕರ್‌ಗೆ ಗೃಹ ಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ. ಇದು ಅವರ ವಿಚಾರಧಾರೆ ಮತ್ತು ಅವುಗಳನ್ನು ಒಪ್ಪಿಕೊಂಡು ಜೀವನ ಮುನ್ನಡೆಸುತ್ತಿರುವವರಿಗೆ ಮಾಡಿದ ಅಪಮಾನ. ಬಿಜೆಪಿ ಅಪಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಬಿಜೆಪಿ ಡಿಎನ್‌ಎನಲ್ಲಿಯೇ ಇದು ಬಂದಿದೆ. ಹೀಗಾಗಿಯೇ ಸಂವಿಧಾನ, ಅಂಬೇಡ್ಕರ್ ಅವರನ್ನು ಬಿಜೆಪಿ, ಆರ್‌ಎಸ್‌ಎಸ್ ಒಪ್ಪಿಕೊಂಡಿಲ್ಲ ಎಂದು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿ, ಕುರಾನ್, ಬೈಬಲ್, ಭಗವದ್ಗೀತೆ ಹೇಗೆ ನಮ್ಮ ಧರ್ಮಗ್ರಂಥವಾಗಿಯೋ ಅದೇ ರೀತಿ ಸಂವಿಧಾನ ನಮ್ಮ ಗ್ರಂಥವಾಗಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಪಕ್ಷದ ಸಮಾರಂಭ ಅಲ್ಲ, ಇದು ದೇಶ ಮತ್ತು ಗಾಂಧಿ ಭಾರತ ಕಾರ್ಯಕ್ರಮ ಎಂದರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ನಡೆಯಲಿರುವ ಸಮಾವೇಶ ಜಾಗತಿಕ ಸಮಾರಂಭದಂತೆ ನೆರವೇರಿಸಲು ತೀರ್ಮಾನಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈ ಕರ್ನಾಟಕದ ಭಾಗದ ಜನರಿಗೆ ದೊಡ್ಡ ಅವಕಾಶವಿದೆ. ಈ ಸಮಾವೇಶ 2028ರ ವರೆಗೂ ನೆನಪಿರಬೇಕು. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೀರ್ತಿ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದ ಪಕ್ಷಕ್ಕೆ ದೊಡ್ಡ ಬಲ ನೀಡಲಿದೆ ಎಂದರು.

ಸಭೆಯಲ್ಲಿ ಸಚಿವರಾದ ಸಂತೋಷ ಲಾಡ್, ಶಿವಾನಂದ ಪಾಟೀಲ, ಶಾಸಕರಾದ ಜಿ.ಎಸ್. ಪಾಟೀಲ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಿವಲೀಲಾ ಕುಲಕರ್ಣಿ, ವಿನೋದ ಅಸೂಟಿ, ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಪ್ರಕಾಶಗೌಡ ಪಾಟೀಲ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಸಂಜೀವ ನೀರಲಗಿ ಇತರರು ಇದ್ದರು.

1 ಲಕ್ಷ ಬ್ಯಾಡ್ಜ್‌ ಖರೀದಿ

ರಾಷ್ಟ್ರಧ್ವಜ ತಯಾರಿಸುವ ಹುಬ್ಬಳ್ಳಿ ಮಾತ್ರವಲ್ಲ, ಈ ಕಾರ್ಯಕ್ರಮಕ್ಕೆ ಅಖಂಡ ಧಾರವಾಡ, ಉತ್ತರ ಕನ್ನಡ ಹಾಗೂ ಕಿತ್ತೂರ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾದಿ ಕೇಂದ್ರದಲ್ಲಿ 50 ಸಾವಿರ ಗಾಂಧಿ ಟೋಪಿ, 1 ಲಕ್ಷ ಬ್ಯಾಡ್ಜ್ ಖರೀದಿಸಲಾಗಿದೆ. ಸಮಾವೇಶದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಶಿವಕುಮಾರ ಹೇಳಿದರು.

ಇಂದಿಗೂ ಹೋರಾಟ : ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ. ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಜ. 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧೀಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ ಎಂದರು.