ಮೊಸಳೆ ದಾಳಿ ಮಾಡಿದ್ರೂ ಮಾಲೀಕನ ಪ್ರಾಣ ಉಳಿಸಿದ ಎತ್ತು!

| Published : Oct 10 2024, 02:24 AM IST

ಮೊಸಳೆ ದಾಳಿ ಮಾಡಿದ್ರೂ ಮಾಲೀಕನ ಪ್ರಾಣ ಉಳಿಸಿದ ಎತ್ತು!
Share this Article
  • FB
  • TW
  • Linkdin
  • Email

ಸಾರಾಂಶ

ಎತ್ತಿನ ಮೈ ತೊಳೆಯಲು ಹೋದ ವ್ಯಕ್ತಿಯ ಮೇಲೆ ಮೊಸಳೆ ದಾಳಿ ನಡೆಸಿದ ಪರಿಣಾಮ ಆತನ ಬಲಗೈ ತುಂಡರಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ಆಲಮಟ್ಟಿ ಹಿನ್ನೀರಿನಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್‌ ಇದೆ ವೇಳೆ ಎತ್ತು ಮಾಲೀಕನನ್ನು ಹಗ್ಗದ ಮೂಲಕ ಎಳೆದುತಂದಿದ್ದರಿಂದ ಸಾವಿನಿಂದ ಪಾರಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎತ್ತಿನ ಮೈ ತೊಳೆಯಲು ಹೋದ ವ್ಯಕ್ತಿಯ ಮೇಲೆ ಮೊಸಳೆ ದಾಳಿ ನಡೆಸಿದ ಪರಿಣಾಮ ಆತನ ಬಲಗೈ ತುಂಡರಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ಆಲಮಟ್ಟಿ ಹಿನ್ನೀರಿನಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್‌ ಇದೆ ವೇಳೆ ಎತ್ತು ಮಾಲೀಕನನ್ನು ಹಗ್ಗದ ಮೂಲಕ ಎಳೆದುತಂದಿದ್ದರಿಂದ ಸಾವಿನಿಂದ ಪಾರಾಗಿದ್ದಾನೆ.

ಹೊನ್ಯಾಳ ಗ್ರಾಮದ ಧರಿಯಪ್ಪ ಮೇಟಿ (32) ಮೊಸಳೆ ದಾಳಿಯಲ್ಲಿ ಬಲಗೈ ಕಳೆದುಕೊಂಡಿರುವ ವ್ಯಕ್ತಿ. ಸೋಮವಾರ ಬೆಳಗ್ಗೆ ತಮ್ಮ ಎತ್ತಿನ ಮೈ ತೊಳೆಯಲು ನದಿ ಹಿನ್ನೀರಿಗೆ ಕರೆದೊಯ್ದಿದ್ದಾನೆ. ಮೊಣಕಾಲುದ್ದ ನೀರಿನಲ್ಲಿ ಎತ್ತಿನ ಮೈ ತೊಳೆಯುವ ವೇಳೆ ಮೊಸಳೆ ಏಕಾಏಕಿ ದಾಳಿ ಮಾಡಿದೆ. ಬಲಗೈ ಹಿಡಿದು ನೀರಿನಲ್ಲಿ ಎಳೆದೊಯ್ಯಲು ಮೊಸಳೆ ಯತ್ನಿಸಿದೆ. ಇದೆ ವೇಳೆ ಇನ್ನೊಂದು ಕೈಯಲ್ಲಿ ಎತ್ತಿನ ಹಗ್ಗವನ್ನು ಆತ ಹಿಡಿದಿದ್ದಾನೆ. ಇದರಿಂದ ಎತ್ತು ಬೆದರಿ ಯುವಕನನ್ನು ಎಳೆದು ನೀರಿನಿಂ ದ ಹೊರಗೆ ಎಳೆದುಕೊಂಡು ಹೋಗಿದೆ. ಆ ವೇಳೆ ಧರಿಯಪ್ಪನ ಬಲಗೈ ಮೊಸಳೆ ಬಾಯಿಯಲ್ಲಿ ತುಂಡರಿಸಿದರೂ ಸಾವಿನಿಂದ ಪಾರಾಗಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಮೊಸಳೆ ದಾಳಿಗೊಳಗಾದ ವ್ಯಕ್ತಿಗೆ ಪರಿಹಾರಕ್ಕೆ ಕ್ರಮ

