ಕೃತಕ ಬುದ್ಧಿಮತ್ತೆ ಕ್ರಾಂತಿ ಅಲಕ್ಷಿಸುವಂತಿಲ್ಲ: ಡಾ.ರಂಗಸ್ವಾಮಿ

| Published : May 21 2024, 12:30 AM IST

ಕೃತಕ ಬುದ್ಧಿಮತ್ತೆ ಕ್ರಾಂತಿ ಅಲಕ್ಷಿಸುವಂತಿಲ್ಲ: ಡಾ.ರಂಗಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವ್ಯಾಪಿ ಕೃತಕ ಬುದ್ಧಿಮತ್ತೆಯೇ ಈಗ ಬಹುಚರ್ಚಿತ ವಿಷಯವಾಗಿದೆ. ಕೃತಕ ಬುದ್ಧಿಮತ್ತೆಯ ಕ್ರಾಂತಿಯನ್ನು ಯಾರೂ ಅಲಕ್ಷಿಸುವಂತಿಲ್ಲ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ.ಇ.ರಂಗಸ್ವಾಮಿ ಅಭಿಪ್ರಾಯಪಟ್ಟರು.

- ರಾಜ್ಯಮಟ್ಟದ ವಿಚಾರ ಸಂಕಿರಣ । 2027ರ ಹೊತ್ತಿಗೆ ದೇಶದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ₹17 ಬಿಲಿಯನ್‌ ಹೂಡಿಕೆ ನಿರೀಕ್ಷೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವವ್ಯಾಪಿ ಕೃತಕ ಬುದ್ಧಿಮತ್ತೆಯೇ ಈಗ ಬಹುಚರ್ಚಿತ ವಿಷಯವಾಗಿದೆ. ಕೃತಕ ಬುದ್ಧಿಮತ್ತೆಯ ಕ್ರಾಂತಿಯನ್ನು ಯಾರೂ ಅಲಕ್ಷಿಸುವಂತಿಲ್ಲ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ.ಇ.ರಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಾಣಿಜ್ಯ ವಿಭಾಗ ಹಮ್ಮಿಕೊಂಡಿದ್ದ ಪ್ರಜ್ಞಾ 3.0 ಕೃತಕ ಬುದ್ಧಿಮತ್ತೆ ಉದ್ಭವ ಹಾಗೂ ಅವಕಾಶಗಳ ರೂಪಾಂತರ ವಿಷಯವಾಗಿ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 2027ರ ವೇಳೆಗೆ ದೇಶದ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ₹17 ಬಿಲಿಯನ್‌ ಹೂಡಿಕೆ ಯೋಜನೆಗಳ ನಿರೀಕ್ಷೆ ಇದೆ ಎಂದರು.

ಕೆಲ ವಿಜ್ಞಾನಿಗಳು 1956ರಲ್ಲೇ ಸಭೆ ಮಾಡಿ, ಯಂತ್ರಗಳೇ ಮಾನವರಂತೆ ಕಾರ್ಯಗೈಯ್ಯುವ ಕೃತಕ ಬುದ್ಧಿಮತ್ತೆಯ ಅನ್ವೇಷಣೆ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದರು. ಈಗ ಆರೇಳು ದಶಕಗಳ ನಂತರ ಅದೆಲ್ಲವೂ ಅನುಷ್ಠಾನಕ್ಕೆ ಬರುತ್ತಿದೆ. ಪರಿಣಾಮ ಮಾನವ ಉದ್ಯೋಗಕ್ಕೆ ಸಂಚಕಾರ ಬರುತ್ತಿದೆಯೆಂಬ ಆತಂಕವಿದೆ. ಆದರೂ, ಅದನ್ನೇ ಬಳಸಿಕೊಂಡು, ಹೊಸ ಆವಿಷ್ಕಾರಗಳ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶವೂ ಇದೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ನಮ್ಮ ದೇಶದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸುಮಾರು 4.5 ಲಕ್ಷಕ್ಕೂ ಅಧಿಕ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುವಂತಾಗಬಹುದು. ವಿಶ್ವದಲ್ಲಿ ಕೃತಕ ಬುದ್ಧಿಮತ್ತೆ ಕುರಿತಂತೆ 41 ಲಕ್ಷ ಪ್ರಕಟಣೆಗಳು ಹೊರಬಂದಿದ್ದರೆ, ಭಾರತವೊಂದರಿಂದಲೇ 13 ಲಕ್ಷ ಪ್ರಕಟಣೆ ಹೊರಬಂದಿವೆ. ವೈದ್ಯಕೀಯ, ಕೈಗಾರಿಕೋದ್ಯಮ, ಕೃಷಿ, ಹೋಟೆಲ್‌ ಸೇರಿದಂತೆ ಅಡುಗೆ ಮನೆಯೊಳಗೂ ಕೃತಕ ಬುದ್ಧಿಮತ್ತೆಯ ಉಪಯೋಗ ಬರುವ ಕಾಲ ಸನ್ನಿಹಿತವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಇದರ ಬಳಕೆ ಶುರುವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಧ್ಯಕ್ಷ ಅಥಣಿ ಎಸ್.ವೀರಣ್ಣ ಮಾತನಾಡಿ, ಮುಂಬರುವ ವರ್ಷದ ವೇಳೆಗೆ ಕೃತಕ ಬುದ್ಧಿಮತ್ತೆಯು ಶಿಕ್ಷಣದಲ್ಲೂ ಪ್ರಧಾನ ವಿಷಯವಾಗಬಹುದು. ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಕೃತಕ ಬುದ್ಧಿಮತ್ತೆಯ ಕ್ಷೇತ್ರದ ತಜ್ಞ ಎಂಜಿನಿಯರ್‌ಗಳ ಸಂಖ್ಯೆ ಕಡಿಮೆ ಇದೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಅಲ್ಲದೇ, ಸಾಮಾನ್ಯ ಪದವಿಯಲ್ಲೂ ಕೃತಕ ಬುದ್ಧಿಮತ್ತೆಯ ಶಿಕ್ಷಣ ಅಗತ್ಯವಿದೆ ಎಂದರು.

