ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು.ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ ೧೯ಕ್ಕೂ ಅಧಿಕ ಭಾಷೆಗಳಲ್ಲಿ ೩೫೦೦ ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು.
ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ ಸಭಾಂಗಣದ ಮುಂಭಾಗದ ಭವ್ಯ ವೇದಿಕೆಯಲ್ಲಿ ಬಿನ್ನಿ ಗಾನದ ಬೆಳಕು ಹರಿಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ೨೯ನೇ ಆಳ್ವಾಸ್ ವಿರಾಸತ್‌ನ ಎರಡನೇ ದಿನವಾದ ಶುಕ್ರವಾರದ ಚಿತ್ರಣ.
‘ಈ ಹಾಡಲ್ಲಿ ನಾನು ಹೆಚ್ಚು ಮಾತನಾಡಬೇಕಾಗುತ್ತದೆ’ ಎಂದು ಹೇಳಿದ ಅವರು, ರಣಬೀರ್ ಕಪೂರ್ ನಟನೆಯ ‘ಬಕ್ತಮೀಸ್ ದಿಲ್.. ಬಕ್ತಮೀಸ್ ದಿಲ್...’ ಹಾಡಿದರು. ಇಡೀ ಸಭಾಂಗಣ ಸ್ವರ ಲೋಕದಂತೆ ಭಾಸವಾಯಿತು. ಶಾರುಕ್ ಖಾನ್ ನಟನೆಯ ‘ದಿಲ್’ ಸಿನಿಮಾದ ‘ಚೈಯ್ಯಂ ಚೈಯ್ಯಂ .. ಹಾಡಿದಾಗ ಸುಖ್ವಿಂದರ್ ಸಿಂಗ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು.೧೯೮೨ ರಲ್ಲಿ ಮಿಥುನ್ ಚಕ್ರವರ್ತಿ ಹೆಜ್ಜೆ ಹಾಕಿದ ‘ಡಿಸ್ಕೊ ಡ್ಯಾನ್ಸರ್’ ಸಿನಿಮಾದ ರಿಮಿಕ್ಸ್ ‘ಐ ಯಾಮೇ ಡಿಸ್ಕೋ ಡ್ಯಾನ್ಸರ್...’ ಹಾಡಿದಾಗ ವಿದ್ಯಾರ್ಥಿಗಳು ಕೈ ಎತ್ತಿ ನಲಿದರು. ಅದೇ ಲಯವನ್ನು ಮುಂದುವರಿಸಿದ ಅವರು, ’ಯಾದ್ ಆರಾ ಹೇ...’ ಹಾಡಿಗೆ ಎಲ್ಲರೂ ನೆನಪುಗಳ ಲಯಕ್ಕೆ ಜಾರಿದರು.
ಬಳಿಕ ದಕ್ಷಿಣದ ತಮಿಳಿಗೆ ಬಂದ ಅವರು ಪ್ರಭುದೇವ ಬ್ರೇಕ್ ಡ್ಯಾನ್ಸ್ ಖ್ಯಾತಿಯ ‘ಕಾದಲನ್’ ಸಿನಿಮಾದ ‘ಮುಕ್ಕಾಲಾ ಮುಕ್ಕಾಬುಲಾ ಓ ಲೈಲಾ’ ಹಾಡು ಹಾಡಿದರು. ಹಾಡಿಗೆ ಹೆಜ್ಜೆಯೂ ಹಾಕಿದರು. ಪ್ರಭುದೇವ್ ಮಾದರಿಯ ಹೆಜ್ಜೆಗಳನ್ನು ಪುನರಾವರ್ತಿಸಿದರು.ಐ ಲವ್ ಯೂ ಗೈಸ್, ಐ ಲವ್ ಆಳ್ವಾಸ್.. ಎಂಜಾಯಿಂಗ್ ಶೋ... ಎಂದಾಗಲೆಲ್ಲ ಸಾಗರದ ಅಲೆಯಂತೆ ವಿದ್ಯಾರ್ಥಿಗಳ ಸಡಗರ ಹೊನಲಾಗಿ ಬಂತು.
ಕೇರಳ ಮೂಲದ ಅಬುದಾಬಿಯಲ್ಲಿ ಬೆಳೆದ ಬಿನ್ನಿ ಗಾಯನಕ್ಕೆ ಬೇಸ್‌ನಲ್ಲಿ ಕಾರ್ಲ್, ಲೀಡ್ ಗಿಟಾರ್ ನಲ್ಲಿ ಜೋಶುವಾ, ಡ್ರಮ್ಸ್ ನಲ್ಲಿ ಡೇವಿಡ್ ಜೋಸೆಫ್, ಪರ್ಕರ್ಷನ್ ನಲ್ಲಿ ಆಲ್ವಿನ್, ಕೀ ಬೋರ್ಡ್ ನಲ್ಲಿ ಅಲೋಕ್, ಟ್ರಂಪೆಟ್ ಮತ್ತು ಸ್ಯಾಕ್ಸೋಫೋನ್ ನಲ್ಲಿ ರಾಹುಲ್ ಸಾಥ್ ನೀಡಿದರು.ಇದಕ್ಕೂ ಮೊದಲು ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಮುಸ್ತಫಾ, ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.
