ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿವಿಯಲ್ಲಿ ಈ ಹಿಂದೆ ಸಂಜೆಯ ನಂತರವೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅಧ್ಯಯನ, ಸಂಶೋಧನೆಯಲ್ಲಿ ತೊಡಗಿರುತ್ತಿದ್ದರು. ಆದರೆ ಈಗ ಅದೆಲ್ಲವೋ ಕನಸಾಗಿ ಬಿಟ್ಟಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಕಳವಳ ವ್ಯಕ್ತಪಡಿಸಿದರು.ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ಡಾ.ಎಸ್.ಎನ್. ಹೆಗಡೆ ಅಭಿನಂದನ ಸಮಿತಿ ಹಾಗೂ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಎಸ್.ಎನ್. ಹೆಗಡೆ ಅವರ ಅಭಿನಂದನ ಸಮಾರಂಭ ವಿಜ್ಞಾನ ವತ್ಸಲ ಅಭಿನಂದನ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಎಸ್.ಎನ್. ಹೆಗಡೆ ಅವರು ಪ್ರಾಧ್ಯಾಪಕರಾಗಿದ್ದ ಅವಧಿಯಲ್ಲಿ ವಿವಿಯಲ್ಲಿ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಧ್ಯಾಪಕರಲ್ಲಾಗಲಿ ಅಥವಾ ವಿದ್ಯಾರ್ಥಿಗಳಲ್ಲಾಗಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ. ಇದು ಬಹುತೇಕ ವಿವಿಗಳಲ್ಲಿ ಕಂಡುಬರುತ್ತಿರುವುದು ಕಳವಳ ಮೂಡಿಸಿದೆ.ವಿಜ್ಞಾನಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು ಎಲ್ಲರೂ ತರಗತಿಯಲ್ಲಿ ಸಂಶೋಧನೆಯಲ್ಲಿ ತೊಡಗುತ್ತಿದ್ದ ಕಾಲವೂ ಇತ್ತು. ಅಂತೆಯೇ ಗ್ರಂಥಾಲಯಗಳಲ್ಲಿ ಸಂಜೆಯ ನಂತರವೂ ಅಧ್ಯಯನದಲ್ಲಿ ತೊಡಗಿರುತ್ತಿದ್ದರು. ಆದರೆ ಈಗ ಅದೆಲ್ಲವೋ ಕನಸಿರಬೇಕು ಎನಿಸುತ್ತದೆ ಎಂದರು.ಹೆಗಡೆ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯನಿರ್ವಹಿಸಿದ ವೇಳೆ ಹತ್ತಾರು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದರು. ಇವರ ಅಂತಹ ಉತ್ತಮ ಕೆಲಸದಿಂದ ನೂರಾರು ಪುಸ್ತಕಗಳು ಹೊರಬಂದು ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಆದರೆ ಅಲ್ಲಿ ಈಗ ಪ್ರಸಾರಾಂಗದ ಕಾರ್ಯ ಸ್ಥಗಿತಗೊಂಡಿದ್ದು, ಏಕೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.ವಿಜ್ಞಾನ ಸಂಬಂಧಿತ ಪುಸ್ತಕ, ಲೇಖನಗಳನ್ನು ಕನ್ನಡ ಭಾಷೆಯಲ್ಲಿ ಅತ್ಯದ್ಭುತವಾಗಿ ಬರೆಯುವುದನ್ನು ಹೆಗಡೆ ಅವರು ರೂಢಿಸಿಕೊಂಡಿದ್ದಾರೆ. ಅವರ ಪುಸ್ತಕಗಳು ಇಂದಿಗೂ ಅನೇಕರಿಗೆ ದಾರಿ ದೀಪವಾಗಿ, ನಮ್ಮ ಭಾಷೆಯಲ್ಲಿ ವಿಜ್ಞಾನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.ವಿಶ್ರಾಂತ ಪ್ರಾಧ್ಯಾಪಕ ಕೆ.ಆರ್. ಕೃಷ್ಣಯ್ಯ ಕೃತಿ ಪರಿಚಯಿಸಿದರು. ಜಾನಪದ ತಜ್ಞ ಹಾಗೂ ವಿಜ್ಞಾನ ವತ್ಸಲ ಅಭಿನಂದನ ಗ್ರಂಥದ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಎಸ್.ಎನ್. ಹೆಗಡೆ ಅವರನ್ನು ಅಭಿನಂದಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))