ಹಲವು ಜನ್ಮಗಳ ಪುಣ್ಯದ ಫಲವೇ ಈ ಮನುಷ್ಯ ಜನ್ಮ: ಡಾ.ನಿರ್ಮಲಾನಂದನಾಥಶ್ರೀ

| Published : Dec 27 2024, 12:45 AM IST

ಹಲವು ಜನ್ಮಗಳ ಪುಣ್ಯದ ಫಲವೇ ಈ ಮನುಷ್ಯ ಜನ್ಮ: ಡಾ.ನಿರ್ಮಲಾನಂದನಾಥಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯನ ಜೀವ ಸೃಷ್ಟಿ ವಿಕಾಸದ ಪ್ರಕ್ರಿಯೆ ಹಾಗೂ ವಿಜ್ಞಾನದ ವಿಕಾಸದ ಪ್ರಕ್ರಿಯೆಯಲ್ಲಿ ಉನ್ನತ ಹಂತ ತಲುಪಿದೆ. ಆದರೆ, ಜಗತ್ತಿನಲ್ಲಿರುವ ಹಲವು ಜೀವರಾಶಿಗಳ ಪೈಕಿ ಎತ್ತರದ ಸ್ಥಾನದಲ್ಲಿರುವ ಮನುಷ್ಯ ಜಗತ್ತಿನ ಸುಖದ ಮೋಹಕ್ಕೆ ಸಿಲುಕಿದ್ದಾನೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದಿನ ಹಲವು ಜನ್ಮಗಳ ಪುಣ್ಯದ ಫಲದಿಂದ ಜನ್ಮ ತಾಳಿರುವ ಮನುಷ್ಯ ಜೀವಿಯೊಳಗಿರುವ ಸತ್ಯವನ್ನು ಅರಿಯಲು ಮೋಹವನ್ನು ತ್ಯಜಿಸಬೇಕಾದ ಅನಿವಾರ್ಯತೆ ಇದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಮಂಚಮ್ಮ ದೇವರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮ ಪ್ರವಚನದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಗತ್ತಿನ ಹಲವು ಜೀವರಾಶಿಗಳ ಪೈಕಿ ಮನುಷ್ಯನನ್ನು ಹೊರತುಪಡಿಸಿ ಉಳಿದ ಜೀವಿಗಳ ಭೋಗಕ್ಕೋಸ್ಕರ ಜೀವನ ನಡೆಸುತ್ತಿವೆ. ಅದು ಅಜ್ಞಾನದ ಫಲ ಎಂದರು.

ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯನ ಜೀವ ಸೃಷ್ಟಿ ವಿಕಾಸದ ಪ್ರಕ್ರಿಯೆ ಹಾಗೂ ವಿಜ್ಞಾನದ ವಿಕಾಸದ ಪ್ರಕ್ರಿಯೆಯಲ್ಲಿ ಉನ್ನತ ಹಂತ ತಲುಪಿದೆ. ಆದರೆ, ಜಗತ್ತಿನಲ್ಲಿರುವ ಹಲವು ಜೀವರಾಶಿಗಳ ಪೈಕಿ ಎತ್ತರದ ಸ್ಥಾನದಲ್ಲಿರುವ ಮನುಷ್ಯ ಜಗತ್ತಿನ ಸುಖದ ಮೋಹಕ್ಕೆ ಸಿಲುಕಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವು ಜನ್ಮಗಳ ಪುಣ್ಯವನ್ನು ಅಡವಿಟ್ಟು ಪಡೆದಿರುವ ಮನುಷ್ಯ ಜನ್ಮ ಪ್ರಾಣಿಗಳ ರೀತಿಯಲ್ಲೇ ಭೋಗದ ಜೀವನಕ್ಕೆ ಮೀಸಲಾಗಿಟ್ಟರೆ ವ್ಯತ್ಯಾಸವೇನು? ಮನುಷ್ಯ ಜನ್ಮವನ್ನು ನೀಡಿರುವ ಪರಮಾತ್ಮನನ್ನು ಸದಾಕಾಲ ಸ್ಮರಿಸುವ ಗುಣ ಹೊಂದಿರಬೇಕು. ಮನುಷ್ಯ ಅಲ್ಪ ಗುರಿ ಮತ್ತು ಸಾಧನೆಗೆ ತೃಪ್ತಿ ಹೊಂದದೇ ಉನ್ನತ ಗುರಿ ಮತ್ತು ಸಾಧನೆ ಹಂಬಲ ಹೊಂದಬೇಕು. ಚಿನ್ನಕ್ಕಿಂತ ವಜ್ರ ಶ್ರೇಷ್ಠವೆಂಬ ಅರಿವಿನಂತೆ ನಮ್ಮ ಶ್ರದ್ಧೆ ಮತ್ತು ಗುರು ಉನ್ನತವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕ್ಲೇಶದಿಂದ ಕೂಡಿರುವ ನಮ್ಮ ಮನಸ್ಸನ್ನು ಶುದ್ಧೀಕರಿಸಲು ದೇವರ ಮೊರೆ ಹೋಗಬೇಕು ಎಂಬ ಅಭಿಲಾಷೆಯಿಂದ ನಮ್ಮ ಹಿರಿಯರು ಹಲವು ಪರಂಪರೆಯನ್ನು ನಮಗೆ ಕರುಣಿಸಿದ್ದಾರೆ. ನಮ್ಮ ಮನಸ್ಸು ಎಲ್ಲವನ್ನೂ ಬೇಗ ಮರೆಯುವ ಗುಣ ಹೊಂದಿದೆ. ಜನ್ಮ ನೀಡಿದ ತಂದೆ, ತಾಯಿಗಳನ್ನು, ಸಹಾಯ ಮಾಡಿದವರನ್ನು ಮರೆಯುತ್ತೇವೆ. ಇದೇ ರೀತಿ ಮನುಷ್ಯ ಜನ್ಮ ಕರುಣಿಸಿದ ಭಗವಂತನನ್ನು ಮರೆಯಬಾರದೆಂಬ ದೃಷ್ಟಿಯಿಂದ ನಮ್ಮ ಅಹಂ ತಗ್ಗಿಸಲು ದೇವಾಲಯಗಳನ್ನು ನಮ್ಮ ಪೂರ್ವಿಕರು ನಿರ್ಮಿಸಿ ಹೋಗಿದ್ದಾರೆಂದು ತಿಳಿಸಿದರು.

