ಸಾರಾಂಶ
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫ಼ಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳ ಪ್ರದರ್ಶನ ‘ಸ್ವ-ಕೃತಿ’ ನಡೆಯಿತು. ಮಣಿಪಾಲದ ಕಲಾವಿದೆ, ಉದ್ಯಮಿ ವನಿತಾ ಪೈ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ವಿದ್ಯಾರ್ಥಿಗಳು ಇತರರ ನೋವು - ನಲಿವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ ಕಲಾವಿದರಾಗಬಹುದು ಎಂದು ಮಣಿಪಾಲದ ಕಲಾವಿದೆ, ಉದ್ಯಮಿ ವನಿತಾ ಪೈ ಹೇಳಿದರು.ಅವರು ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫ಼ಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳ ಪ್ರದರ್ಶನ ‘ಸ್ವ-ಕೃತಿ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉತ್ತಮ ಕಲೆಗೆ ಯಾವುದೇ ಒಳದಾರಿಗಳಿಲ್ಲ. ಕಠಿಣ ಪರಿಶ್ರಮ ಮತ್ತು ಇತರರ ನೋವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಒಬ್ಬ ಉತ್ತಮ ಕಲಾವಿದನಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.ಸೃಜನಶೀಲ ಉದ್ಯಮಗಳಲ್ಲಿ ಕಲಾ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿವೆ. ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಮತ್ತು ತಮ್ಮ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಭಾರತದಲ್ಲಿ ಉತ್ತಮ ಕಲಾವಿದರಿದ್ದಾರೆ. ಉತ್ತಮ ಕಲಾ ಶಿಕ್ಷಣದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ವಿದ್ಯಾರ್ಥಿಗಳು ಅಪಾರ ಸಾಮರ್ಥ್ಯ ಹೊಂದಿದ್ದು, ಅದು ನಿಜವಾಗಿ ಅವರ ಪ್ರಾಜೆಕ್ಟ್‌ಗಳಲ್ಲಿ ಪ್ರತಿಫಲಿಸುತ್ತದೆ. ವಿಭಾಗದ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಇಂತಹ ಪ್ರಾಜೆಕ್ಟ್‌ಗಳ ಪ್ರೋತ್ಸಾಹಿಸುತ್ತವೆ ಎಂದರು.ಸಂಸ್ಥೆಯ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಇತರ ಕಲಾಸಕ್ತರು ಪ್ರದರ್ಶನಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಾಸಕ್ತಿಗೆ ಸಂತಸ ವ್ಯಕ್ತಪಡಿಸಿದರು.
ಎಸ್ಥೆಟಿಕ್ಸ್, ಇಕಾಸೊಫಿ, ಪೀಸ್ ಮತ್ತು ಮೀಡಿಯಾ ವಿದ್ಯಾರ್ಥಿಗಳಾದ ಶ್ರವಣ್ ಬಾಸ್ರಿ (ಛಾಯಾಗ್ರಹಣ -ತೆಯ್ಯಂ), ಚಿನ್ಮಯಿ ಬಾಲ್ಕರ್ (ಕಾವ್ಯದ ಮೇಲಿನ ವರ್ಣಚಿತ್ರಗಳು), ವೆಲಿಕಾ (ವಿನ್ಯಾಸ), ಆಕರ್ಷಿಕಾ ಸಿಂಗ್ (ಕವನ), ಡೆಸ್ಮಂಡ್ ದಾಸ್ (ಅವಿಭಜಿತ ದಕ್ಷಿಣ ಕನ್ನಡದ ಪ್ರವಾಸ ಪುಸ್ತಕ), ಸಂಪದ ಭಾಗವತ. (ಕಿರು ಚಲನಚಿತ್ರ) ದಿನವಿಡೀ ತಮ್ಮ ಪ್ರಾಜೆಕ್ಟ್‌ಗಳ ಪ್ರದರ್ಶನವನ್ನು ನಡೆಸಿಕೊಟ್ಟರು.