ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದ ಬೋಳುವಾರು ಮಹಮ್ಮದ್ ಕುಂಞ ಅವರ ಸ್ವಾತಂತ್ರ್ಯ ಓಟ ನಾಟಕ ಮಾನವ ಮೌಲ್ಯಧಾರಿತವಾಗಿರಬೇಕೆ ಹೊರತು ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯತ್ವವನ್ನು ಕಡೆಗಣಿಸಬಾರದು ಎಂಬ ಸಂದೇಶ ಸಾರುತ್ತದೆ ಎಂದು ಆನವಟ್ಟಿಯ ನಿವೃತ್ತ ಉಪನ್ಯಾಸಕ ಉಮೇಶ ಬಿಚ್ಚುಗತ್ತಿ ಹೇಳಿದರು.

ಹಾನಗಲ್ಲ: ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದ ಬೋಳುವಾರು ಮಹಮ್ಮದ್ ಕುಂಞ ಅವರ ಸ್ವಾತಂತ್ರ್ಯ ಓಟ ನಾಟಕ ಮಾನವ ಮೌಲ್ಯಧಾರಿತವಾಗಿರಬೇಕೆ ಹೊರತು ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯತ್ವವನ್ನು ಕಡೆಗಣಿಸಬಾರದು ಎಂಬ ಸಂದೇಶ ಸಾರುತ್ತದೆ ಎಂದು ಆನವಟ್ಟಿಯ ನಿವೃತ್ತ ಉಪನ್ಯಾಸಕ ಉಮೇಶ ಬಿಚ್ಚುಗತ್ತಿ ಹೇಳಿದರು.

ರಂಗಗ್ರಾಮ ಹಾನಗಲ್ಲ ತಾಲೂಕಿನ ಶೇಷಗಿರಿ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿ ಕಲಾ ತಂಡ ಸಂಯುಕ್ತವಾಗಿ ಆಯೋಜಿಸಿದ ಬೋಳುವಾರು ಮಹಮ್ಮದ್ ಕುಂಞ ಅವರ ಸ್ವಾತಂತ್ರ್ಯ ಓಟ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಜಾತ್ಯತೀತ ಸ್ವತಂತ್ರ ದೇಶವಾಗಿದೆ. ಇಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ಯಾವುದೇ ಅಸಮಾಧಾನಕ್ಕೆ ಅವಕಾಶವಿಲ್ಲ. ಈಗ ವೈಚಾರಿಕ ಕ್ರಾಂತಿ ಬೇಕಾಗಿದೆ. ಪ್ರಾಯೋಗಿಕ ಚಿಂತನೆಗಳು ಈಗ ಬೇಕಾಗಿದೆ. ರಂಗದ ಮೂಲಕ ಶೇಷಗಿರಿ ವೈಚಾರಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಎಂದರು.

ಶಿಕ್ಷಕ ಸಂತೋಷ ಬಿದರಗಡ್ಡಿ ಮಾತನಾಡಿ, ಬದುಕು ಕಟ್ಟಿಕೊಳ್ಳುವ ಕಾಲ ಇದಾಗಿದೆ. ಶೇಷಗಿರಿ ಸಾಹಿತ್ಯ ಸಂಸ್ಕೃತಿ ಸಾಮಾಜಿಕ ಬದುಕಿನ ಎಲ್ಲ ಮಜಲುಗಳಲ್ಲಿ ನಾಟಕ ಪ್ರದರ್ಶನದ ಮೂಲಕ ಹೆಸರು ಮಾಡಿದೆ. ಇಡೀ ರಾಜ್ಯದ ಬಹುತೇಕ ಹಿರಿಕಿರಿಯ ಕಲಾವಿದರು ಈ ರಂಗ ಮಂದಿರದ ಪ್ರೀತಿ ವಿಶ್ವಾಸದಲ್ಲಿದ್ದಾರೆ. ಶೇಷಗಿರಿ ಒಂದು ಸಮಾಜಮುಖಿ ರಂಗ ಕೇಂದ್ರ ಎಂದರು.

ಶೇಷಗಿರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಜಗದೀಶ ಹಂಚಿನಮನಿ ಅಧ್ಯಕ್ಷತೆವಹಿಸಿದ್ದರು. ಸನ್ಮತಿ ಸಹಕಾರಿ ಬ್ಯಾಂಕ್‌ ನಿರ್ದೇಶಕ ಗಿರೀಶ ದೇಶಪಾಂಡೆ, ಕಲಾವಿದ ತಂಡದ ನಾಯಕ ಮಂಜು ಹಿರೇಮಠ, ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ ಉಪಸ್ಥಿತರಿದ್ದರು.

ನಾಟಕ ಪ್ರದರ್ಶನದ ಸಂವಾದದಲ್ಲಿ ರಂಗಾಸಕ್ತರಾದ ಎಸ್.ಎಸ್. ಮೂರುಮಟ್ಟಿ, ಮಾರುತಿ ಶಿಡ್ಲಾಪೂರ, ಶೇಖರ ಭಜಂತ್ರಿ, ಮಂಜುನಾಥ, ವಸಂತ ಚಿಕ್ಕಣ್ಣನವರ, ಅಶೋಕ ತತ್ತೂರ, ಆರ್.ಎಚ್. ಓಲೇಕಾರ, ಎನ್.ಐ. ಕೋಮಾರ, ಗದಿಗೆಪ್ಪ ಕೋಟಿ, ಜಿ.ಎಸ್. ಮುಚ್ಚಂಡಿ, ನಾಗರಾಜ ಅಡಿಗ ಪಾಲ್ಗೊಂಡಿದ್ದರು.

ಆಮೀರ ಪಠಾಣ ಸ್ವಾಗತಿಸಿದರು. ಸೋಮು ಗುರಪ್ಪನವರ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಧಾರೇಶ್ವರ ವಂದಿಸಿದರು.