ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕೇವಲ ಒಂದು ದಿನ ಆಚರಿಸಿ ಇನ್ನೊಂದು ವರ್ಷ ಮೌನವಾಗಿರುತ್ತಿದ್ದೇವೆ. ಕರ್ನಾಟಕದ ಏಕೀಕರಣದ ಆಶಯಗಳು ಮತ್ತು ಯೋಜನೆಗಳ ಬಗ್ಗೆ ಯಾರೂ ಹಿಂದಿರುಗಿ ನೋಡುತ್ತಿಲ್ಲ. ಮುಂದೆ ಕನ್ನಡವನ್ನು ಕನ್ನಡತನವನ್ನು ಹೇಗೆ ಕಟ್ಟಿ ಬೆಳೆಸಬೇಕೆಂದೂ ಆಲೋಚಿಸುತ್ತಿಲ್ಲ. ಈ ಎರಡು ನೆಲೆಯಲ್ಲಿ ಕನ್ನಡದ ಬೆಳವಣಿಗೆ ಕುರಿತು ಚರ್ಚಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಏಕೀಕರಣದ ಆಶಯಗಳು ಮತ್ತು ಯೋಜನೆಗಳು ಪ್ರಸ್ತುತ ದಿನದವರೆಗೆ ಈಡೇರಿಲ್ಲ. ಮುಂದೆ ಯಾವ ರೀತಿ ಕನ್ನಡವನ್ನು ಕಟ್ಟಬೇಕೆಂಬ ಹಾದಿಯಲ್ಲಿ ಕಾರ್ಯಯೋಜನೆಗಳು ವೇಗವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕನ್ನಡ ಬೆಳವಣಿಗೆ ಹಾದಿಯಲ್ಲಿ ಹಿಂದೆ ಬಿದ್ದಿದೆ ಎಂದು ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಎನ್‌.ಕೆ.ಲೋಲಾಕ್ಷಿ ವಿಷಾದಿಸಿದರು.

ನಗರದಲ್ಲಿರುವ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನದಲ್ಲಿ ಕನ್ನಿಕಾಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಹಾಗೂ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕವಿ ಸಜಗೌ ಅಭಿನಂದನೆ, ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕೇವಲ ಒಂದು ದಿನ ಆಚರಿಸಿ ಇನ್ನೊಂದು ವರ್ಷ ಮೌನವಾಗಿರುತ್ತಿದ್ದೇವೆ. ಕರ್ನಾಟಕದ ಏಕೀಕರಣದ ಆಶಯಗಳು ಮತ್ತು ಯೋಜನೆಗಳ ಬಗ್ಗೆ ಯಾರೂ ಹಿಂದಿರುಗಿ ನೋಡುತ್ತಿಲ್ಲ. ಮುಂದೆ ಕನ್ನಡವನ್ನು ಕನ್ನಡತನವನ್ನು ಹೇಗೆ ಕಟ್ಟಿ ಬೆಳೆಸಬೇಕೆಂದೂ ಆಲೋಚಿಸುತ್ತಿಲ್ಲ. ಈ ಎರಡು ನೆಲೆಯಲ್ಲಿ ಕನ್ನಡದ ಬೆಳವಣಿಗೆ ಕುರಿತು ಚರ್ಚಿಸಬೇಕಿದೆ ಎಂದು ನುಡಿದರು.

