ಜಾತಿ, ಮತ, ಪಕ್ಷ ಮರೆತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಧರ್ಮಪಾಲನೆ ಮಾಡುವುದು ಸನಾತನ ಧರ್ಮದ ಮೂಲ ಉದ್ದೇಶವಾಗಿದೆ.
ಹರಿದ್ವಾರದಲ್ಲಿ ಸಾಧನಾ ಕುಟೀರದ 9ನೇ ವರ್ಷದ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಭಟ್ಕಳಜಾತಿ, ಮತ, ಪಕ್ಷ ಮರೆತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಧರ್ಮಪಾಲನೆ ಮಾಡುವುದು ಸನಾತನ ಧರ್ಮದ ಮೂಲ ಉದ್ದೇಶವಾಗಿದೆ ಎಂದು ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ 1008 ಮಹಾಮಂಡಳೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಮಂಗಳವಾರ ಹರಿದ್ವಾರದಲ್ಲಿರುವ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸನಾತನ ಧರ್ಮವು ಸಾದು ಸಂತರ ನಿಸ್ವಾರ್ಥ ಧರ್ಮ ಪರಿಪಾಲನೆಯಿಂದ ಉಳಿದಿದೆ ಎಂದ ಅವರು, ಸಾಧು ಸಂತರಿಗೆ ಎಲ್ಲರೂ ಒಂದೇ, ಇಲ್ಲಿ ಮೇಲು ಮೇಲು- ಕೀಳು ಎಂಬ ಬೇಧ ಭಾವ ಇಲ್ಲ. ಹರಿದ್ವಾರದಲ್ಲಿ 9 ವರ್ಷಗಳ ಹಿಂದೆ ಮಠವನ್ನು ಭಕ್ತರ ಸಹಕಾರದಿಂದ ಸ್ಥಾಪಿಸಿದ್ದು ಅಯೋಧ್ಯೆಯಲ್ಲಿಯೂ ಮಠದ ಸ್ಥಾಪನೆ ಕಾರ್ಯ ಮುಂದುವರಿದಿದೆ ಎಂದರು.
ಉಪಸ್ಥಿತರಿದ್ದ ರಾಜ್ಯದ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ಗುರುಗಳು ದಕ್ಷಿಣ ಭಾರತದಿಂದ ಇಲ್ಲಿಗೆ ಬಂದು ಮಠವನ್ನು ಸ್ಥಾಪಿಸಿದ್ದಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು. ತಿರುಪತಿಯಲ್ಲಿಯೂ ಮಠವನ್ನು ಸ್ಥಾಪಿಸುವ ಹಂಬಲವಿದ್ದು ಅದು ಶೀಘ್ರದಲ್ಲಿ ನೆರವೇರಲಿದೆ ಎಂದರು.ವೇದಿಕೆಯಲ್ಲಿದ್ದ ಜುನಾಗಡದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಹೇಶ್ ಗುರೂಜಿ, ಇಂದ್ರಾನಂದ ಸ್ವಾಮೀಜಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಗೋವಿಂದ ಪೂಜಾರಿ, ಉತ್ತರಕಾಂಡ ರಾಜ್ಯದ ಮಾಜಿ ಸಚಿವ ಮದನ್ ಕೌಶಿಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಟ್ಕಳ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ವೆಂಕಟೇಶ್ ನಾಯ್ಕ ಸಿರಸಿ, ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಮಾಸ್ತಪ್ಪ ನಾಯ್ಕ, ಎಂ.ಎಚ್. ನಾಯ್ಕ ಕುಮಟಾ, ವಾಮನ್ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸುರೇಶ ನಾಯ್ಕ, ಭಟ್ಕಳ ಶ್ರೀರಾಮ ಕ್ಷೇತ್ರದ ಅಧ್ಯಕ್ಷ ಶ್ರೀಧರ ನಾಯ್ಕ ಮುಂತಾದವರಿದ್ದರು.