ಬಿಡದಿ ಟೌನ್ ಶಿಪ್ ಯೋಜನೆ ಕುರಿತ ಜಟಾಪಟಿ ತಾರಕಕ್ಕೇರಿದ್ದು, ಯೋಜನೆ ಪರ ಹಾಗೂ ವಿರೋಧವಾಗಿ ರೈತರ ಪ್ರತಿಭಟನೆ ಶನಿವಾರವೂ ಮುಂದುವರಿಯಿತು. ಬೈರಮಂಗಲಕ್ಕೆ ತೆರಳಿ, ಎಚ್.ಡಿ.ಕುಮಾರಸ್ವಾಮಿ 4 ತಾಸು ಸಿಎಂಗಾಗಿ ಕಾದು ಕುಳಿತಿದ್ದರು. ಆದರೆ, ಡಿಕೆಶಿ ಗೈರಾಗಿದ್ದು, ಯಾವುದೇ ಬಹಿರಂಗ ಚರ್ಚೆ ನಡೆಯಲಿಲ್ಲ.
ರಾಮನಗರ : ಬಿಡದಿ ಟೌನ್ ಶಿಪ್ ಯೋಜನೆ ಕುರಿತ ಜಟಾಪಟಿ ತಾರಕಕ್ಕೇರಿದ್ದು, ಯೋಜನೆ ಪರ ಹಾಗೂ ವಿರೋಧವಾಗಿ ರೈತರ ಪ್ರತಿಭಟನೆ ಶನಿವಾರವೂ ಮುಂದುವರಿಯಿತು. ಈ ಮಧ್ಯೆ, ಯೋಜನೆ ಕುರಿತಾಗಿ ರೈತರ ಸಮ್ಮುಖದಲ್ಲೇ ಚರ್ಚೆ ನಡೆಸೋಣ ಬೈರಮಂಗಲಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಶನಿವಾರ ಬಿಡದಿ ಸಮೀಪದ ಬೈರಮಂಗಲಕ್ಕೆ ತೆರಳಿ, 4 ತಾಸು ಸಿಎಂಗಾಗಿ ಕಾದು ಕುಳಿತಿದ್ದರು. ಆದರೆ, ಡಿಕೆಶಿ ಗೈರಾಗಿದ್ದು, ಉಭಯ ನಾಯಕರ ನಡುವೆ ಯಾವುದೇ ಬಹಿರಂಗ ಚರ್ಚೆ ನಡೆಯಲಿಲ್ಲ.
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಕುಮಾರಸ್ವಾಮಿಯವರು ಬೈರಮಂಗಲಕ್ಕೆ ಆಗಮಿಸಿ, ಡಿಕೆಶಿಗಾಗಿ ಕಾದು ಕುಳಿತರು. ಪ್ರತಿಭಟನಾನಿರತ ರೈತರ ಅಹವಾಲು ಆಲಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರೊಂದಿಗೆ ಸಂವಾದ ನಡೆಸಿದ ಎಚ್ಡಿಕೆ, ಬಿಡದಿ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನು ಲೂಟಿ ಹೊಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತು ಸಂಚು ರೂಪಿಸಿದ್ದಾರೆ. ಆ ಭೂಮಿಯನ್ನು ಕಸಿದುಕೊಳ್ಳಲು ನಾನು ಅವಕಾಶ ನೀಡುವುದಿಲ್ಲ. ರೈತರಿಗಾಗಿ ಯಾವ ಹಂತದ ಹೋರಾಟಕ್ಕೆ ಬೇಕಾದರೂ ಸಿದ್ಧನಾಗಿದ್ದೇನೆ ಎಂದು ಹೇಳಿದರು.
