ಅಚ್ಚೇದಿನ್‌ ಎಂದು ದೇಶ ದಿವಾಳಿ ಮಾಡಿದ ಬಿಜೆಪಿ ಸರ್ಕಾರ

| Published : Apr 26 2024, 12:45 AM IST

ಸಾರಾಂಶ

ಅಚ್ಚೇದಿನ್ ಎಂದು ಹೇಳಿ ಬಿಜೆಪಿಯವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಅಚ್ಚೇದಿನ್ ಎಂದು ಹೇಳಿ ಬಿಜೆಪಿಯವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.

ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯ ಬಳಕೆಯಲ್ಲಿರುವ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಬಡವರ ಹೊಟ್ಟೆಯ ಮೇಲೆ ಹೊಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲವೂ ಬಡವರ ಕೈಗೆಟುಕುವ ವಸ್ತುಗಳು ದೊರೆಯುತ್ತಿದ್ದವು. ಹಾಗಾಗಿ ಯಾರೂ ಬಣ್ಣದ ಮಾತಿಗೆ ಮರುಳಾಗದೇ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪ್ರೊ.ರಾಜು ಆಲಗೂರ ಅವರಿಗೆ ಮತ ನೀಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಪಂಚ ನ್ಯಾಯ ಗ್ಯಾರಂಟಿಗಳು ಜಾರಿಗೆ ಬರಲಿವೆ ಎಂದು ಹೇಳಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗೇ ಬರಿ ಮಾತು ಹೇಳುವ ಪಕ್ಷವಲ್ಲ. ನುಡಿದಂತೆ ನಡೆಯುವ ಪಕ್ಷವಾಗಿದೆ. ಯಾವುದೇ ಆಸೆ, ಸುಳ್ಳಿಗಾಗಿ ಮತ ಹಾಕದೇ ಅಭಿವೃದ್ಧಿಯ ಹರಿಕಾರರಿಗೆ ಮತ ನೀಡಿ. ಪಕ್ಷ ಅಧಿಕಾರಕ್ಕೆ ಬಂದರೆ ಪತ್ರಿವರ್ಷ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದೇವೆ. 10 ವರ್ಷದಲ್ಲಿ 20 ಕೋಟಿ ಯುವಕರಿಗೆ ಉದ್ಯೋಗ ದೊರೆಯಬೇಕಿತ್ತು. ಆದರೆ ಯಾವ ಯುವಕರಿಗೂ ದೊರೆಯಲಿಲ್ಲ. ಬಿಜೆಪಿಯವರು ಕಪ್ಪು ಹಣ ತರುತ್ತೇವೆ ಎಂದಿದ್ದರು. ಅದು ಬರಲಿಲ್ಲ. ನೋಟ್ ಬ್ಯಾನ್ ಮಾಡಿ ಕಪ್ಪು ಹಣವನ್ನು ಬಿಳಿ ಹಣ ಮಾಡಿದ್ದೀರಿ, ಇವೆಲ್ಲವೂ ಬಿಜೆಪಿಗೆ ಅಚ್ಚೇದಿನ್‌ಗಳೇ ಎಂದರು.

ಇದೇ ಸಂದರ್ಭದಲ್ಲಿ ಅಭ್ಯರ್ಥಿ ರಾಜು ಆಲಗೂರ, ಶಾಸಕ ಯಶವಂತ್ರಾಯಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾಧ್ಯಕ್ಷ ಮಲ್ಲಕಾರ್ಜುನ ಲೋಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕಾಂತಾ ನಾಯಕ, ಎಸ್.ಎಂ.ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಬಾಬುರಾಜೇಂದ್ರ ನಾಯಕ್, ಸುರೇಶ ಪೂಜಾರ, ಸಾಧಿಕ್ ಸುಂಬಡ, ಜಯಶ್ರೀ ಹದನೂರ, ಹಣಮಂತ ಸುಣಗಾರ, ಗುರುರಾಜಗೌಡ ಪಾಟೀಲ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.