ನಮ್ಮ ಬದುಕು ಚೆನ್ನಾಗಿರಲು ಗಾಳಿ, ನೀರು, ಬೆಳಕು, ಆಹಾರ ನೀಡಿರುವ ದೇವರಿಗೆ ಧನ್ಯವಾದ ಹೇಳಿದರೆ ಮತ್ತಷ್ಟನ್ನು ಕರುಣಿಸುತ್ತಾನೆ ಎಂಬ ಭಾವನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಸಂಪತ್ತು ಮತ್ತು ಜ್ಞಾನ ಬಂದ ವೇಳೆ ಅಹಂಕಾರ ಬಂದರೆ ಕೃತಜ್ಞರಾದರೆ, ಜ್ಞಾನಿಯಾಗದಿದ್ದರೆ ಭಗವಂತ ಮನಸ್ಸು ಹಾಗೂ ಬುದ್ದಿಯನ್ನು ಕೆಡಿಸುತ್ತಾನೆಂಬ ಅರಿವು ನಮ್ಮೆಲ್ಲರಿಗಿರಬೇಕು ಎಂದು ಹೇಳಿದರು.

ಕಲ್ಲಹಳ್ಳಿ ಗ್ರಾಮಸ್ಥರು ನೂತನವಾಗಿ ಶ್ರೀ ಮಂಚಮ್ಮ ದೇವಿ ದೇವಾಲಯ ನಿರ್ಮಾಣ ಮಾಡಿ ಲೋಕಾರ್ಪಣೆಗೊಂಡ ನಂತರ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಿದ್ದೀರಿ. ಅದೇ ರೀತಿ ದೇವಿಯ ಮುಂದೆ ಮನಸ್ಸನ್ನು ಶುದ್ಧಗೊಳಿಸುವಂತೆ ಜೀವನ ನಡೆಸಬೇಕು. ನಮ್ಮ ಮನಸ್ಸಿನಲ್ಲಿರುವ ಹಲವು ಆಲೋಚನೆಗಳನ್ನು ನಿಯಂತ್ರಿಸಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಶ್ರೀ ಮಠದ ಸಾಯಿ ಕೀರ್ತಿಜೀ ಮತ್ತು ಶಿವಾರ ಉಮೇಶ್ ತಂಡದವರಿಂದ ಭಕ್ತಿಗೀತೆಗಳನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ ಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ರವಿ, ಶಿವಲಿಂಗು, ಪತ್ರಕರ್ತರಾದ ಕೆ.ಸಿ.ಮಂಜುನಾಥ್, ಸಿ.ಎನ್.ಮಂಜುನಾಥ್, ಗ್ರಾಮದ ಮುಖಂಡ ಕೆ.ಗುರುಸ್ವಾಮಿ, ಶ್ರೀಮಂಚಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ರಾಮಲಿಂಗಯ್ಯ, ಗೌರವಾಧ್ಯಕ್ಷ ಕೆ.ಎಲ್.ಶಿವರುದ್ರು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ, ಕಾರ್ಯದರ್ಶಿ ಕೆ.ಸಿ.ರವೀಂದ್ರ, ಟ್ರಸ್ಟಿಗಳಾದ ಕೆ.ಎಂ.ಉಮೇಶ್, ಕಿರಣ್ ಉಪಸ್ಥಿತರಿದ್ದರು.