ಸಾರಾಂಶ
ನಮ್ಮ ಸಂಸ್ಕೃತಿಯಲ್ಲಿ ಕಲೆಗಳು ಹಾಸುಹೊಕ್ಕಾಗಿದ್ದು ಅದರಲ್ಲೂ ಗುರು ಪರಂಪರೆಯ ಕಲೆಗಳು ಅತ್ಯಂತ ಮಹತ್ವವಾದವು ಎಂದು ನಗರದ ದೀನ ಬಂಧು ಮಕ್ಳಳ ಮನೆಯ ಜಿ.ಎಸ್.ಜಯದೇವ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಮ್ಮ ಸಂಸ್ಕೃತಿಯಲ್ಲಿ ಕಲೆಗಳು ಹಾಸುಹೊಕ್ಕಾಗಿದ್ದು ಅದರಲ್ಲೂ ಗುರು ಪರಂಪರೆಯ ಕಲೆಗಳು ಅತ್ಯಂತ ಮಹತ್ವವಾದವು ಎಂದು ನಗರದ ದೀನ ಬಂಧು ಮಕ್ಳಳ ಮನೆಯ ಜಿ.ಎಸ್.ಜಯದೇವ್ ಹೇಳಿದರು.ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಮೈಸೂರಿನ ಭಾರತೀಯ ನೃತ್ಯ ಕಲಾ ಪರಿಷತ್ ಹಮ್ಮಿಕೊಂಡಿದ್ದ ಉಲ್ಲಾಸ ನರ್ತನ-೨೦೨೪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನನ್ನು ಹಿಂಸೆಯ ಚಿಂತನೆಯಿಂದ ಬಿಡುಗಡೆಗೊಳಿಸಿ, ತಾಳ್ಮೆ ಹಾಗೂ ಸಹಾನೂಭೂತಿಯಿಂದ ಇರುವಂತೆ ಮಾಡುವುದೇ ಕಲೆಗಳು ಎಂದರು.ಎಲ್ಲಿ ಕಲೆಗಳು ಪ್ರಜ್ವಲಿಸುತ್ತೆವೆಯೋ ಅಲ್ಲಿ ಹಿಂಸೆ ಇರುವುದಿಲ್ಲ, ಗುರು ಪರಂಪರೆಯ ಕಲೆಗಳಲ್ಲಿ ನೃತ್ಯವು ಕೂಡ ಒಂದು. ಇದು ಅಷ್ಟು ಸುಲಭವಾಗಿ ಕಲಿಯಲು ಸಾಧ್ಯವಿಲ್ಲ, ಅತ್ಯಂತ ತಾಳ್ಮೆ ಮತ್ತು ಜಾಣ್ಮೆ ಬೇಕು, ಇಂತಹ ಕಲೆಗಳು ಸಮಾಜದ ಚಿಂತನೆಯನ್ನು ಹೆಚ್ಚಿಸುತ್ತವೆ ಎಂದರು. ನಮ್ಮಲ್ಲಿ ಪ್ರತಭೆಗಳಿಗೇನು ಕೊರತೆಯಿಲ್ಲ, ಅವರಿಗೆ ವೇದಿಕೆ ಬೇಕು, ಈ ನಿಟ್ಟಿನಲ್ಲಿ ಮೈಸೂರಿನ ಭಾರತೀಯ ನೃತ್ಯ ಕಲಾ ಪರಿಷತ್ ತನ್ನನ್ನು ತೊಡಗಿಸಿಕೊಂಡು ಹಲವಾರು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಹೆಮ್ಮೆಯ ವಿಷಯ ಎಂದರು.ಕಲೆ ಒಂದು ದೈವಿಕಲೆ, ಪ್ರತಿಭೆಯ ಜೊತೆಗೆ ಮನೋರಂಜನೆ ಮತ್ತು ಶಿಸ್ತನ್ನು ಕಲಿಸುತ್ತದೆ, ಇಂತಹ ಕಲೆಗಳನ್ನು ಜನರು ದುಡ್ಡು ಕೊಟ್ಟು ನೋಡಲು ಬರುವುದಿಲ್ಲ, ಆದ್ದರಿಂದ ಭಾರತೀಯ ನೃತ್ಯ ಕಲಾ ಪರಿಷತ್‌ನಂತಹ ಕಲಾ ಶಾಲೆಗಳು ಹೆಚ್ಚು ಹೆಚ್ಚು ಮುಂದೆ ಬಂದು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಾಗ ನಮ್ಮ ಸಂಸ್ಕೃತಿ ಮತ್ತು ಕಲೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು. ಭಾರತೀಯ ನೃತ್ಯ ಕಲಾ ಪರಿಷತ್ ಕಾರ್ಯದರ್ಶಿ ವಿದೂಷಿ ಡಾ.ಕುಮುದಿನಿ ಅಚ್ಚಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ನೃತ್ಯ ಕಲಾ ಪರಿಷತ್ ಮೈಸೂರಿಗೆ ಸೀಮಿತವಾಗಬಾರದು. ಇದು ವಿಸ್ತಾರಗೊಂಡು ಹಲವು ಪ್ರತಿಭೆಗಳಿಗೆ ವೇದಿಕೆಯಾಗಬೇಕೆಂಬ ದೃಷ್ಟಿಯಿಂದ ಐದು ಜಿಲ್ಲೆಗಳಿಗೆ ವಿಸ್ತರಿಸಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಇನ್ನು ಮುಂದೆ ಉಲ್ಲಾಸ ನರ್ತನ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ಭಾರತೀಯ ನೃತ್ಯ ಕಲಾ ಪರಿಷತ್‌ನ ಅಧ್ಯಕ್ಷ ವಿದೂಷಿ ಉಷಾ ವೇಣುಗೋಪಾಲ್ ಮೂಲತಃ ಚಾಮರಾಜನಗರದವರು ಹಿಂದೆ ಇಲ್ಲಿ ನೃತ್ಯ ಶಾಲೆ ಸ್ಥಾಪಿಸಿದ್ದರು, ನೃತ್ಯ ಕಲೆಯ ಜೊತೆಗೆ ನಾಟಕಗಳನ್ನು ನಿರ್ದೇಶಿಸುತ್ತಿದ್ದರು, ಇವರು ನಮ್ಮ ಶಾಂತಲಾ ಕಲಾವಿದರ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ, ಅದಕ್ಕಾಗಿಯೇ ಇವರ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ರಾಹಾಂ ಡಿ ಸಿಲ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಗರದ ನಾಟ್ಯ ಸರಸ್ವತಿ ನೃತ್ಯ ಶಾಲೆಯ ಅಕ್ಷತ ಜೈನ್ ನಿರೂಪಿಸಿ ವಂದಿಸಿದರು. ವಿವಿದ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.