ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸರ್ವಾಧಿಕಾರ ಆಡಳಿತ ನಡೆಸುವ ಮೂಲಕ ಸಂವಿಧಾನದ ವ್ಯವಸ್ಥೆಗಳನ್ನು ಬುಡಮೇಲು ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ದೇವಸಮುದ್ರ ಪರಮೇಶ್ವರಪ್ಪ ಚೌಕಿ ಮಠದ ಸಭಾಂಗಣದಲ್ಲಿ ಬುಧವಾರ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಶಕಗಳಿಂದಲೂ ದೇಶದ ಬಡಜನರ, ಕೂಲಿ ಕಾರ್ಮಿಕರ ನೆರವಿಗೆ ಕಾಗ್ರೆಸ್ ಪಕ್ಷದಿಂದ ಚಾರಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರದ ಬಿಜೆಪಿ ಬೇರೆ ಹೆಸರು ಬದಲಾಯಿಸಿದ್ದಾರೆ. ಇದು ಜನವಿರೋಧಿ ನೀತಿಯಾಗಿದೆ. ಸಂವಿಧಾನ ವ್ಯವಸ್ಥೆಯನ್ನು ಗಾಳಿಗೆ ತೂರುವ ಕಾರ್ಯ ಮಾಡಿದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಬಲಿಷ್ಟವಾಗಿದೆ. ಕೇವಲ ಒಂದೇ ಒಂದು ಕರೆಗೆ ಪಾದಯಾತ್ರೆಯಲ್ಲಿ ಹೆಚ್ಚು ಜನರು ಸೇರಿದ್ದು ನನಗೆ ಹೆಚ್ಚು ಸಂತಸ ತಂದಿದೆ. ಬಿಜೆಪಿ ಕಾರ್ಯಕರ್ತರು ಸದಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಮೇಲುಗೈ ಎಂದು ಬಡಾಯಿಸುತ್ತಾರೆ. ಇಂದು ಕೇವಲ ಮಾತಿಗಷ್ಟೆ ಸೀಮಿತವಾದ ವಿಷಯವಾಗಿದೆ. ಪ್ರತಿ ಗ್ರಾಮದಲ್ಲಿಯೂ ಪಕ್ಷವು ನಳನಳಿಸುತ್ತಿದೆ. ಕಾರ್ಯಕರ್ತರು ಪ್ರತಿಹಳ್ಳಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಜಾಗೃತಿ ಮೂಡಿಸಬೇಕು ಎಂದರು.


ಆನೇಕರು ನನ್ನನ್ನು ಕೋಪಿಷ್ಟ, ಬೈತಾರೆ ಎಂದೆಲ್ಲಾ ಮಾತನಾಡುತ್ತಾರೆ, ಅದೇ ರೀತಿ ವಿಶ್ವಾಸ ಇರುವ ಕಡೆ ಮಾತ್ರ ಕೋಪ, ತಾಪ ಬರುತ್ತದೆ, ಯಾವುದೇ ಗ್ರಾಮದ ಕಾರ್ಯಕರ್ತರು ಬಂದು ಇದು ಉತ್ತಮ ಕೆಲಸ ಎಂದು ತಿಳಿಸಿದಾಗ ನಾನು ಸಕಾರಾತ್ಮಕವಾಗಿ ಸಂಧಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ನಾನೆಂದಿಗೂ ರಾಜಿ ಮಾಡಿಕೊಳ್ಳಲಾರೆ ಎಂದರು.

ದ್ರಾಕ್ಷಿರಸ ಮತ್ತು ವೈನ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜನತಂತ್ರ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ. ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ಜನವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಅನುದಾನ ನೀಡುತ್ತೇವೆಂದು ಬರವಸೆ ನೀಡಿದ್ದರೂ ಹಣ ನೀಡುವಲ್ಲಿ ನಿರ್ಲಕ್ಷ ವಹಿಸಿದೆ. ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಹೆಸರನ್ನು ತೆಗೆದು ಬೇರೊಂದು ಹೆಸರು ಇಡಲಾಗಿದೆ.ಇದು ಗಾಂಧೀಜಿಗೆ ಮಾಡಿದ ಅವಮಾನವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ರಾಂಪುರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಕರೆ ಕೊಂಡಾಪುರದ ಮೂಲಕ ದೇವಸಮುದ್ರ ಪರಮೇಶ್ವರಪ್ಪ ಚೌಕಿಮಠದ ಆವರಣದಲ್ಲಿ ಸಮಾವೇಶಗೊಳ್ಳಲಾಯಿತು. ಮೆರವಣಿಗೆಯಲ್ಲಿ ಕಾರ್ಯಕರ್ತರು ಪಕ್ಷದ ಬೃಹತ್ ಬಾವುಟಗಳನ್ನು ಹಿಡಿದು ಉತ್ಸಾಹದಿಂದಲೇ ಹೆಜ್ಜೆ ಹಾಕಿದ್ದು ಕಂಡು ಬಂತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೈಲಾರಪ್ಪ, ಸಂಪತ್ ಕುಮಾರ್, ಉಪಾಧ್ಯಕ್ಷ ಕುಮಾರ್ ಗೌಡ, ಹಿರಿಯ ಮುಖಂಡ ಬಾಲರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಉಲ್ಲಾ, ತಾಲೂಕು ಬ್ಲಾಕ್ ನಾಗೇಶ್ ರೆಡ್ಡಿ, ಅಬ್ದುಲ್ ಸುಭಾನ್ ಸಾಬ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎನ್.ವೈ.ಚೇತನ್, ಬಿ.ಟಿ.ನಾಗಭೂಷಣ, ದೇವಸಮುದ್ರ ಪರಮೇಶ್ವರಪ್ಪ, ಕುಮಾರ ಸ್ವಾಮಿ,ಯುವ ಕಾಂಗ್ರೆಸ್ ಅಧ್ಯಕ್ಷ ಧನಂಜಯ,ತುಮಕೂರ್ಲಹಳ್ಳಿ ತಿಪ್ಪೇಸ್ವಾಮಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಂಪುರ ವೆಂಕಟೇಶ್, ಜಗದೀಶ್ ಇದ್ದರು.