1 ದಿನವಾದರೂ ಡಾ। ಹೆಗ್ಗಡೆ ಅವರನ್ನು ಜೈಲಿಗಟ್ಟುವುದೇ ಬುರುಡೆ ಟೀಂನ ಉದ್ದೇಶ!

| Published : Sep 24 2025, 02:10 AM IST

1 ದಿನವಾದರೂ ಡಾ। ಹೆಗ್ಗಡೆ ಅವರನ್ನು ಜೈಲಿಗಟ್ಟುವುದೇ ಬುರುಡೆ ಟೀಂನ ಉದ್ದೇಶ!
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ ಎಲ್ಲವೂ ಸುಳ‍್ಳು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಒಂದು ದಿನವಾದರೂ ಜೈಲಿಗೆ ಹಾಕಿಸುವುದು ಬುರುಡೆ ಗ್ಯಾಂಗ್‌ನ ಉದ್ದೇಶವಾಗಿತ್ತು ಎಂಬ ಸ್ಫೋಟಕ ಸಂಗತಿಯನ್ನು ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಬಾಯಿಬಿಟ್ಟಿದ್ದಾರೆ.

- ಮಾಸ್ಕ್‌ಮ್ಯಾನ್‌ 2ನೇ ಪತ್ನಿ ಸ್ಫೋಟಕ ಆರೋಪ

===

ಕನ್ನಡಪ್ರಭ ವಾರ್ತೆ ಮಂಗಳೂರು

ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ ಎಲ್ಲವೂ ಸುಳ‍್ಳು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಒಂದು ದಿನವಾದರೂ ಜೈಲಿಗೆ ಹಾಕಿಸುವುದು ಬುರುಡೆ ಗ್ಯಾಂಗ್‌ನ ಉದ್ದೇಶವಾಗಿತ್ತು ಎಂಬ ಸ್ಫೋಟಕ ಸಂಗತಿಯನ್ನು ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಬಾಯಿಬಿಟ್ಟಿದ್ದಾರೆ.

‘ಕನ್ನಡಪ್ರಭ’ದ ಸಹೋದರ ಸಂಸ್ಥೆ ಏಷ್ಯಾನೆಟ್‌ ಸುವರ್ಣನ್ಯೂಸ್‌ನ ರಹಸ್ಯ ಕ್ಯಾಮರಾದ ಮುಂದೆ ಮಲ್ಲಿಕಾ ಹೇಳಿದ ಈ ಆತಂಕಕಾರಿ ಸಂಗತಿ ಬಯಲಿಗೆ ಬಂದಿದೆ. ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಬಂಧನದಲ್ಲಿರುವ ಪತಿ ಚಿನ್ನಯ್ಯನನ್ನು ಬಿಡಿಸಿಕೊಡುವಂತೆ ಸೋಮವಾರ ರಿಪಬ್ಲಿಕ್‌ ಕನ್ನಡ ಚಾನಲ್‌ ಜೊತೆ ಮಾತನಾಡಿದ ವೇಳೆ ಗೋಗರೆದಿದ್ದ ಮಲ್ಲಿಕಾ, ಈಗ ‘ಏಷ್ಯಾನೆಟ್‌ ಸುವರ್ಣನ್ಯೂಸ್‌’ ಚಾನಲ್‌ನಲ್ಲಿ ಸೌಜನ್ಯ ಸಾವಿನ ಕುರಿತಂತೆ ನೈಜ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ದೇವಸ್ಥಾನಕ್ಕೆ ಕಪ್ಪು ಮಸಿ ಬಳಿಯುವುದಕ್ಕೆ ಸೌಜನ್ಯ ಕೇಸ್‌ ಒಂದು ನೆಪ ಅಷ್ಟೇ. ಮೊದಲು ಸೌಜನ್ಯ ತಾಯಿ ಕುಸುಮಾವತಿಯ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕು. ದೇವಸ್ಥಾನದಲ್ಲಿ ಅತ್ಯಾಚಾರ, ಕೊಲೆ ಎಲ್ಲವೂ ಷಡ್ಯಂತ್ರ. ಸೌಜನ್ಯ ತಾಯಿ, ಮಾವ ವಿಠಲ ಗೌಡ, ಗಿರೀಶ್‌ ಮಟ್ಟಣ್ಣವರ್‌, ತಿಮರೋಡಿಗೆ ಏನಾದರೂ ತೊಂದರೆ ಇಲ್ಲ. ಆದರೆ, ನನ್ನ ಗಂಡನಿಗೆ ಅಪಾಯವಾದರೆ ನಾನು ಸುಮ್ಮನಿರಲ್ಲ, ನಾನು ಸಾಯುತ್ತೇನೆ ಎಂದು ಮಲ್ಲಿಕಾ ದುಃಖ ತೋಡಿಕೊಂಡಿದ್ದಾರೆ. ತನ್ನ ಗಂಡನನ್ನು ಎಲ್ಲರೂ ಸೇರಿಸಿ, ಆತನಿಗೆ ಸುಳ್ಳು ಹೇಳಿಕೊಟ್ಟು ಮಾತನಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸೌಜನ್ಯ ಕೊಲೆಯಾದಾಗ ನಾವಿಬ್ಬರು ಊಟಿಯಲ್ಲಿದ್ದೆವು:

