ಶಿವನ ಪರಂಪರೆ ಅತ್ಯಂತ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ಕುಟುಂಬದಲ್ಲೂ ಶಿವನಲ್ಲಿರುವ ಗುಣಗಳು ಹಾಗೂ ಸಂಬಂಧಗಳು ಇರಬೇಕು. ಕೈಲಾಸದಲ್ಲಿ ಶಿವ ಗಟ್ಟಿಯಾಗಿ ಇರುವುದರಿಂದ ಎಲ್ಲವೂ ಸರಿಹೋಗುತ್ತದೆ ಎಂದು ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
- ಶ್ರೀ ಬಸವೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ಸಭೆ
- - -ಕನ್ನಡಪ್ರಭ ವಾರ್ತೆ ಜಗಳೂರು
ಶಿವನ ಪರಂಪರೆ ಅತ್ಯಂತ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ಕುಟುಂಬದಲ್ಲೂ ಶಿವನಲ್ಲಿರುವ ಗುಣಗಳು ಹಾಗೂ ಸಂಬಂಧಗಳು ಇರಬೇಕು. ಕೈಲಾಸದಲ್ಲಿ ಶಿವ ಗಟ್ಟಿಯಾಗಿ ಇರುವುದರಿಂದ ಎಲ್ಲವೂ ಸರಿಹೋಗುತ್ತದೆ ಎಂದು ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭೂಲೋಕದಲ್ಲಿ ದ್ವೇಷ, ಅಸೂಯೆ, ಕೋಪ ಹಾಗೂ ಪಾಪದ ಕಾರ್ಯಗಳು ಹೆಚ್ಚಾಗಿವೆ. ಜಗತ್ತಿನಲ್ಲಿ ‘ನಾನು ಸಂಪೂರ್ಣ ಸುಖಿ’ ಎಂದು ಯಾರೂ ಹೇಳಲಾಗುವುದಿಲ್ಲ. ಜನರ ಮನಸ್ಥಿತಿ ಬದಲಾಗಬೇಕಾಗಿದೆ. ಪ್ರತಿಯೊಬ್ಬರಿಗೂ ಕಷ್ಟವಿದೆ. ಇರುವೆ ಭಾರ ಇರುವೆಗೆ, ಆನೆ ಭಾರ ಆನೆಗೆ. ಜಗತ್ತಿನಲ್ಲಿ ಯಾರೂ ಶಾಶ್ವತವಲ್ಲ. ಕೋವಿಡ್ ಸಮಯದಲ್ಲಿ ಅನೇಕರು ಕಣ್ಮರೆಯಾಗಿದ್ದನ್ನು ಕಂಡಿದ್ದೇವೆ. ಮರಣ ಯಾವಾಗ ಬರುತ್ತದೆ ಎಂದು ತಿಳಿಯದು. ಜೀವವಿರುವಷ್ಟು ಕಾಲ ಒಳ್ಳೆಯದನ್ನು ಮಾಡೋಣ ಎಂದರು.ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಕೆಳಗೋಟೆ ಗ್ರಾಮಸ್ಥರು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದರು. ದಾರಿಯುದ್ದಕ್ಕೂ ಹೂವು ತೂರಿ, ನೀರೆರೆದು ಭಕ್ತಿ ಸಮರ್ಪಿಸಲಾಯಿತು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ, ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶ್ರೀಗಳು, ಮಾರ್ಗಮಧ್ಯೆ ಶ್ರೀ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿ, ನಂತರ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಹೋಮ ಹವನ ಹಾಗೂ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಗ್ರಾಮದ ಮುಖಂಡರಾದ ಗೌಡ್ರು ಗುರುಸಿದ್ದಪ್ಪ, ವಕೀಲ ಸಂಘದ ಅಧ್ಯಕ್ಷ ಡಿ.ವಿ. ನಾಗಪ್ಪ, ನಲ್ಲಿಕಟ್ಟೆ ನಾಗಣ್ಣ, ಚನ್ನಬಸಪ್ಪ, ಗುರುಮೂರ್ತಪ್ಪ, ಕಲವರ್ ರಾಜಣ್ಣ, ಶಿಕ್ಷಕ ಕಲ್ಲೇಶ್, ಗೌಡ್ರು ಬಸವರಾಜ್, ಗೌಡ್ರು ಪ್ರಕಾಶ್, ಅಹಮದ್ ಅಲಿ, ಬಸವನಗೌಡ, ಎಂ.ಪಿ. ನಾಗರಾಜ್, ಚಿಂತಪ್ಪ, ಯಲ್ಲಪ್ಪ, ಚಂದ್ರಪ್ಪ, ಮಡಿವಾಳ ಚೌಡಪ್ಪ, ರವಿಕುಮಾರ್, ಅಂಚೇರ್ ಮಹೇಶ್, ಭಕ್ತರು ಉಪಸ್ಥಿತರಿದ್ದರು.
- - -(ಟಾಪ್ ಕೋಟ್) ಕೆಳಗೋಟೆ ಗ್ರಾಮವು ಕಣ್ವಕುಪ್ಪೆ ಗವಿಮಠದ ಹೆಬ್ಬಾಗಿಲಿದ್ದಂತೆ. ಮಠ ಹುಟ್ಟಿದಾಗಿನಿಂದಲೂ ಈ ಗ್ರಾಮದ ಭಕ್ತರೊಂದಿಗೆ ಅವಿನಾಭಾವ ಸಂಬಂಧವಿದೆ. ಸಂಕ್ರಾಂತಿ ರಥೋತ್ಸವದ ತೇರಿನ ಗಾಲಿಗಳಿಗೆ ಎಣ್ಣೆ ಹಾಕುವುದು ಹಾಗೂ ಒಂದು ಗಾಲಿಯ ಸೇವೆಯನ್ನು ಕೆಳಗೋಟೆ ಗ್ರಾಮಕ್ಕೆ ಮೀಸಲಿಡಲಾಗಿದೆ. ಇಲ್ಲಿನ ಭಕ್ತರು ಇಂದಿಗೂ ಆ ಶ್ರದ್ಧೆ ಉಳಿಸಿಕೊಂಡು ಬಂದಿದ್ದಾರೆ.
- ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಕಣ್ವಕುಪ್ಪೆ ಗವಿ ಮಠ.- - -
-17ಜೆ.ಜಿ.ಎಲ್.1: ಕಾರ್ಯಕ್ರಮದಲ್ಲಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ ಮಾತನಾಡಿದರು.