ಭಾರತ ಸ್ವಾತಂತ್ರ್ಯ ಹೋರಾಟ ಮಾಡುವ ಸಂದರ್ಭದಲ್ಲಿ ಎಲ್ಲಾ ಭಾಷೆಗಳ ಪ್ರದೇಶಗಳು ಭಾಷಾವಾರು ಪ್ರಾಂತ್ಯ ವಿಭಾಗಗಳಾಗಿ ಹರಿದು ಹಂಚಿಹೊಗಿದ್ದವು, ಮೈಸೂರು ರಾಜ್ಯ ೧೯೭೩ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯವಾಗಿ ಮರುನಾಮಕರಣಗೊಂಡಿತು, ಆಗ ಏಕೀಕರಣದ ಆಶಯಗಳಲ್ಲಿ ಕನ್ನಡಿಗರೆಲ್ಲರೂ ಒಂದು ಪ್ರದೇಶದಲ್ಲಿ ವಾಸಿಸುವುದು, ಕನ್ನಡವೇ ಮಾತೃಭಾಷೆಯಾಗಿ ಶಿಕ್ಷಣ ಮತ್ತು ಆಡಳಿತದಲ್ಲಿರಬೇಕು, ಉದ್ಯಮಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆನ್ನುವುದು ಪ್ರಮುಖವಾಗಿದ್ದವು. ಆದರೆ, ಆ ಆಶಯಗಳೆಲ್ಲವೂ ಇಂದಿಗೂ ಕೇವಲ ಆಶಯಗಳಾಗೇ ಉಳಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಈಗ 71ನೇ ಕನ್ನಡ ರಾಜ್ಯೋತ್ಸವ ಮಾಡುತ್ತಿದ್ದೇವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಇದ್ದರೆ, ಖಾಸಗಿ ಶಾಲೆಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡಿಗರಿದ್ದಾರೆ. ಕನ್ನಡ ಹಾಗೂ ಕನ್ನಡತನವನ್ನು ಹೇಗೆ ಕಟ್ಟಬೇಕು ಎಂಬ ಚರ್ಚೆಗಳು ಅನಿವಾರ್ಯವಾಗಿದೆ ಎಂದರು.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆ ಬೆಳೆಯಬೇಕಿದೆ, ಉಳಿಯಬೇಕಿದೆ. ಸರ್ಕಾರಿ ಶಾಲೆಗಳು ಉಳಿದರೆ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ. ಕನ್ನಡ ವರ್ಣಮಾಲೆ ಅಕ್ಷರಗಳು ಯೋಗಮಂತ್ರಗಳಂತಿವೆ. ಅವುಗಳ ಉಚ್ಚಾರಣೆಯಿಂದಲೇ ಯೋಗೋಪಯೋಗವಾಗುತ್ತವೆ, ಧ್ಯಾನ ಮಾಡಲು ಮಂತ್ರಗಳ ಬದಲು ಕನ್ನಡ ಅಕ್ಷರಗಳನ್ನು ಬಳಸಿ ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ಅಗತ್ಯವಾಗಿದೆ. ಗಡಿ ಭಾಷೆ ಪ್ರಾಬಲ್ಯವಿದ್ದರೂ ಮಂಡ್ಯದಲ್ಲಿ ಕನ್ನಡ ಭಾಷೆ ಪರಿಶುದ್ಧವಾಗಿದೆ. ಆದ್ದರಿಂದ ಕನ್ನಡ ಉಳಿಸುವ ಕೆಲಸ ಮಂಡ್ಯದಿಂದಲೇ ಚರ್ಚೆಗೊಳಪಡಬೇಕು. ಶಿಕ್ಷಣ ಕನ್ನಡದಲ್ಲಿಯೇ ಸಿಗುವಂತಾಗಬೇಕು. ಉದ್ಯೋಗದ ಭಾಷೆಯಾಗಿ ಬದಲಾಗಬೇಕು. ಕನ್ನಡ ಕೇವಲ ಭಾಷೆಯಲ್ಲ. ಭಾವನೆ, ಮನುಷ್ಯನ ಜೀವ ಕಣಗಳಿದ್ದಂತೆ. ಇದರ ಅರಿವು ಹೆಚ್ಚಾಗಬೇಕು ಎಂದರು.

ಕನ್ನಡದ ಅಸ್ತಿತ್ವ ಮರು ಸ್ಥಾಪಿಸಬೇಕಿದೆ. ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಕನ್ನಡ ಲಿಪಿ ಅತ್ಯಂತ ಪ್ರಾಚೀನವಾಗಿದ್ದು, ಬೇರೆ ಭಾಷೆಗಳಿಗಿಂತ ಕನ್ನಡ ಮಾತ್ರ ಪೂರ್ಣರೂಪ ಹೊಂದಿರುವ ಲಿಪಿಯಾಗಿದೆ. ಕನ್ನಡಕ್ಕೆ ಅಪಾಯವಿದ್ದು, ಜಾಗತಿಕ ಮಟ್ಟದಲ್ಲಿ ಬೆಸೆಯುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ, ಸಂಘಟಕ ಟಿ.ಸತೀಶ್‌ಜವರೇಗೌಡ, ಕುವೆಂಪು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪತ್ರಕರ್ತ ಎಚ್. ಶಿವರಾಜ್, ಸಾವಯವ ಕೃಷಿಕ ಎಚ್.ವಿ.ನಾಗರಾಜು, ಮಂಡ್ಯ ತಾಲೂಕಿನ ಸಂತೆಕಸಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮತ್ತು ಕನ್ನಿಕಾಶಿಲ್ಪ ಸಾಹಿತ್ಯ ಪ್ರಶಸ್ತಿಯನ್ನು ಕವಯತ್ರಿ ಡಾ.ಪಿ.ಸುಮಾರಾಣಿ ಶಂಭು ಹಾಗೂ ಕನ್ನಿಕಾಶಿಲ್ಪ ಪುಸ್ತಕ ಪ್ರಶಸ್ತಿಯನ್ನು ಲೇಖಕ ಚಂದ್ರಶೇಖರ ದ.ಕೋ.ಹಳ್ಳಿ ಅವರಿಗೆ ತಲಾ ೫ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಕವಿಗಳು ಕವನ, ಕವಿತೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಸತ್ಯಮಂಗಲ ಮಹಾದೇವ, ಕನ್ನಿಕಾ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ನವೋದಯ ಶಿಕ್ಷಣ ತಜ್ಞೆ ಎಚ್.ಆರ್.ಕನ್ನಿಕಾ, ಸಂಚಾಲಕರಾದ ದೊ.ಚಿ.ಗೌಡ, ಕೊತ್ತತ್ತಿ ರಾಜು, ಸಬ್ಬನಹಳ್ಳಿ ಶಶಿಧರ, ರೋಷನ್ ಛೋಪ್ರಾ, ಮಂಗಲಶಿವಣ್ಣ ಮತ್ತಿತರರಿದ್ದರು.