ವಿಜೃಂಭಣೆಯಿಂದ ನಡೆದ ಶ್ರೀರಂಗಪಟ್ಟಣದ ಶ್ರೀನಿಮಿಷಾಂಬ ದೇವಿ ವರ್ಧಂತೋತ್ಸವ

| Published : May 08 2025, 12:35 AM IST

ಸಾರಾಂಶ

ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ ಐತಿಹಾಸಿಕ ಪ್ರಸಿದ್ಧ ಆದಿದೇವತೆ ಶ್ರೀನಿಮಿಷಾಂಬ ದೇವಿ ವರ್ಧಂತೋತ್ಸವ ವಿಜೃಂಭಣೆಯಿಂದ ನಡೆಯಿತು.ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಮಿಷಾಂಬ ದೇವಿ ದರ್ಶನ ಪಡೆದರು. ದೇವಾಲಯದಲ್ಲಿ ದೇವಿಗೆ ವಜ್ರ ವೈಡೂರ್ಯಗಳಿಂದ ಅಲಂಕರಿಸಿ, ವಿಶೇಷ ಪೂಜೆ, ಹೋಮ, ಹವನಗಳು ನಡೆದು ಪೂರ್ಣಾಹುತಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ ಐತಿಹಾಸಿಕ ಪ್ರಸಿದ್ಧ ಆದಿದೇವತೆ ಶ್ರೀನಿಮಿಷಾಂಬ ದೇವಿ ವರ್ಧಂತೋತ್ಸವ ವಿಜೃಂಭಣೆಯಿಂದ ನಡೆಯಿತು.ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಮಿಷಾಂಬ ದೇವಿ ದರ್ಶನ ಪಡೆದರು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತ, ಜಿಲ್ಲಾಧಿಕಾರಿ ಹಾಗೂ ದೇವಾಲಯ ಸಮಿತಿ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ, ಅಮ್ಮನವರ ಜಯಂತೋತ್ಸವದ ಅಂಗವಾಗಿ ಕಾವೇರಿ ನದಿಯಿಂದ ಪೂರ್ಣಕುಂಬ ಕಳಸ ತಂದು ಪ್ರತಿಸ್ಥಾಪಿಸಲಾಯಿತು.

ದೇವಾಲಯದಲ್ಲಿ ದೇವಿಗೆ ವಜ್ರ ವೈಡೂರ್ಯಗಳಿಂದ ಅಲಂಕರಿಸಿ, ವಿಶೇಷ ಪೂಜೆ, ಹೋಮ, ಹವನಗಳು ನಡೆದು ಪೂರ್ಣಾಹುತಿ ನಡೆಸಲಾಯಿತು. ದೇವಾಲಯ ಸೇರಿದಂತೆ ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ, ದೀಪಾಲಂಕಾರ ಇತರ ಸೇವೆಗಳು ನಡೆದು ಬೆಳಿಗ್ಗೆ 8ಕ್ಕೆ ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶ ಪೂಜೆಯಿಂದ ಪ್ರಾರಂಭಗೊಂಡು ನಿಮಿಷಾಂಬ ಹೋಮ ಪೂರ್ಣಾಹುತಿಯೊಂದಿಗೆ 121 ಕಲಶಗಳ ಮಹಾಭಿಷೇಕ, ಅಷ್ಟದಿಗ್ಬಲಿ ಪೂಜೆ ಕಾರ್ಯಕ್ರಮ ನಡೆಯಿತು.

ದೇವಿಯ ದರ್ಶನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು. ಸಂಜೆ ದಕ್ಷಿಣ ಗಂಗೆ ಕಾವೇರಿ ಮಹಾಮಂಗಳಾರತಿ, ಪ್ರಾಕಾರೋತ್ಸವ ಸೇವೆಗಳು ವೈಭವಯುತವಾಗಿ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ವಿಶೇಷ ದರ್ಶನ ಪಡೆದರು.

ರಾತ್ರಿ ಶ್ರೀನಿಮಿಷಾಂಬ ದೇವಿ ಉತ್ವವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಸ್ಥಾಪಿಸಿ ಬಗೆ ಬಗೆಯ ಹೂವು ವಿದ್ಯುತ್ ದೀಪಗಳಿಂದ ಅಲಂಕರಿಸಿ ಗಂಜಾಂನ ಪ್ರಮುಖ ಬೀದಿಯಲ್ಲಿ ಮಂಗಳ ವಾದ್ಯ ದೊಂದಿಗೆ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ, ಮೆರವಣಿಗೆ ಮಾಡಲಾಯಿತು. ರಸ್ತೆಯಲ್ಲಿ ದೇವಿ ಮೆರವಣಿಗೆ ಬರುವಾಗ ಮನೆ ಮನೆಗಳಲ್ಲಿ ಭಕ್ತರು ದೇವಿಗೆ ಹಣ್ಣು ಕಾಯಿ ಹೊಡೆದು ಆರತಿ ಪೂಜೆ ಸಲ್ಲಿಸಿದರು.

ಎಡಿಸಿ ಶಿವಾನಂದಮೂರ್ತಿ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ದೇಗುಲ ಸಮಿತಿ ಅಧ್ಯಕ್ಷ ದಯಾನಂದ್, ದೇಗುಲದ ಇಒ ಸಿ.ಜಿ. ಕೃಷ್ಣ, ವ್ಯವಸ್ಥಾಪಕ ಚಂದ್ರಮೋಹನ್ ಕೆ.ಪಿ, ಸಮಿತಿ ಸದಸ್ಯರಾದ ಬಾಲಸುಬ್ರಮಣ್ಯ, ಪೂರ್ಣಪ್ರಜ್ಞಮೂರ್ತಿ, ಭಾಗ್ಯಲಕ್ಷ್ಮಿ, ರಂಗಸ್ವಾಮಿ, ಸುಮಲತಾ ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.