ತಂತ್ರಜ್ಞಾನ ಬದಲಾಗಬಹುದು, ಆದರೆ ಮಾಧ್ಯಮದ ಮೂಲ ಧರ್ಮವಾದ ಸತ್ಯ ಹೇಳುವುದು ಮತ್ತು ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ ಬದಲಾಗಬಾರದು.
ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ದಾಂಡೇಲಿತಂತ್ರಜ್ಞಾನ ಬದಲಾಗಬಹುದು, ಆದರೆ ಮಾಧ್ಯಮದ ಮೂಲ ಧರ್ಮವಾದ ಸತ್ಯ ಹೇಳುವುದು ಮತ್ತು ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ ಬದಲಾಗಬಾರದು ಎಂದು ಹಿರಿಯ ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ದಾಂಡೇಲಿ ಇವರ ಆಶ್ರಯದಡಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಂದು ಪತ್ರಿಕೆ ಎಂದರೆ ಕೇವಲ ಕಾಗದವಾಗಿರಲಿಲ್ಲ. ಒಂದು ಸುದ್ದಿ ಪ್ರಕಟವಾಗುವ ಮುನ್ನ ಮೂರು ಬಾರಿ ಪರಿಶೀಲನೆ ಮಾಡುತ್ತಿದ್ದರು. ಮುದ್ರಣಕ್ಕೆ ಮುಂಚೆ ಮನುಷ್ಯತ್ವ ಇತ್ತು. ಬೆಳಗ್ಗೆ ಪತ್ರಿಕೆಗಾಗಿ ಜನರು ಕಾಯುತ್ತಿದ್ದರು. ಆ ಒಂದೇ ಸುದ್ದಿ ಮರುದಿನ ಇಡೀ ಸಮಾಜದ ಚರ್ಚೆಯ ವಿಷಯವಾಗುತ್ತಿತ್ತು. ಸಂಪಾದಕರು ಸರ್ಕಾರದ ತಪ್ಪುಗಳನ್ನು ಪ್ರಶ್ನಿಸಿ, ಜನರ ಸಮಸ್ಯೆಗೆ ದನಿಯಾಗುತ್ತಿದ್ದರು ಎಂದು ನೆನಪಿಸಿಕೊಂಡರು.
ಇಂದು ಮಾಹಿತಿ 24x7 ಲಭ್ಯವಿದೆ. ಘಟನೆ ನಡೆದ ಎರಡೇ ನಿಮಿಷದಲ್ಲಿ ವಿಡಿಯೋ ವೈರಲ್ ಆಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ವೇಗದ ಜೊತೆಗೆ ನಿಖರತೆಯೂ ಮುಖ್ಯವಾಗಿದೆ. ಮೊಬೈಲ್ ಇದ್ದವನು ಪತ್ರಕರ್ತನಾಗಿರುವ ಈ ಕಾಲದಲ್ಲಿ ಸುಳ್ಳು ಸುದ್ದಿ ಹರಡದಂತೆ ಎಚ್ಚರ ವಹಿಸಬೇಕು. ಅಧಿಕಾರದ ದುರ್ಬಳಕೆ, ಭ್ರಷ್ಟಾಚಾರವನ್ನು ಪ್ರಶ್ನಿಸುವುದರ ಜೊತೆಗೆ ಕಾರ್ಮಿಕ, ರೈತ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ದನಿಯಾಗಬೇಕು ಎಂದು ಕರೆ ನೀಡಿದರು.ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಪತ್ರಿಕೆ ಓದಿದರೆ ಹೆಚ್ಚು ಜ್ಞಾನವನ್ನು ಸಂಪಾದಿಸಬಹುದು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಅಭದ್ರತೆಯ ನಡುವೆಯೂ ಸಮಾಜಮುಖಿಯಾಗಿ ಸಮಾಜಕ್ಕೆ ಬೆಳಕನ್ನು ಚೆಲ್ಲುವ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ, ತಾಪಂ ಇಒ ಟಿ.ಸಿ. ಹಾದಿಮನಿ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಡಿಜಿಎಂ ರಾಘವೇಂದ್ರ ಜೆ.ಆರ್. ಮಾತನಾಡಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುಶಾಂತ ಜಡೆಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತಹಶೀಲ್ದಾರ್ ಶೈಲೇಶ ಪರಮಾನಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಜೋಯಿಡಾ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ದೇಸಾಯಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ:ಕಳೆದ 10 ವರ್ಷಗಳಿಂದ ಪತ್ರಿಕೆ ವಿತರಣೆಯ ಜೊತೆಗೆ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅಕ್ಷಯಗಿರಿ ಗೋಸಾವಿ ಹಾಗೂ ಕಳೆದ 40 ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಮನೆ ಮನೆಗೆ ತೆರಳಿ ಚುರುಮುರಿ ವ್ಯಾಪಾರ ಮಾಡುವ ಮೂಲಕ ಪ್ರಾಮಾಣಿಕ ಜೀವನ ನಡೆಸುತ್ತಿರುವ ಹಿರಿಯ ಸಿಕಂದರ ಮುಗುಟಸಾಬ ತಿಗಡಿ ಅವರನ್ನು ಮತ್ತು ಕಳೆದ ಹಲವು ವರ್ಷಗಳಿಂದ ಚಹಾ ಅಂಗಡಿ ನಡೆಸುವ ಮೂಲಕ ತಮ್ಮ ಮೂವರು ಹೆಣ್ಮಕ್ಕಳಿಗೆ ಮಕ್ಕಳಿಗೆ ಎಂಜಿನಿಯರಿಂಗ್ ಪದವಿ ಶಿಕ್ಷಣ ನೀಡಿದ ಶ್ರಮಜೀವಿ ಎಂ.ಕೆ. ಮಹಾದೇವ ಕನಕಾಪುರ ಅವರನ್ನು ಸನ್ಮಾನಿಸಲಾಯಿತು.
ಮೌಲ್ಯ ಎಸ್.ಜೈನ್ ಮತ್ತು ಮಾನಸಾ ವಾಸರೆ ಪ್ರಾರ್ಥನೆ ಗೀತೆ ಹಾಡಿದರು. ಪತ್ರಕರ್ತ ಬಿ.ಎನ್. ವಾಸರೆ ಸ್ವಾಗತಿಸಿದರು.ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರವೀಣಕುಮಾರ ಸುಲಾಖೆ, ಖಜಾಂಚಿ ರಾಜೇಶ ತಳೇಕರ ಹಾಗೂ ಸದಸ್ಯ ಮಂಜುನಾಥ ಅಂಬಿಗೇರ ಸನ್ಮಾನಿತರನ್ನು ಪರಿಚಯಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರವೀಣಕುಮಾರ ಸುಲಾಖೆ ವಂದಿಸಿದರು. ಸಂಘದ ಜಿಲ್ಲಾ ಸಮಿತಿ ಸದಸ್ಯ ಸಂದೇಶ್ ಎಸ್.ಜೈನ್ ನಿರೂಪಿಸಿದರು. ಹಿರಿಯ ಪತ್ರಕರ್ತ ಕೃಷ್ಣಾ ಪಾಟೀಲ ಸಹಕರಿಸಿದರು.