ಉದ್ಯಮವಾಗಿ ಬದಲಾದ ಕಸೂತಿ ಕಲೆ

| Published : Jun 14 2024, 01:06 AM IST

ಸಾರಾಂಶ

ರಾಮನಗರ: ಕಸೂತಿ ಕೇವಲ ಮನೆಯಲ್ಲಿ ಕುಳಿತು ಕೆಲಸವಿಲ್ಲದ ವೇಳೆ ಮಾಡುವ ಕಲೆಯಲ್ಲ. ಬದಲಾಗಿ ಅದೊಂದು ಉದ್ಯಮವಾಗಿ ಬದಲಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಹೇಳಿದರು.

ರಾಮನಗರ: ಕಸೂತಿ ಕೇವಲ ಮನೆಯಲ್ಲಿ ಕುಳಿತು ಕೆಲಸವಿಲ್ಲದ ವೇಳೆ ಮಾಡುವ ಕಲೆಯಲ್ಲ. ಬದಲಾಗಿ ಅದೊಂದು ಉದ್ಯಮವಾಗಿ ಬದಲಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಹೇಳಿದರು.

ನಗರದ ವಿವೇಕಾನಂದನಗರದಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೆಬಲ್ಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಸೂತಿ ತರಬೇತಿ ಪ್ರಮಾಣ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಕಸೂತಿ ಕಲೆಗೆ ಸಾಕಷ್ಟು ಶ್ರದ್ಧೆ, ಗಮನವಿದ್ದರೆ ಮಾತ್ರ ಅದರಲ್ಲಿ ಪರಿಣತರಾಗಲು ಸಾಧ್ಯ. ಮಹಿಳೆಯರು ಮನೆಯಿಂದ ಹೊರಬಂದು ಕೆಲಸ ಮಾಡಬಾರದೆಂಬ ಒಂದು ಕಾಲಘಟ್ಟದಲ್ಲಿ ಕಸೂತಿ ಕಲೆಯೂ ಆದಾಯದ ದೊಡ್ಡ ಮಾರ್ಗವಾಗಿತ್ತು. ಬಟ್ಟೆ ಮೇಲೆ ಕೈಯಲ್ಲಿ ನೂಲಿನಿಂದ ವಿವಿಧ ಚಿತ್ತಾರ ಬಿಡಿಸುವುದೇ ಕಸೂತಿಯ ವಿಶೇಷತೆಯಾಗಿದೆ ಎಂದರು.

ಇಂದು ಉಡುಪುಗಳು ಕೇವಲ ಧರಿಸುವುದಕ್ಕೆ ಮಾತ್ರವಲ್ಲ. ಅದೊಂದು ಟ್ರೆಂಡ್‌ ಆಗಿದೆ. ಉಡುಪಿನಲ್ಲಿ ಏನೇನು ವಿಶೇಷತೆ ಮಾಡಬಹುದೆಂದು ಎಲ್ಲರೂ ಆಲೋಚಿಸುತ್ತಾರೆ. ಸರಳ ಉಡುಗೆಗಳಲ್ಲಿ ಸ್ವಲ್ಪ ಆಡಂಬರದ ಕಸೂತಿ ಹಾಕುವುದು ಇಂದಿನ ಲೇಟೆಸ್ಟ್‌ ಟ್ರೆಂಡ್‌ಗಳಲ್ಲಿ ಒಂದು ಎಂದು ಹೇಳಿದರು.

ಅದು ಪುರುಷರ ಶರ್ಟ್‌ನಿಂದ ಹಿಡಿದು ಮಹಿಳೆಯರ ಬ್ಲೌಸ್‌ವರೆಗೆ ಎಲ್ಲದರಲ್ಲಿಯೂ ಹಾಕಲ್ಪಡುತ್ತದೆ. ಹೀಗೆ ಕಸೂತಿ ಹಾಕುವುದು ಇಂದು ಉದ್ಯಮವಾಗಿದೆ. ಸಾಲು, ಸಾಲು ಅವಕಾಶಗಳು ಕಸೂತಿ ಕ್ಷೇತ್ರದಲ್ಲಿವೆ. ಚಿತ್ರ, ವಿನ್ಯಾಸಗಳಲ್ಲಿ ಆಸಕ್ತಿ ಇರುವ ಯಾರಿಗೂ ಕಸೂತಿ ಕಲೆಯನ್ನು ಉದ್ಯಮವಾಗಿ ಮಾಡಬಹುದು ಎಂದು ತಿಳಿಸಿದರು.

ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೆಬಲ್ಸ್ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮಾತನಾಡಿ, ಉತ್ತಮ ವಿದ್ಯಾರ್ಹತೆ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದೆಂಬ ಕಲ್ಪನೆ ಎಲ್ಲರಿಗೂ ಇದೆ. ಹೆಚ್ಚು ಕಲಿತರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರು ಮಾತ್ರ ಜೀವನ ರೂಪಿಸುತ್ತಾರೆಂದು ತಪ್ಪು ತಿಳಿದಿರುವ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಹೆಚ್ಚು ಓದುವಂತೆ ಒತ್ತಡ ಹೇರುತ್ತಾರೆ. ಅದರ ಬದಲಾಗಿ ಮಕ್ಕಳ ಇತರ ಆಸಕ್ತಿಗಳನ್ನು ಪ್ರೋತ್ಸಾಹಿಸಿದರೆ ಅವರೂ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಎಂದರು.

ಅಥರ್ವ ಅಕಾಡೆಮಿಯ ತರಬೇತುದಾರರಾದ ಎಸ್.ಗೀತಾ ಮಾತನಾಡಿ, ಕಸೂತಿಯನ್ನು ಉದ್ಯೋಗವಾಗಿ ಆಯ್ದುಕೊಳ್ಳುವವರಿಗೆ ಎರಡು ವಿಧದ ಅವಕಾಶಗಳಿವೆ. ಅರೆಕಾಲಿಕ ಹಾಗೂ ಪೂರ್ಣಕಾಲಿಕವಾಗಿ ಇದನ್ನು ಆಯ್ದುಕೊಳ್ಳಬಹುದು. ಬೇರೆ ಉದ್ಯೋಗದಲ್ಲಿದ್ದು ಕಸೂತಿ ನಿಮ್ಮ ಪ್ಯಾಶನ್‌ ಆಗಿದ್ದರೆ ಇದನ್ನೊಂದು ಅರೆಕಾಲಿಕ ಉದ್ಯೋಗವಾಗಿ ಆಯ್ದುಕೊಳ್ಳಬಹುದು ಎಂದರು.

ವಿದ್ಯಾಭ್ಯಾಸದ ನಡುವೆ ಕಸೂತಿ ತರಬೇತಿ ಪಡೆದು ಶಿಕ್ಷಣದ ಜತೆಗೆ ಆದಾಯದ ಮಾರ್ಗವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಪಾಕೆಟ್‌ ಮನಿಯನ್ನು ನೀವೇ ತಯಾರಿಸಲು ಇದು ಸಹಕಾರಿ. ಪದವಿ ಮುಗಿಸಿ ಕಸೂತಿ ಕೋಚಿಂಗ್‌ ಪಡೆದು ಅದನ್ನು ಪೂರ್ಣಾಕಾಲಿಕ ಉದ್ಯೋಗವಾಗಿ ಆಯ್ದುಕೊಳ್ಳಬಹುದು. ಸ್ವತಃ ಉದ್ಯಮದಲ್ಲಿ ತೊಡಗುವ ಆಸಕ್ತ ಇರುವವರಿಗೂ ಇದು ಸಹಕಾರಿ. ಅಥವಾ ಪ್ರತಿಷ್ಠಿತ ಡಿಸೈನರ್‌ ಕಂಪೆನಿಗಳಲ್ಲಿ ಉದ್ಯೋಗ ಲಭಿಸುತ್ತದೆ ಎಂದು ತಿಳಿಸಿದರು.

ಟಯೋಡಾ ಗೋಸಾಯಿ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾನವ ಸಂಪನ್ಮೂಲ ಅಧಿಕಾರಿ ಪಿ.ಕೆ.ದಯಾನಂದ ಮಾತನಾಡಿ, ಹೊಲಿಗೆ ಕ್ಷೇತ್ರದಲ್ಲಿ ಸ್ವಉದ್ಯೋಗ ನಡೆಸುವವರು ಹೊಲಿಗೆ ಕೌಶಲ್ಯದ ಜೊತೆಗೆ ಕಸೂತಿ ಕಲೆಯ ಬಗ್ಗೆಯೂ ಪರಿಣಿತಿ ಹೊಂದಿದರೆ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು. ತರಬೇತುದಾರರಾದ ಎಚ್. ವನಿತಾ ಮತ್ತಿತರರು ಉಪಸ್ಥಿತರಿದ್ದರು. 13ಕೆಆರ್ ಎಂಎನ್ 3.ಜೆಪಿಜಿ

ಟಯೋಡಾ ಗೋಸಾಯಿ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಹಿಳೆಯರಿಗೆ ಕಸೂತಿ ತರಬೇತಿಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.