ಮೆರುಗು ನೀಡಿದ ಆಳ್ವಾಸ್ ಸಾಂಸ್ಕೃತಿಕ ವೈಭವ: ಮಹಿಷಾಸುರ ಮರ್ಧಿನಿಯ ಕಥಾನಕವನ್ನು ಹೊಂದಿದ ಭರತನಾಟ್ಯ ನೃತ್ಯರೂಪಕ ಹಾಗೂ ಪುರುಲಿಯೊ ಹಾಗೂ ಆಂಧ್ರಪ್ರದೇಶದ ಬಂಜಾರ ನೃತ್ಯದ ಮೂಲಕ ೨೯ನೇ ಆಳ್ವಾಸ್ ವಿರಾಸತ್‌ನ ಎರಡನೇ ದಿನವಾದ ಶುಕ್ರವಾರ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೆರುಗು ನೀಡಿತು.ದೇಶದ ವಿವಿಧ ಪ್ರದೇಶಗಳನ್ನು ಬಿಂಬಿಸುವ ಈ ಮೂರೂ ಕಲಾ ಪ್ರಕಾರವನ್ನು ಪ್ರಸ್ತುತ ಪಡಿಸಿರುವುದು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.ಇದು ಅಪ್ಪಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ ಆಳ್ವಾಸ್ ಸಾಂಸ್ಕೃತಿಕ ವೈಭವ.
ಭರತನಾಟ್ಯ ನೃತ್ಯರೂಪಕ: ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ ೩೬ ವಿದ್ಯಾರ್ಥಿಗಳು ಮಹಿಷಾಸುರ ಮರ್ಧಿನಿ ರೂಪಕವನ್ನು ಪ್ರಸ್ತುತ ಪಡಿಸಿದರು. ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ ಸಂಗೀತ ನೀಡಿದ್ದಾರೆ. ಭರತನಾಟ್ಯದ ಭಾವಭಂಗಿಗಳ ನಡುವೆ ಮನೋಜ್ಞ ಅಭಿನಯ ನೀಡಿದ ವಿದ್ಯಾರ್ಥಿ- ವಿದ್ಯಾರ್ಥಿನಿಗಳು ಗಮನ ಸೆಳೆದರು.ಬಂಜಾರ ನೃತ್ಯ: ಬಂಜಾರರು ಆಂಧ್ರಪ್ರದೇಶದಲ್ಲಿ ಆಚರಿಸವು ಸಾಂಪ್ರದಾಯಿಕ ನೃತ್ಯವನ್ನು ಸುರೇಶ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಿಂದಿಗೆಯನ್ನು ಹೊತ್ತು, ಕೋಲಾಟ ಮಾಡಿದ ಬಾಲಕಿಯರ ನೃತ್ಯ ಮಖುಷಿ ನೀಡಿತು.
ಪುರಲಿಯೊ: ಪುರುಲಿಯೊ ಎಂಬುದು ಪಶ್ಚಿಮ ಬಂಗಾಳದ ಒಂದು ಹಳ್ಳಿಯ ಹೆಸರು. ಈ ಹಳ್ಳಿಯ ಜನಪದೀಯ ಕಲೆಯಲ್ಲಿ (ಅರೆ ಶಾಸ್ತ್ರೀಯ ಎನ್ನಲಾಗುತ್ತದೆ) ಮಹಿಷಾಸುರ ಮರ್ಧಿನಿಯೂ ಪ್ರಮುಖವಾಗಿದೆ. ಇದನ್ನು ಪುರುಲಿಯಾ ಛಾವೋ ಎಂದು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡುತ್ತಾರೆ. ಈ ಕಥಾನಕದ ದುರ್ಗೆಯ ಸಿಂಹದ ಪಾತ್ರವೂ ಪ್ರಮುವಾಗಿದೆ. ಡಾ.ಎಂ.ಮೋಹನ ಆಳ್ವ ಅವರ ಸೃಜನಶೀಲತೆಯಂತೆ ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಅವರು ಸಿಂಹದ ಒಂದು ಪಾತ್ರವನ್ನೆ ತೆಗೆದುಕೊಂಡು ಇಡೀ ನೃತ್ಯರೂಪಕವನ್ನು ಮರುಸೃಷ್ಟಿಸಿದ್ದಾರೆ. ವಿರಾಸತ್ ವೇದಿಕೆಯಲ್ಲಿ ಸಿಂಹಗಳ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಸಭಾಂಗಣದಲ್ಲಿ ಕುತೂಹಲ. ಪುಟಾಣಿಗಳೂ ಕುಣಿಯುತ್ತಿದ್ದ ಚಿತ್ರಣ ಆಕರ್ಷಕವಾಗಿತ್ತು.