ಅಂಕೋಲಾ ಶಾಲೆಗಳಲ್ಲಿ 103 ಶಿಕ್ಷಕರ ಹುದ್ದೆ ಖಾಲಿ
ಖಾಯಂ ನೇಮಕಾತಿ ವಿಳಂಬ: ಮಕ್ಕಳ ಭವಿಷ್ಯಕ್ಕೆ ಅತಿಥಿ ಶಿಕ್ಷಕರ ಆಧಾರರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣ ನಿರಂತರವಾಗಿರಲೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ಮೊರೆ ಹೋಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಸರ್ಕಾರಿ ಶಾಲೆಗಳ ಚಿತ್ರಣವೇ ಇದಕ್ಕೆ ಸಾಕ್ಷಿಯಾಗಿದ್ದು, ಖಾಯಂ ಶಿಕ್ಷಕರ ನೇಮಕಾತಿ ವಿಳಂಬದ ಪರಿಣಾಮ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು ತಾತ್ಕಾಲಿಕ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿವೆ.ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಿಯಮಾನುಸಾರ 486 ಶಿಕ್ಷಕರು ಕಾರ್ಯನಿರ್ವಹಿಸಬೇಕಾಗಿದ್ದರೂ, ಪ್ರಸ್ತುತ ಕೇವಲ 383 ಶಿಕ್ಷಕರು ಮಾತ್ರ ಸೇವೆಯಲ್ಲಿದ್ದಾರೆ. ಹೀಗಾಗಿ 103 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಕೊರತೆಯನ್ನು ಭಾಗಶಃ ನೀಗಿಸುವ ಉದ್ದೇಶದಿಂದ ಸರ್ಕಾರ 74 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆ. ಆದಾಗ್ಯೂ, ಅತಿಥಿ ಶಿಕ್ಷಕರ ನೇಮಕಾತಿ ಪೂರ್ಣಗೊಂಡರೂ ಸಹ ಸುಮಾರು 29 ಹುದ್ದೆಗಳು ಖಾಲಿಯಾಗಿಯೇ ಉಳಿಯಲಿವೆ ಎಂಬ ಮಾಹಿತಿ ಶಿಕ್ಷಣ ಇಲಾಖೆಯ ಮೂಲಗಳಿಂದ ಲಭ್ಯವಾಗಿದೆ.ಗುಣಮಟ್ಟಕ್ಕೆ ಸವಾಲು:
ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೇವಲ ಆಡಳಿತಾತ್ಮಕ ಸಮಸ್ಯೆಯಾಗಿ ಉಳಿದಿಲ್ಲ. ಇದು ನೇರವಾಗಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ಮೇಲೆಯೇ ಪರಿಣಾಮ ಬೀರುತ್ತಿದೆ. ಒಂದೇ ಶಿಕ್ಷಕರು ಎರಡು ಅಥವಾ ಮೂರು ತರಗತಿಗಳಿಗೆ ಪಾಠ ಬೋಧಿಸುವ ಪರಿಸ್ಥಿತಿ ಹಲವೆಡೆ ಕಂಡುಬರುತ್ತಿದ್ದು, ವೈಯಕ್ತಿಕ ಗಮನ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ.ಶಾಲಾ ಶಿಕ್ಷಣ ಇಲಾಖೆಯು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದರೂ, ಇದು ಶಾಶ್ವತ ಪರಿಹಾರವಲ್ಲ ಎಂಬ ಅಭಿಪ್ರಾಯ ಶಿಕ್ಷಣ ತಜ್ಞರಲ್ಲಿ ವ್ಯಕ್ತವಾಗಿದೆ. ಖಾಯಂ ಶಿಕ್ಷಕರ ನೇಮಕಾತಿ ನಡೆಯದಿರುವುದರಿಂದ ಶಾಲೆಗಳ ಶೈಕ್ಷಣಿಕ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ದುರ್ಬಲಗೊಳ್ಳುವ ಅಪಾಯ ಎದುರಾಗಿದೆ.ನಿರುದ್ಯೋಗಿಗಳಲ್ಲೂ ಆತಂಕ:
ಶಿಕ್ಷಣ ಪದವಿ ಪೂರ್ಣಗೊಳಿಸಿರುವ ಸಾವಿರಾರು ಯುವಕರು ಸರ್ಕಾರಿ ಶಿಕ್ಷಕರ ನೇಮಕಾತಿಗಾಗಿ ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ವಿಳಂಬವಾಗುತ್ತಿರುವ ಹಿನ್ನೆಲೆ ಅನೇಕರು ವಯೋಮಿತಿಯ ಅಂಚಿಗೆ ತಲುಪುತ್ತಿದ್ದಾರೆ. ಸರ್ಕಾರ ಖಾಯಂ ನೇಮಕಾತಿಗೆ ಮುಂದಾಗದೆ ಅತಿಥಿ ಶಿಕ್ಷಕರ ವ್ಯವಸ್ಥೆಯನ್ನೇ ಮುಂದುವರಿಸಿದರೆ, ಶಿಕ್ಷಕ ವೃತ್ತಿಯ ಕನಸು ಕಂಡಿರುವ ನಿರುದ್ಯೋಗಿ ಯುವಕರ ಭವಿಷ್ಯಕ್ಕೂ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.ಖಾಸಗಿ ಶಾಲೆಗಳತ್ತ :ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಎಂಬ ಭಾವನೆ ಪೋಷಕರಲ್ಲಿ ಹೆಚ್ಚಾಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೂ ಸಹ ಸಾಲ-ಸೊಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.ಶೈಕ್ಷಣಿಕ ವರ್ಷದ ಆರಂಭದಲ್ಲಿ ಅತಿಥಿ ಶಿಕ್ಷಕರು ನೇಮಕಗೊಂಡರೂ, ಅವರಿಗೆ ದಾಖಲಾತಿ, ಸಮೀಕ್ಷೆ, ದಾಖಲೆ ನಿರ್ವಹಣೆ ಸೇರಿದಂತೆ ಬೋಧಕೇತರ ಕೆಲಸಗಳ ಹೊರೆ ಹೆಚ್ಚಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರಿಂದ ಆರಂಭಿಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನೆ ದೊರೆಯದಿರುವ ಸಾಧ್ಯತೆ ಇದೆ ಎಂದು ಶಿಕ್ಷಣ ವಲಯದವರು ಅಭಿಪ್ರಾಯಪಡುತ್ತಾರೆ.ಖಾಯಂ ಶಿಕ್ಷಕರ ಹುದ್ದೆಗಳು ಖಾಲಿಯಿರುವುದರಿಂದ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ತಾಲೂಕಿಗೆ 74 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಆದೇಶಿಸಲಾಗಿದೆ ಎನ್ನುತ್ತಾರೆ ಅಂಕೋಲಾದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮಿ ಪಾಟೀಲ