ಎಷ್ಟೇ ಚಳಿ, ಮಳೆ, ಗಾಳಿ ಇದ್ದರೂ ಕೆಲವು ಉದ್ಯೋಗಗಳನ್ನು ಮಾಡುವವರು ಅನಿವಾರ್ಯವಾಗಿ ಈ ಮೈಕೊರೆಯುವ ಚಳಿ ಎದುರಿಸಿ ರಸ್ತೆಗಿಳಿಯುತ್ತಾರೆ.

ಶರಣು ಸೊಲಗಿ

ಮುಂಡರಗಿ: ಕಳೆದ 5-6 ದಿನಗಳಿಂದ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಮೈಕೊರೆಯುವ ಚಳಿ ಪ್ರಾರಂಭವಾಗಿದೆ. ಚಳಿಯಿಂದಾಗಿ ಜನತೆ ತತ್ತರಿಸಿ ಹೋಗಿದ್ದು, ಬೆಳಗಿನ ಜಾವ ಕೊಪ್ಪಳ ವೃತ್ತ, ಗದಗ ರಸ್ತೆ, ಬಜಾರದಲ್ಲಿ, ಬಸ್ ನಿಲ್ದಾಣದ ಹತ್ತಿರ ಹೀಗೆ ಎಲ್ಲೆಂದರಲ್ಲಿ ಹಾಳೆ, ರಟ್ಟಿಗೆ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಹೆಚ್ಚಿನ ಚಳಿ ಇರುವುದರಿಂದ ಪ್ರತಿದಿನ ಬೆಳಗ್ಗೆ 5.30ರಿಂದ 6 ಗಂಟೆ ಸಮಯದಲ್ಲಿ ವಾಯುವಿಹಾರಕ್ಕೆಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ ಹೆಸರೂರ ರಸ್ತೆ, ರಾಮೇನಹಳ್ಳಿ ರಸ್ತೆ, ಮುಂಡರಗಿ-ಶಿರಹಟ್ಟಿ ರಸ್ತೆ, ಕೊಪ್ಪಳ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ಕರ್ನಾಟಕ ಗೃಹ ಮಂಡಳಿ ರಸ್ತೆ, ಗದಗ ಮುಂಡರಗಿ ರಸ್ತೆ, ಕನಕರಾಯಣ ಗುಡ್ಡದ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಸೂರ್ಯನ ಆಗಮನದ ನಂತರವೇ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಎಷ್ಟೇ ಚಳಿ, ಮಳೆ, ಗಾಳಿ ಇದ್ದರೂ ಕೆಲವು ಉದ್ಯೋಗಗಳನ್ನು ಮಾಡುವವರು ಅನಿವಾರ್ಯವಾಗಿ ಈ ಮೈಕೊರೆಯುವ ಚಳಿ ಎದುರಿಸಿ ರಸ್ತೆಗಿಳಿಯುತ್ತಾರೆ. ದಿನಪತ್ರಿಕೆ ತಲುಪಿಸುವವರು, ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ಅವುಗಳನ್ನು ಸರಬರಾಜು ಮಾಡುವ ರೈತರು, ಪುರಸಭೆ ಪೌರ ಕಾರ್ಮಿಕರು ಚಳಿಯಲ್ಲಿಯೇ ನಡುಗುತ್ತ ತಮ್ಮ ಕಾಯಕ ಮಾಡುತ್ತಾರೆ. ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಬೆಳಗ್ಗೆ ಚಳಿಗೆ ನಡುಗಿ ಮುದುಡಿಕೊಂಡು ಬರುತ್ತಿರುವುದನ್ನು ಕಾಣಬಹುದು.

ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯ ನಂತರ, ಸಂಜೆ 6.30ರ ಒಳಗೆ ಮುಗಿಸಿಕೊಳ್ಳುತ್ತಿದ್ದಾರೆ.

ದಮ್ಮು, ಕೆಮ್ಮು, ಅಸ್ತಮಾ, ಸಂಧಿವಾತ, ಕೀಲುನೋವು, ಚರ್ಮ ಬಿರಿಯುವುದು, ಮುಖ ಒಡೆಯುವುದು, ಸ್ಕಿನ್ ತೊಂದರೆ ಈ ಸಂದರ್ಭದಲ್ಲಿ ಹೆಚ್ಚು ಕಾಡುತ್ತಿದ್ದು, ಹಲವರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ದಮ್ಮು ಹಾಗೂ ಅಸ್ತಮಾ ಕಾಯಿಲೆ ಇರುವವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ನಾವು ಬೆಳಗ್ಗೆ 7 ಗಂಟೆಗೆ ಮುಂಡರಗಿ ತರಕಾರಿ ಮಾರುಕಟ್ಟೆಗೆ ಬಂದು ತರಕಾರಿ, ಸೊಪ್ಪಿನ ವ್ಯಾಪಾರ ಪ್ರಾರಂಭಿಸುತ್ತಿದ್ದೇವೆ. ಇದೀಗ ಹೆಚ್ಚಿನ ಚಳಿ ಇರುವುದರಿಂದ ನಾವು ಸಹ ಸ್ವಲ್ಪ ತಡವಾಗಿ ಬರುತ್ತಿದ್ದು, ಗ್ರಾಹಕರು ಇನ್ನೂ ಲೇಟಾಗಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಬೆಳಗ್ಗೆ ವ್ಯಾಪಾರ ಇಲ್ಲದೇ ಮಾರುಕಟ್ಟೆ ಬಣಗುಡುತ್ತಿರುತ್ತದೆ ಎಂದು ಸೊಪ್ಪು ತರಕಾರಿ ವ್ಯಾಪಾರಸ್ಥರಾದ ಜಿ. ಮಂಜುನಾಥ ತಿಳಿಸಿದರು.