ಕಾಲೇಜು ನಿರ್ದೇಶಕ ಡಾ. ಎಚ್‌.ವಿ. ತ್ರಿಭುವಾನಂದ ಸ್ವಾಮಿ ಮಾತನಾಡಿ, ಶಿಕ್ಷಣ, ಆರೋಗ್ಯ, ವಾಣಿಜ್ಯೋದ್ಯಮ, ಸಾಮಾಜಿಕ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಕುರಿತಂತೆ ರಾಜ್ಯದ ವಿವಿಧೆಡೆಯಿಂದ ಬಂದಿರುವ ವಿದ್ಯಾರ್ಥಿಗಳಗಳು 50ಕ್ಕೂ ಹೆಚ್ಚು ಪ್ರಬಂಧ ಮಂಡಿಸಲಿದ್ದಾರೆ. ಗಣಿತದಲ್ಲಿ ಉತ್ತಮ ತಿಳಿವಳಿಕೆ ಇದ್ದಲ್ಲಿ ಮಾತ್ರ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಸಾಧ್ಯವಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಬಿ.ವೀರಪ್ಪ, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು. ಎಂ.ಕೆ.ಆದಿತ್ಯ, ವಿ.ಎನ್‌. ಸಂಜನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಎನ್.ಸಿ.ಪ್ರಜ್ಞಾ ಪ್ರಾರ್ಥಿಸಿದರು. ಮೆಹತಾಜ್, ಉಜ್ಮಾ ನಾಜ್ ಅತಿಥಿಗಳ ಪರಿಚಯ ಮಾಡಿದರು.

ಬಿ.ಬಿ.ಮಂಜುನಾಥ, ಬಿ.ವಿ.ಶ್ವೇತಾ, ಓ.ಎಚ್.ಲತಾ, ಎಂ.ಎಸ್‌.ನಾಗರಾಜ, ಜ್ಞಾನೇಶ್ವರ ಸುಳಕೆ, ಟಿ.ಎಸ್.ಕಾಂಚನಾ, ಡಿ.ಪಿ. ನಿಶಾರಾಣಿ, ಎ.ಎನ್.ಮಂಜುಳಾ, ಡಿ.ಆರ್.ನರೇಂದ್ರ ವಿಚಾರ ಸಂಕಿರಣದ ಸಹಯೋಜಕರಾಗಿದ್ದರು. ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ವಿಭಾಗದ ಶಿವಶಂಕರ ನಾಯಕ್ ಆಧುನಿಕ ನೀರಾವರಿ ವಿಧಾನದ ಬಗ್ಗೆ, ಸ್ತ್ರೀ ಶಕ್ತಿ ಸಂಘದ ಸುಜಾತ ಅವರಗೊಳ್ಳ ಕೃಷಿ ತೋಟಗಾರಿಕೆಯಲ್ಲಿ ಡ್ರೋನ್ ಬಳಸಿ, ಕೀಟನಾಶಕ ಸಿಂಪರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

- - -

ಕೋಟ್‌ ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಕೆ ಶುರುವಾಗಿದೆ. ಜಗತ್ತಿನ 33 ದೇಶದ ಸುಮಾರು 13 ಲಕ್ಷ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರು, ಚೆನ್ನೈನಂತಹ ಮಹಾನಗರಗಳ ಆಸ್ಪತ್ರೆಗಳಿಗೆ ಬಂದು, ಕೃತಕ ಬುದ್ಧಿಮತ್ತೆ ಸಹಕರಿತ ಚಿಕಿತ್ಸೆ ಯಶಸ್ವಿಯಾಗಿ ಪಡೆದಿದ್ದಾರೆ

- ಡಾ. ಬಿ.ಇ.ರಂಗಸ್ವಾಮಿ, ರಿಜಿಸ್ಟ್ರಾರ್, ಬೆಳಗಾವಿ ವಿಟಿಯು

- - - -20ಕೆಡಿವಿಜಿ6, 7, 8:

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನಲ್ಲಿ ಪ್ರಜ್ಞಾ 3.0 ಕೃತಕ ಬುದ್ಧಿಮತ್ತೆ ಉದ್ಭವ ಹಾಗೂ ಅವಕಾಶಗಳ ರೂಪಾಂತರ ವಿಷಯವಾಗಿ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅಥಣಿ ಎಸ್.ವೀರಣ್ಣ, ಡಾ.ಬಿ.ಇ.ರಂಗಸ್ವಾಮಿ ಉದ್ಘಾಟಿಸಿದರು.