ಹತ್ತು ಲಕ್ಷ ಮರಗಳನ್ನು ಕಡಿದು ಟೌನ್ ಶಿಪ್ ಮಾಡಲು ಹೊರಟಿದ್ದಾರೆ
ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ 15 ಲಕ್ಷ ಸಸಿಗಳನ್ನು ನೆಡುತ್ತಿದ್ದಾರೆ. ಆದರೆ, ಇಲ್ಲಿ ಹತ್ತು ಲಕ್ಷ ಮರಗಳನ್ನು ಕಡಿದು ಟೌನ್ ಶಿಪ್ ಮಾಡಲು ಹೊರಟಿದ್ದಾರೆ. ಇದು ಇವರ ನೀತಿ. ರೈತರನ್ನು ಬಿಟ್ಟು ಚರ್ಚೆ ಮಾಡಲು ನಾನು ಸಿದ್ಧನಿಲ್ಲ. ಕೃಷ್ಣದಲ್ಲಿ ಚರ್ಚೆ ಮಾಡುವುದಾದರೆ ಇಲ್ಲಿನ ರೈತರನ್ನು ಕರೆಸಲಿ. ಅಲ್ಲಿ ಕೂಡಾ ನಾನು ಬಂದು ಚರ್ಚೆ ಮಾಡಲು ಸಿದ್ಧ. ಇದು ರಾಮನಗರ ಜಿಲ್ಲೆ. ಬೆಂಗಳೂರು ದಕ್ಷಿಣ ಅಂತ ಯಾವ ಕಾರಣಕ್ಕೂ ಹೇಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕನಸಿನ ಕೂಸು ಎನ್ನುತ್ತಾರೆ. ಆದರೆ, ಅಂದು ನಾನು ಜಾರಿ ಮಾಡಲು ಉದ್ದೇಶಿಸಿದ್ದ ಯೋಜನೆಯನ್ನು ಕೈಬಿಟ್ಟು ವಿಧಾನಸಭೆಯ ಕಲಾಪದಲ್ಲಿಯೇ ಘೋಷಣೆ ಮಾಡಿದ್ದೆ. ಅಂದು ನಾನು ಬೇಡ ಎಂದು ಕೈಬಿಟ್ಟಿದ್ದ ಟೌನ್ ಶಿಪ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ, ಅದರಲ್ಲಿಯೂ ಹಾಲಿ ಮುಖ್ಯಮಂತ್ರಿ ಜಾರಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಹೊಡೆದವರು ನೀವು. ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸ್ತೀನಿ ಅನ್ನುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಹುಟ್ಟಿ ಬರಬೇಕು ಎಂದು ಡಿಕೆಶಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ಡಿಕೆಶಿಗಾಗಿ ಕಾದು ಸುಸ್ತಾದ ಎಚ್ಡಿಕೆ, ಸಂಜೆ 4 ಗಂಟೆಗೆ ಅಲ್ಲಿಂದ ತೆರಳಿದರು.ಕೆಂಪು ಬಾವುಟ ಪ್ರದರ್ಶಿಸಿ ಎಚ್ಡಿಕೆಗೆ ಮುತ್ತಿಗೆಗೆ ಯತ್ನ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ಕುರಿತು ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿ ಬೈರಮಂಗಲ ವೃತ್ತಕ್ಕೆ ಆಗಮಿಸಿದಾಗ ಮತ್ತು ಅಲ್ಲಿಂದ ವಾಪಸ್ಸಾಗುವಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಕೆಂಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು.ಬೈರಮಂಗಲ ವೃತ್ತದಿಂದ ಕೂಗಳತೆ ದೂರದಲ್ಲಿರುವ ವೃಷಭಾವತಿ ಶಾಲೆ ಬಳಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಶನಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ರೈತರು ಕೆಂಪು ಬಾವುಟ ಪ್ರದರ್ಶಿಸಿ ಧಿಕ್ಕಾರ
ಮಧ್ಯಾಹ್ನ 12.20ರ ವೇಳೆಗೆ ಕಾರಿನಲ್ಲಿ ಬೈರಮಂಗಲ ವೃತ್ತದತ್ತ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ರೈತರು ಕೆಂಪು ಬಾವುಟ ಪ್ರದರ್ಶಿಸಿ ಧಿಕ್ಕಾರದ ಘೋಷಣೆ ಕೂಗಿದರು.ಈ ವೇಳೆ, ಕುಮಾರಸ್ವಾಮಿ ಅವರಿದ್ದ ಕಾರಿಗೆ ಮುತ್ತಿಗೆ ಹಾಕುವ ಕೆಲ ರೈತರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಇದರಿಂದ ಮತ್ತಷ್ಟು ಸಿಡಿದೆದ್ದ ರೈತರು, ಕುಮಾರಸ್ವಾಮಿಗೆ ಧಿಕ್ಕಾರ ಕೂಗಿದರು. ಅಲ್ಲದೆ, ಬೈರಮಂಗಲ ವೃತ್ತದಲ್ಲಿನ ಪ್ರತಿಭಟನೆ ಮುಗಿಸಿ ಸಂಜೆ 4 ಗಂಟೆಗೆ ಕುಮಾರಸ್ವಾಮಿಯವರು ವಾಪಸ್ ಬಿಡದಿಯತ್ತ ತೆರಳುತ್ತಿದ್ದ ವೇಳೆ ರೈತರು ಮತ್ತೆ ಕೆಂಪು ಬಾವುಟ ಪ್ರದರ್ಶಿಸಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪೊಲೀಸರು ಅವರನ್ನು ತಡೆದು, ಕುಮಾರಸ್ವಾಮಿಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರು. ಇದರಿಂದ ರೊಚ್ಚಿಗೆದ್ದ ರೈತರು, ಕುಮಾರಸ್ವಾಮಿಯ ಕಾರನ್ನು ಹಿಂಬಾಲಿಸಿದರು.ಈ ವೇಳೆ, ಪ್ರತಿಭಟನಾಕಾರರು, ಕೆಲ ಜೆಡಿಎಸ್ ಮುಖಂಡರ ಕಾರುಗಳನ್ನು ಅಡ್ಡಗಟ್ಟಿದಾಗ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಕೊನೆಗೆ, ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಜೆಡಿಎಸ್ ಮುಖಂಡರ ಕಾರುಗಳು ಮುಂದೆ ಸಾಗಲು ಅನುವು ಮಾಡಿಕೊಟ್ಟರು.