ಆಲಮಟ್ಟಿ ಹಿನ್ನೀರಿನಲ್ಲಿ ಎತ್ತುಗಳ ಮೈ ತೊಳೆಯುತ್ತಿರುವಾಗ ಮೊಸಳೆ ದಾಳಿಗೊಳಗಾಗಿ ಬಲಗೈ ಕಳೆದುಕೊಂಡ ಧರಿಯಪ್ಪ ಮೇಟಿ ಯುವಕನಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಸೂಚಿಸಿದರು.ಗದ್ದನಕೇರಿ ಕ್ರಾಸ್‌ನಲ್ಲಿ ಜಿಪಂ ಲಿಂಕ್ ಡಾಂಕುಮೆಂಟ್‌ ಅಡಿ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ರಮದಡಿ ಕೈಗೊಳ್ಳಲಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಿಬ್ಬಂದಿ ಅವರ ಕಚೇರಿ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ, ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರುತ್ರೇನ್ ಅವರಿಗೆ ದೂರವಾಣಿ ಮೂಲಕ ಮಾತನಾಡಿದರು. ಮೊಸಳೆ ದಾಳಿಗೆ ಕೈ ಕಳೆದುಕೊಂಡ ಯುವಕನಿಗೆ ಪತ್ನಿ ಹಾಗೂ ಇಬ್ಬರೂ ಮಕ್ಕಳಿದ್ದು, ಮುಂದಿನ ಉಪ ಜೀವನಕ್ಕಾಗಿ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳಲು ತಿಳಿಸಿದರು.ನಂತರ ಕುಂದರಗಿ ಬಳಿ ಸುರಗಿ ಮಠ ಅರಣ್ಯ ಪ್ರದೇಶದಲ್ಲಿದ್ದು, ಆ ಪ್ರದೇಶವನ್ನು ಅವರಿಗೆ ಬಿಟ್ಟುಕೊಟ್ಟು ಅವರು ಅರಣ್ಯ ಇಲಾಖೆಗೆ 5 ಎಕರೆ ಜಮೀನನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಲ್ಲಿಯ ಅನುಕೂಲಕ್ಕಾಗಿ ಆ ಪ್ರದೇಶವನ್ನು ಸುರಗಿ ಮಠಕ್ಕೆ ಒಪ್ಪಿಸಿ ಅವರು ಕೊಡಮಾಡಿದ 5 ಎಕರೆ ಜಮೀನಿನಲ್ಲಿ ಅರಣ್ಯ ಬೆಳೆಸಲು ತಿಳಿಸಿದರು.ಇದೇ ಸಂದರ್ಭದಲ್ಲಿ ಸೊಕನಾದಗಿ ಮತ್ತು ಛಬ್ಬಿ ಗ್ರಾಮದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬಾಗಲಕೋಟೆ ತಾಲೂಕಿನ ಯಂಕಂಚಿ ಗ್ರಾಮದ ಗುಡ್ಡದ ರಸ್ತೆಯ ಭೂಮಿಪೂಜೆ ನೆರವೇರಿಸಿ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದರು. ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾಪಂ ಅಧ್ಯಕ್ಷೆ ಮಾಲಾ ನಾಲತ್ವಾಡ, ಉಪಾಧ್ಯಕ್ಷ ಚಂದ್ರಶೇಖರ ಸಾಳಗುಂದಿ, ಜಿಪಂ ಮಾಜಿ ಸದಸ್ಯ ಪಾಂಡು ಪೊಲೀಸ್, ಜಿಪಂ ಮಾಜಿ ಅಧ್ಯಕ್ಷ ಆರ್.ಆರ್.ತುಂಬರಮಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಣ್ಣ ನಾಲತ್ವಾಡ, ಮಹಾದೇವಪ್ಪ ಪೂಜಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ, ವಲಯ ಅರಣ್ಯ ಅಧಿಕಾರಿ ಬಸವರಾಜ ಅರಿಶಿಣದ ಸೇರಿದಂತೆ ಇತರರು ಉಪಸ್ಥಿತರಿದ್ದರು.