ಅಧಿಕಾರಿಗಳ ನಡೆಯಿಂದ ಬಾಂದಿ ಸಮುದಾಯಕ್ಕೆ ಸಮಸ್ಯೆ: ಕೃಷ್ಣಾನಂದ ಬಾಂದೇಕರ್

| Published : Sep 23 2025, 01:05 AM IST

ಅಧಿಕಾರಿಗಳ ನಡೆಯಿಂದ ಬಾಂದಿ ಸಮುದಾಯಕ್ಕೆ ಸಮಸ್ಯೆ: ಕೃಷ್ಣಾನಂದ ಬಾಂದೇಕರ್
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳ ಗೊಂದಲದಿಂದಾಗಿ ಬಾಂದಿ ಸಮುದಾಯದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಾತಿ ಗಣತಿ ಸೇರಿದಂತೆ ದಾಖಲೆಗಳಲ್ಲಿ ತಮ್ಮ ಜಾತಿಯನ್ನು ಬಾಂದಿ ಎಂದು ನಮೂದಿಸುವಂತೆ ಕಾರವಾರದಲ್ಲಿ ಕರೆ ನೀಡಿದ ಸಮುದಾಯದ ಮುಖಂಡರು, ಬಂಡಿ, ಬಂಧಿ ಎಂಬ ತಪ್ಪು ಪದಗಳ ಬಳಕೆಯಿಂದ ಗೊಂದಲ ಸೃಷ್ಟಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಕಾರವಾರ

ಅಧಿಕಾರಿಗಳ ಗೊಂದಲದಿಂದಾಗಿ ಬಾಂದಿ ಸಮುದಾಯದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಾತಿ ಗಣತಿ ಸೇರಿದಂತೆ ದಾಖಲೆಗಳಲ್ಲಿ ತಮ್ಮ ಜಾತಿಯನ್ನು ಬಾಂದಿ ಎಂದು ನಮೂದಿಸುವಂತೆ ಕಾರವಾರದಲ್ಲಿ ಕರೆ ನೀಡಿದ ಸಮುದಾಯದ ಮುಖಂಡರು, ಬಂಡಿ, ಬಂಧಿ ಎಂಬ ತಪ್ಪು ಪದಗಳ ಬಳಕೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್, ಬಾಂದಿ ಸಮುದಾಯದವರು ತಮ್ಮ ಜಾತಿಯನ್ನು ಬಾಂದಿ ಎಂದು ದಾಖಲಿಸಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಇದನ್ನು ತಪ್ಪಾಗಿ ಬಂಡಿ ಎಂದು ಬರೆಯುತ್ತಿದ್ದಾರೆ. ಇದರಿಂದ ಸರ್ಕಾರಿ ದಾಖಲೆಗಳಲ್ಲಿ ನಮ್ಮ ಸಮುದಾಯದ ಹೆಸರೇ ಇಲ್ಲದಂತಾಗಿದೆ ಎಂದರು.

ಈ ಸಮಸ್ಯೆಯ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಗಮನಕ್ಕೆ ತರಲಾಗಿದೆ. ಆದರೂ ಕಳೆದ ಆಗಸ್ಟ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ 1400 ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಮತ್ತೆ ಬಂಧಿ ಎಂದು ಪ್ರಕಟವಾಗಿದೆ ಎಂದು ವಿವರಿಸಿದರು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುವ ಈ ಸಮುದಾಯದ ಜನಸಂಖ್ಯೆ ಸುಮಾರು 3000 ಇದೆ. ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ನಮ್ಮ ಜಾತಿ ಸೇರ್ಪಡೆಯಾಗಿಲ್ಲ. ಇದರಿಂದಾಗಿ ನಾವು ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧಿಸಬೇಕಿದೆ. ಇತ್ತ, ರಾಜ್ಯದಲ್ಲಿ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದರೂ, ಅದನ್ನು ನಾವೇ ಕೇಳಿ ಪಡೆಯದಿದ್ದರೂ, ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದೀರಿ ಎಂದು ಪ್ರಕರಣ ದಾಖಲಿಸಲಾಗುತ್ತಿದೆ. ನಮಗೆ ಎಸ್ಸಿ ಅಥವಾ ಓಬಿಸಿ ಪ್ರಮಾಣಪತ್ರ ಇಲ್ಲದೇ ನಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ ಎಂದು ಹೇಳಿದರು.

ಸಮುದಾಯದ ಮತ್ತೊಬ್ಬ ಹಿರಿಯ ಮುಖಂಡ ರಾಮಕೃಷ್ಣ ಲೋಲೇಕರ್, ಈ ಗೊಂದಲದಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಈ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಅಧಿಕಾರಿಗಳು ಮಾಡುವ ಅಕ್ಷರ ದೋಷದಿಂದ ನಮ್ಮ ಜನರು ಕಷ್ಟ ಅನುಭವಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಬಾಂದೇಕರ್, ಮನೋಜ್ ಬಾಂದೇಕರ್, ನಗರಸಭೆ ಸದಸ್ಯರಾದ ಸಂಧ್ಯಾ ಬಾಡಕರ್, ನಾಗೇಶ್ ಯಲ್ಲಾಪುರಕರ್, ಬಾಬು ಬಾಂದೇಕರ್ ಯಲ್ಲಾಪುರ, ರಾಜಾ ಬಾಂದೇಕರ್, ಇಡೂರಕರ್ ಇದ್ದರು.