ಸೌಜನ್ಯ ಕೇಸಿಗೂ, ನನ್ನ ಗಂಡನಿಗೂ ಯಾವುದೇ ಸಂಬಂಧ ಇಲ್ಲ. ಸೌಜನ್ಯ ಕೊಲೆಯಾದಾಗ ನಾನು, ಚಿನ್ನಯ್ಯ ಧರ್ಮಸ್ಥಳದಲ್ಲಿ ಇರಲೇ ಇಲ್ಲ. ಸೌಜನ್ಯ ಕೊಲೆ ನೋಡಿದ್ದೇನೆ ಎಂಬ ಚಿನ್ನಯ್ಯನ ಹೇಳಿಕೆ ಸುಳ್ಳು. ಸೌಜನ್ಯ ಕೊಲೆ ನಡೆದಾಗ ನಾವು ಊಟಿಯಲ್ಲಿದ್ದೆವು. ಸೌಜನ್ಯ ಸಾವಿನ ದಿನ ನಾವು ಊಟಿಯಲ್ಲಿ ನನ್ನ ಮಗುವಿನ ಜೊತೆ ಇದ್ದೆವು ಎಂದು ಮಲ್ಲಿಕಾ ಇನ್ನೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾನು ಹೇಳಿದಂತೆ ಕೇಳಬೇಕು ಎಂದು ಸೌಜನ್ಯಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಬೆದರಿಸಿದ್ದಾನೆ. ನಿಮ್ಮ ಯಜಮಾನನ ಜೀವ ಬೇಕೆಂದರೆ ನಾನು ಹೇಳಿದಂತೆ ಕೇಳಲಿ ಎಂದಿದ್ದ. ನನ್ನ ಗಂಡ ಚಿನ್ನಯ್ಯನಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಲಾಕ್‌ ಮಾಡಿ ಕೂಡಿಹಾಕಿದ್ದರು. ಮೂತ್ರ ಮಾಡಲೂ ಅವಕಾಶ ನೀಡದಂತೆ ಚಿನ್ನಯ್ಯನಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಮಲ್ಲಿಕಾ ದೂರಿದ್ದಾರೆ. ಕಾಡಿನಲ್ಲಿ ಅಗೆದಾಗ ಬುರುಡೆ ಸಿಕ್ಕಿಲ್ಲ, ಚಿನ್ನಯ್ಯ ಸುಳ್ಳು ಜಾಗ ತೋರಿಸುತ್ತಿದ್ದಾನೆ ಎಂದು ತಿಮರೋಡಿ ಬಳಗ ಆರೋಪಿಸುತ್ತಿತ್ತು. ಆದರೆ, ಅವರಿಗೆ ಎಲ್ಲವೂ ಗೊತ್ತು. ಅವರೊಬ್ಬ ದೊಡ್ಡ ಕ್ರಿಮಿನಲ್‌. ಸೌಜನ್ಯ ವಿಚಾರಕ್ಕೆ ನಮ್ಮನ್ನು ತಿಮರೋಡಿ ಮನೆಗೆ ಕರೆಸಿಕೊಂಡಿದ್ದ. ಗಿರೀಶ್‌ ಮಟ್ಟಣ್ಣವರ್‌, ತಿಮರೋಡಿ ಫೋನ್‌ನಲ್ಲಿ ಕೂಡ ನನ್ನ ಯಜಮಾನರಲ್ಲಿ ಮಾತನಾಡುತ್ತಿದ್ದರು. ಏನು ನಡೀತಾ ಇದೆ, ಫೋನ್ ಕೊಡಿ ಎಂದರೆ, ಫೋನು ಕೊಡುತ್ತಿರಲಿಲ್ಲ. ಇದರಲ್ಲಿ ಎಲ್ಲವೂ ತಿಮರೋಡಿ ಗ್ಯಾಂಗ್‌ ಕೈವಾಡ ಇದೆ. ಅಂದೇ ಏನೋ ನಡೀತಿದೆ ಎಂದು ಗೊತ್ತಾಗಿತ್ತು ಎಂದಿದ್ದಾರೆ.

ತಿಮರೋಡಿ ಮನೆಯಲ್ಲಿ ಕಿಟಕಿಯಿಂದ ಮೂತ್ರ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಸೌಜನ್ಯ ವಿಚಾರದಲ್ಲಿ ಶವವನ್ನು ಚಿನ್ನಯ್ಯನೇ ಎತ್ತಿಕೊಂಡು ಹೋದದ್ದು ಎಂದು ಹೇಳ‍ುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ ಮಲ್ಲಿಕಾ.