ಸಾರಾಂಶ
ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ
ಕನ್ನಡಪ್ರಭ ವಾರ್ತೆ ಹಾಸನ
ರಚಿತವಾದ ಸಾಹಿತ್ಯ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ಒಂದು ಉತ್ತಮ ಮಾರ್ಗವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೇಬರ್ ಟೂತ್ ಪ್ರಕಾಶನದಿಂದ ಪ್ರಕಟಿತವಾದ ಹರೀಶ್ ಕಟ್ಟೆ ಬೆಳಗುಳಿಯವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಲೇಖಕರು ಉತ್ತಮವಾದ ಕೃತಿಗಳನ್ನು ರಚಿಸಿದ್ದು, ಪ್ರಸ್ತುತ ಜನಮಾನಸದ ಬಗೆಯನ್ನು ತಮ್ಮ ಬರವಣಿಗೆಯಲ್ಲಿ ಅನಾವರಣಗೊಳಿಸಿದ್ದಾರೆ. ಪತ್ರಕರ್ತರೂ ಕೂಡ ಒಂದು ಬಗೆಯಲ್ಲಿ ಸಾಹಿತಿಗಳೇ, ಯಾವುದೇ ಕಾರ್ಯಕ್ರಮವಾದರೂ ಅದನ್ನು ಓದುಗರ ಬಳಿ ತಲುಪಿಸುವ ಕಾರ್ಯ ಮಾಡುತಿದ್ದು, ಅದನ್ನು ಅವಸರದ ಸಾಹಿತ್ಯ ಎನ್ನಬಹುದು ಎಂದು ಹೇಳಿದರು.
ಈ ಹಿಂದೆ ಡಿ.ವಿ.ಗುಂಡಪ್ಪನವರು ಕೂಡ ಅವರ ಕಾಲಘಟ್ಟದ ಬದುಕಿನ ರೀತಿ ನೀತಿಗಳನ್ನು ದೃಶ್ಯಕಾವ್ಯದಂತೆ ರಚಿಸಿದ್ದಾರೆ. ಅವರ ಮಂಕುತಿಮ್ಮನ ಕಗ್ಗ ಮೇರು ಕೃತಿಯಾಗಿದೆ, ಅವರು ಕೂಡ ಪತ್ರಕರ್ತರೇ ಅಗಿದ್ದರು, ಇದೇ ರೀತಿ ಹಲವಾರು ಮಹನೀಯರು ಪತ್ರಕರ್ತರಾಗಿದ್ದು, ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಹರೀಶ್ ಕಟ್ಟೆ ಬೆಳಗುಳಿಯವರು ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದಾರೆ, ಅದನ್ನು ಅವರು ಪ್ರಸ್ತುತ ಜಗತ್ತಿನ ಬಗ್ಗೆ ವಿಭಿನ್ನ ದೃಷ್ಟಿಕೋನ ಇಟ್ಟುಕೊಂಡು ಅಧ್ಯಯನ ಮಾಡಿ ಬರವಣಿಗೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ ಎಂದು ತಿಳಿಸಿದರು.ಸಾಹಿತ್ಯವು ಕೂಡ ಹೊಟ್ಟೆ ತುಂಬಿದ ಸಾಹಿತ್ಯ, ಹೊಟ್ಟೆ ಹಸಿವಿನ ಸಾಹಿತ್ಯ ಬೇರೆ ಬೇರೆ ರೀತಿಯದಾಗಿದ್ದು, ಹಸಿವಿನ ಸಾಹಿತ್ಯದ ಭಾವನೆಗಳೇ ಬೇರೆಯಾಗಿವೆ. ಪ್ರಸ್ತುತ ಮೊಬೈಲ್ ಹಾವಳಿಯಿಂದ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕ ಹರೀಶ್ ಕಟ್ಟೆ ಬೆಳಗುಳಿ ರಚಿತ ‘ಅನ್ನದ ಅಗುಳ ಅತ್ಮಲಿಂಗವಾಗಿಸಿ’, ‘ಸುಳ್ಳಾಡಿದನೆ ಸರ್ವಜ್ಞ’ ಹಾಗೂ ‘ಇದು ಹೂವಿನ ಲೋಕವೇ’ ಎಂಬ ಮೂರು ಕೃತಿಗಳ ಬಿಡುಗಡೆಯನ್ನು ಮೈಸೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಹಾಗೂ ಸಾಹಿತಿ ಎಂ.ಎಸ್.ಶೇಖರ್ ಮಾಡಿದರು. ಕೃತಿ ಪರಿಚಯವನ್ನು ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಮತ್ತು ಕವಿ ಡಾ. ಜಯಶಂಕರ್ ಹಲಗೂರ್ ಮತ್ತು ಹಿರಿಯ ಪತ್ರಕರ್ತ ದಯಾಶಂಕರ್ ಮೈಲಿ ಹಾಗೂ ಮಂಗಳೂರಿನ ವಕೀಲ, ಪತ್ರಕರ್ತ ಸುಕೇಶ್ ಕುಮಾರ್ ಶೆಟ್ಟಿ ನಡೆಸಿಕೊಟ್ಟರು.‘ಸುಳ್ಳಾಡಿದನೆ ಸರ್ವಜ್ಞ’ ಎಂಬ ಕೃತಿ ಪರಿಚಯವನ್ನು ಹಿರಿಯ ಪತ್ರಕರ್ತ ದಯಾಶಂಕರ್ ಮೈಲಿ ಮಾಡಿದರು. ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕ ಎಚ್.ಬಿ.ಮದನಗೌಡ, ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ.ಮಹಲಿಂಗಯ್ಯ ಅಮೋಘವಾಣಿ ಪತ್ರಿಕೆಯ ಸಂಪಾದಕ ರಂಗಸ್ವಾಮಿ ಎಸ್.ಡಿ. ಇದ್ದರು.