ಮಹಾಬಲ ಹೆಗಡೆಯವರಿಗೆ ಯಕ್ಷಗಾನದ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನ ಇದೆಯಾದರೂ, ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿಯೂ ಅಪಾರ ಜ್ಞಾನವನ್ನು ಸಂಪಾದಿಸಿದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಬರುವ ಮಹನೀಯರಾಗಿದ್ದಾರೆ.
ಹೊನ್ನಾವರ: ಯಕ್ಷಗಾನದಲ್ಲಿ ನಟನಿಗೆ ಭಾವಸ್ಫೂರ್ತಿ, ನೃತ್ಯ ಪ್ರಚೋದನೆ ಮತ್ತು ಶಾಸ್ತ್ರೀಯ ರಂಗಪ್ರಜ್ಞೆ ನೀಡುವ ನಿಯಂತ್ರಕ ಶಕ್ತಿಯೇ ಭಾಗವತನ ಸಂಗೀತದ ಲಯ ಜ್ಞಾನ ಎಂದು ಯಕ್ಷಗಾನ ಸಾಹಿತ್ಯ ತಜ್ಞ ವಿಮರ್ಶಕ ಡಾ. ಸಿ. ಆನಂದರಾಮ ಉಪಾಧ್ಯ ಅಭಿಪ್ರಾಯಪಟ್ಟರು.ಗುಣವಂತೆ ಡಾ. ಕೆರೆಮನೆ ಮಹಾಬಲ ಹೆಗಡೆ ರಂಗ ಪ್ರತಿಷ್ಠಾನ ಆಯೋಜಿಸಿದ್ದ ಮಹಾಬಲ ಹೆಗಡೆ ಮತ್ತು ರಾಮ ಹೆಗಡೆ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಧೋರಣೆ ಉಳ್ಳ ಸುಧಾರಣೆ ಯಕ್ಷಗಾನ ಕಲೆ ಆಗಬೇಕು ಎನ್ನುವ ಮಹಾಬಲ ಹೆಗಡೆಯವರ ಅಭಿಪ್ರಾಯವನ್ನು ಮಂಡಿಸುತ್ತಾ ಪ್ರಸ್ತುತ ಯಕ್ಷಗಾನದ ರಂಗಸ್ಥಳ, ಬೆಳಕು, ಧ್ವನಿವರ್ಧಕ, ವಸ್ತ್ರ ವಿನ್ಯಾಸ ಮತ್ತು ಕುಣಿತದ ರೀತಿ ನೀತಿಗಳಲ್ಲಿ ಬದಲಾವಣೆಯ ಪರ್ವವನ್ನು ಅನುಭವಿಸುತ್ತಿದ್ದೇವೆಯಾದರೂ ಪರಂಪರೆಯ ಚೌಕಟ್ಟು ಮೀರುತ್ತಿರುವ ಅಪಾಯವನ್ನು ಸೂಚ್ಯವಾಗಿ ತಿಳಿಸಿದರು.ಪ್ರಖ್ಯಾತ ಹಿಂದುಸ್ತಾನಿ ಗಾಯಕರಾದ ಪಂಡಿತ ಗಣಪತಿ ಭಟ್ಟ ಹಾಸಣಗಿ ಅವರಿಗೆ ಮಹಾಬಲ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮಹಾಬಲ ಹೆಗಡೆಯವರಿಗೆ ಯಕ್ಷಗಾನದ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನ ಇದೆಯಾದರೂ, ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿಯೂ ಅಪಾರ ಜ್ಞಾನವನ್ನು ಸಂಪಾದಿಸಿದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಬರುವ ಮಹನೀಯರಾಗಿದ್ದಾರೆ ಎಂದರು.
ಖ್ಯಾತ ತಬಲಾ ವಾದಕರಾದ ಪಂಡಿತ್ ಗೋಪಾಲಕೃಷ್ಣ ಹೆಗಡೆ, ಕಲ್ಭಾಗ ಅವರು ಅಭಿನಂದನಾ ನುಡಿಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಡಾ. ಮಹಾಬಲ ಹೆಗಡೆಯವರ ಯಶಸ್ಸಿನ ಹೆಜ್ಜೆಗಳ ಬದ್ಧತೆಯನ್ನು, ಅವರು ತೋರಿಸಿಕೊಟ್ಟ ಸಿದ್ಧಾಂತಗಳನ್ನು ಮತ್ತು ಯಕ್ಷಗಾನದ ಪಾತ್ರ ಚಿತ್ರಣಗಳ ಬಗ್ಗೆ ವಿವರಿಸಿದರು.
ಶಂಭುಲಿಂಗೇಶ್ವರ ದೇವಾಲಯದ ಅಧ್ಯಕ್ಷ ಡಾ. ನರಸಿಂಮೂರ್ತಿ ಪಂಡಿತ ಮಾತನಾಡಿದರು. ಎನ್.ಜಿ. ಭಟ್ಟ, ಮಾಳ್ಕೋಡ ಸನ್ಮಾನ ಪತ್ರ ವಾಚಿಸಿದರು. ಭಾಗವತ ಗಣೇಶ ಯಾಜಿ, ಮಾವಿನಕೆರೆ ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.ಶಶಾಂಕ ಹೆಗಡೆ ಪ್ರಸ್ತಾವಿಕ ನುಡಿ ಗೈದು ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷೆ ನಾಗವೇಣಿ ಹೆಗಡೆ, ಕೆರೆಮನೆ ಮತ್ತು ಪಂ. ಪರಮೇಶ್ವರ ಹೆಗಡೆ, ಕಲ್ಭಾಗ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಎಲ್.ಎಂ. ಹೆಗಡೆ, ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ''''ಕೀಚಕ ವಧೆ'''' ಯಕ್ಷಗಾನ ಪ್ರದರ್ಶನ ನಡೆಯಿತು.