ಹೆಂಡತಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಲೆಮಾಡಿ ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಮಂಜುನಾಥ್ ಅವರ ತೋಟದಲ್ಲಿ ನಡೆದಿದೆ.

ಶಿವಮೊಗ್ಗ: ಹೆಂಡತಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಲೆಮಾಡಿ ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಮಂಜುನಾಥ್ ಅವರ ತೋಟದಲ್ಲಿ ನಡೆದಿದೆ.

ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದವ. ಆತನ ಹಿರಿಯ ಸಹೋದರ ಮಾಲತೇಶ್ ಕೊಲೆ ಆರೋಪಿ.ಪುತ್ರ ರಾಮಚಂದ್ರ ಕಳೆದ ಸೆಪ್ಟೆಂಬರ್ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕೆಲವು ದಿನಗಳ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪ್ರಕರಣದಲ್ಲಿ ಕಾಣೆಯಾದವ ಪತ್ತೆಯಾಗಿರಲಿಲ್ಲ. ಆದಾಗ್ಯು ಅನುಮಾನ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ಜಾಡು ಬದಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಸಾಕಷ್ಟು ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ರಾಮಚಂದ್ರರವರ ಸಹೋದರ ಮಾಲತೇಶ್ ರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.ಯಾವಾಗ ಪೊಲೀಸರ ವಿಚಾರಣೆಯು ಜೋರಾಯ್ತೋ ಮಾಲತೇಶ್ ನಡೆದಿದ್ದನ್ನು ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ. ತಮ್ಮ ರಾಮಚಂದ್ರ ತನ್ನ ಪತ್ನಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ಮಾಲತೇಶ್ ಒಪ್ಪಿಕೊಂಡಿದ್ದಾನೆ.ಜೇಡಗೇರಿ ಗ್ರಾಮದಲ್ಲಿ ಮಂಜುನಾಥ್ ಅವರ ತೋಟ ಕಾಯಲು ಮಾಲತೇಶ್ ಹಾಗೂ ಅವರ ಹೆಂಡತಿ ನೆಲೆಸಿದ್ದರು. ಆರೋಪಿ ತನ್ನ ತಮ್ಮನನ್ನು ಕೊಲೆ ಮಾಡಿ ಹೂತು ಹಾಕಿದ್ದ. ಯಾವುದೋ ಕಾರ್ಯಕ್ರಮವೊಂದನ್ನು ನಿಮಿತ್ತಮಾಡಿ ರಾಮಚಂದ್ರರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ ಆತನನ್ನು ಕೊಲೆ ಮಾಡಿ ಹೂತು ಹಾಕಿದ್ದ. ಇನ್ನೂ ಕಳೆದ ಮಂಗಳವಾರ ಪೊಲೀಸರು ಆಡಳಿತ ವ್ಯವಸ್ಥೆಯ ಸಮಕ್ಷಮದಲ್ಲಿ ಕಳೇಬರ ಹೊರತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಕೊಲೆ ಮಾಡಲು ತಿಂಗಳ ಹಿಂದೆ ಪ್ರೀಪ್ಲಾನ್

ತನ್ನ ತಮ್ಮನನ್ನು ಕೊಲೆ ಮಾಡಲು ಒಂದು ತಿಂಗಳ ಹಿಂದೆಯೆ ಪ್ರೀಪ್ಲಾನ್ ಮಾಡಿಕೊಂಡಿದ್ದ ಅಣ್ಣ ಮಾಲತೇಶ್, ಆತನಿಗೆ ತನ್ನ ಪತ್ನಿಯ ಜೊತೆಗೆ ಸಲುಗೆಯಿಂದ ಇರಬೇಡ ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ರಾಮಚಂದ್ರ ಅಣ್ಣ ಮಾತನ್ನ ಕೇಳಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಲು ತೀರ್ಮಾನಿಸಿದ್ದ ಎಂದು ಎಸ್ಪಿ ಮಿಥುನ್ ಕುಮಾರ್.ಜಿ.ಕೆ ತಿಳಿಸಿದರು.ರಾಮಚಂದ್ರನಿಗೆ ಮದುವೆ ಮಾಡುವ ಪ್ರಸ್ತಾಪ ಮಾಡಿ, ಮದುವೆ ಮಾಡಿಸಲು ಸ್ವಾಮೀಜಿಯವರು ಪೂಜೆ ಹೇಳಿದ್ದಾರೆ ಎಂದು ಯಾಮಾರಿಸಿದ್ದಾನೆ. ಒಂದೆರೆಡು ಬಾರಿ ಸ್ವಾಮೀಜಿಯನ್ನು ಭೇಟಿ ಮಾಡಿಸಿ, ಅವರು ಹೇಳಿದ ಪೂಜೆಯನ್ನು ಮಾಡಿಸುತ್ತಾನೆ. ಕೊನೆಯಲ್ಲಿ ಇನ್ನೊಂದು ಪೂಜೆ ಮಾಡಬೇಕು ಎಂದು ಹೇಳಿ ಸೊರಬ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಂಜುನಾಥ್ ಎನ್ನುವರಿಗೆ ಸೇರಿದ ತೋಟಕ್ಕೆ ತನ್ನ ತಮ್ಮನನ್ನು ಕರೆಸಿಕೊಳ್ಳುತ್ತಾನೆ. ಅಲ್ಲಿ ಆತನಿಗೆ ವಿಪರೀತ ಕುಡಿಸಿ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡುತ್ತಾನೆ. ಆನಂತರ ಆ ಮೊದಲೇ ತೆಗೆದಿದ್ದ ಗುಂಡಿಯಲ್ಲಿ ರಾಮಚಂದ್ರನನ್ನು ಹೂತು ಹಾಕಿದ್ದಾನೆ ಎಂದು ಮಾಹಿತಿ ನೀಡಿದರು.ಮಾಲತೇಶ್ ಮರುದಿನ ಒಂದಿಬ್ಬರು ಕೆಲಸಗಾರರನ್ನು ಕರೆದು ತಂದು ಗುಂಡಿಯನ್ನು ಪೂರ್ಣವಾಗಿ ಮುಚ್ಚಿದ್ದ ಇಷ್ಟೆ ಅಲ್ಲದೆ, ತಾನೆ ಖುದ್ದಾಗಿ ಬಂದು ಪೊಲೀಸ್ ಠಾಣೆಯಲ್ಲಿ ತನ್ನ ತಮ್ಮ ಕಾಣುತ್ತಿಲ್ಲ. ಆತನಿಗೆ ಮದುವೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದೇವು. ಹಾಗೆ ಹೀಗೆ ಎನ್ನುತ್ತಾ ತಮ್ಮನ ಪರವಾಗಿ ಮಾತನಾಡಿ ಕಂಪ್ಲೇಂಟ್ ನೀಡಿದ್ದ. ಈ ನಿಟ್ಟಿನಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.