ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ಜರುಗಿತು. ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಜನರಿಗೆ ಯೋಜನೆ ತಲುಪಿಸಲು ಮೀನಮೇಷ

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ಜರುಗಿತು. ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಕುಡಿಯುವ ನೀರಿನ ಯೋಜನೆಗಳಿಗೆ ಸಾಕಷ್ಟು ಅವಕಾಶ ಹಾಗೂ ಅನುದಾನವಿದ್ದರೂ, ಇನ್ನೂ 9 ಗ್ರಾಪಂಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಕ್ಕೆ ಸಚಿವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪಿಸಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ಧೋರಣೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅದೇ ರೀತಿ, ಬಳಕೂರು ರಸ್ತೆ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ಕೇಳಿಬಂದ ದೂರುಗಳಿಗೆ ತಕ್ಷಣ ಸ್ಪಂದಿಸಿದ ಸಚಿವರು, ಬೇಜವಾಬ್ದಾರಿ ತೋರಿದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಸದರಿ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆದೇಶಿಸಿದರು.

ಮೀನುಗಾರಿಕೆ ಇಲಾಖೆಯಿಂದ ಮೃತಪಟ್ಟ ಪ್ರಕರಣಗಳಿಗೆ ಒಟ್ಟು ₹1 ಕೋಟಿ 10 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ₹10 ಕೋಟಿ ವೆಚ್ಚದಲ್ಲಿ ಪ್ರತಿಯೊಬ್ಬ ಮೀನುಗಾರನಿಗೂ ಲೈಫ್ ಜಾಕೆಟ್ ನೀಡಲಾಗುವುದು. ಆಮೆ ಸಂತತಿ ಉಳಿಸುವ ನಿಟ್ಟಿನಲ್ಲಿ ಮೂರು ಜಿಲ್ಲೆಗಳಿಗೆ ₹5 ಕೋಟಿ ಮೌಲ್ಯದ ಸಾಮಗ್ರಿಗಳು ಬಂದಿದ್ದು, ಸುಮಾರು 200 ಬೋಟ್‌ಗಳಿಗೆ ಇವುಗಳನ್ನು ವಿತರಿಸಲಾಗುವುದು ಎಂದರು.

ಹೊನ್ನಾವರದಲ್ಲಿ ಮೀನುಗಾರ ಮಹಿಳೆಯರಿಗಾಗಿ ₹45 ಲಕ್ಷ ವೆಚ್ಚದಲ್ಲಿ ಹೊಸ ಮೀನು ಮಾರುಕಟ್ಟೆ ಹಾಗೂ 10 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಈಗಾಗಲೇ ವ್ಯಾಪಾರ ಮಾಡುತ್ತಿರುವ 81 ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಅವರಿಗೂ ಮಳಿಗೆಗಳನ್ನು ಮಾಡಿಕೊಡುವ ಭರವಸೆ ನೀಡಿದರು.

ಮಂಕಿ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ತಲಾ ₹10 ಕೋಟಿಗಳ ಎರಡು ಕಾಮಗಾರಿಗಳು ಹಾಗೂ 6.50 ಕೋಟಿ ಮತ್ತು ₹6.18 ಕೋಟಿ ವೆಚ್ಚದ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿ ತಿಳಿಸಿದರು.

ಸಾರಿಗೆ ಇಲಾಖೆಗೆ ಕಟ್ಟುನಿಟ್ಟಿನ ಆದೇಶ:

ಶಾಲೆ-ಕಾಲೇಜುಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಸ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸಾರಿಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ ಅವರು, ಮುಂಜಾನೆ 7.30 ರಿಂದ 9 ಗಂಟೆಯ ಅವಧಿಯಲ್ಲಿ ಯಾವುದೇ ಮಾರ್ಗದಲ್ಲೂ ಬಸ್‌ಗಳ ಕೊರತೆ ಇರಬಾರದು ಎಂದು ನಿರ್ದೇಶನ ನೀಡಿದರು.

ಸಾರಿಗೆ ವ್ಯವಸ್ಥೆ ಬಲಪಡಿಸಲು ಕುಮಟಾ ಡಿಪೋಗೆ 19 ಹೊಸ ಬಸ್ ಹಾಗೂ 60 ಚಾಲಕರನ್ನು, ಭಟ್ಕಳ ಡಿಪೋಗೆ 20 ಹೊಸ ಬಸ್ ಹಾಗೂ 65 ಚಾಲಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಆರೋಗ್ಯ ಕಾರ್ಯಕ್ರಮಗಳು ಶೇ. 90ರಷ್ಟು ಪ್ರಗತಿ ಸಾಧಿಸಿವೆ. ಹೊಸದಾಗಿ ಮಂಜೂರಾದ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನಾ ಹಂತದಲ್ಲಿದೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಹೊಸದಾಗಿ ಡಯಾಲಿಸಿಸ್ ವಾರ್ಡ್ ಸಿದ್ಧಪಡಿಸಲಾಗುತ್ತಿದೆ. ಇನ್ನು, ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸುರಕ್ಷತೆಗಾಗಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ವೈದ್ಯರು ಮನವಿ ಮಾಡಿದರು. ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ ಒಂದು ಮರಣ ಸಂಭವಿಸಿರುವುದನ್ನು ಸಭೆಯಲ್ಲಿ ದೃಢೀಕರಿಸಲಾಯಿತು.

ತಾಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ವಿತರಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

40 ವರ್ಷ ಕಳೆದರೂ ಹಲವು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವರು, ಸ್ವಂತ ಜಾಗ ಲಭ್ಯವಿದ್ದಲ್ಲಿ ಸರ್ಕಾರದಿಂದ ತಕ್ಷಣ ಕಟ್ಟಡ ಅನುದಾನ ನೀಡಲು ಅವಕಾಶವಿದೆ ಎಂದರು.

ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಕೇವಲ ಗುದ್ದಲಿ ಪೂಜೆ ಮಾಡಿದರಷ್ಟೇ ಅಭಿವೃದ್ಧಿ ಅಲ್ಲ

ಅಮೃತ ಯೋಜನೆಯಡಿ ಮಂಕಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದಾಗ ಸಂಸದರು ಬೇಸರ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಕ್ಕದ ತಾಲೂಕಿನಲ್ಲೇ ಈ ಯೋಜನೆಗೆ ಚಾಲನೆ ನೀಡಿದಾಗ ಬೇಸರಿಸದ ಅವರು, ಇಲ್ಲಿ ಯಾಕೆ ಬೇಸರ ಮಾಡಿಕೊಂಡಿದ್ದಾರೆ? ಸಂಸದರು ಕ್ಷೇತ್ರಕ್ಕೆ ಹೊಸ ಯೋಜನೆಗಳನ್ನು ತಂದರೆ ನಾವು ಖಂಡಿತ ಅಭಿನಂದಿಸುತ್ತೇವೆ ಎಂದರು.

ನನ್ನ ಕ್ಷೇತ್ರದಲ್ಲಿ ಸದ್ಯ ₹100 ಕೋಟಿ ವೆಚ್ಚದ ಕಾಮಗಾರಿಗಳು ಬಂದಿವೆ. ಕೇವಲ ಗುದ್ದಲಿ ಪೂಜೆ ಮಾಡಿದರಷ್ಟೇ ಅಭಿವೃದ್ಧಿ ಅಲ್ಲ. ಗುಣಮಟ್ಟದ ಕೆಲಸವಾಗಬೇಕು. ಎಲ್ಲಾ ಕಾಮಗಾರಿಗಳಿಗೂ ಸೇರಿಸಿ ಒಂದೇ ಕಡೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದರು.