ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 2ನೇ ಹಂತದ ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೈಕಮಾಂಡ್ ಧುರಂದರರೇ ಸೇರಿ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆಯನ್ನು ಶುಕ್ರವಾರ ಸುಮಾರು ಎರಡು ತಾಸು ನಡೆಸಿದರೂ ಪಟ್ಟಿ ಅಂತಿಮಗೊಂಡಿಲ್ಲ.
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 2ನೇ ಹಂತದ ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೈಕಮಾಂಡ್ ಧುರಂದರರೇ ಸೇರಿ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆಯನ್ನು ಶುಕ್ರವಾರ ಸುಮಾರು ಎರಡು ತಾಸು ನಡೆಸಿದರೂ ಪಟ್ಟಿ ಅಂತಿಮಗೊಂಡಿಲ್ಲ. ಮೂಲಗಳ ಪ್ರಕಾರ ಶನಿವಾರ ಮತ್ತೆ ನಾಯಕರು ಸಭೆ ಸೇರಿ ಪ್ರಕ್ರಿಯೆ ಮುಂದುವರೆಸಲಿದ್ದಾರೆ.
ಈ ಪ್ರಕ್ರಿಯೆ ಲಂಭಿಸಲು ಕಾರಣ 2ನೇ ಹಂತದ ಸಂಪುಟಕ್ಕೆ ಹೆಸರು ಅಖೈರುಗೊಳಿಸುವ ಕಾರ್ಯ ಮಾತ್ರ ನಡೆದಿಲ್ಲ. ಜತೆಗೆ, ಖಾತೆ ಹಂಚಿಕೆ ಬಗ್ಗೆಯೂ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ಅಲ್ಲದೆ, ಈಗಾಗಲೇ ಸಚಿವರಾಗಿರುವ 13 ಮಂದಿಯಲ್ಲೂ ಖಾತೆ ಬದಲಾವಣೆ ಬಯಸಿರುವವರ ಜತೆಗೂ ದೂರವಾಣಿ ಕರೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.
ಮೂಲಗಳ ಪ್ರಕಾರ ರಾಮಲಿಂಗಾರೆಡ್ಡಿ ಹಾಗೂ ಸತೀಶ್ ಜಾರಕಿಹೊಳಿ ಅವರಿಗೂ ಶುಕ್ರವಾರ ಕರೆ ಬಂದಿದೆ. ಈ ಪೈಕಿ ರಾಮಲಿಂಗಾರೆಡ್ಡಿ ಅವರು ಹಾಲಿ ಖಾತೆಯಲ್ಲೇ ಮುಂದುವರೆಯವ ಬಗ್ಗೆ ತಮ್ಮ ಯಾವುದೇ ಆಕ್ಷೇಪವಿಲ್ಲ ಎಂದಿದ್ದರೆ, ಸತೀಶ್ ಜಾರಕಿಹೊಳಿ ಅವರು ಸಮಾಜ ಕಲ್ಯಾಣ ಹಾಗೂ ಕ್ರೀಡಾ ಖಾತೆಯ ಬಯಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಗೊಂದಲ ನಿರ್ಮಾಣವಾಗಬಾರದು
ಈ ಪ್ರಕ್ರಿಯೆ ನಡೆಸುವ ಉದ್ದೇಶ- 2ನೇ ಹಂತದ ಸಂಪುಟ ವಿಸ್ತರಣೆಯ ನಂತರ ಖಾತೆ ವಿಚಾರದಲ್ಲೂ ಯಾವುದೇ ಗೊಂದಲ ನಿರ್ಮಾಣವಾಗಬಾರದು. ನೂತನ ಸಚಿವರು ಹಾಗೂ ಅವರ ಖಾತೆ ಕುರಿತು ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರವಾಗಿದೆ ಎಂಬ ಸಂದೇಶ ರವಾನೆ ಮಾಡಿ ಯಾರೂ ಅಪಸ್ವರವೆತ್ತದಂತೆ ತಡೆಯವುದು ಎನ್ನಲಾಗಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಭೆಯಲ್ಲಿ ಪಾಲ್ಗೊಂಡಿದ್ದು, ರಾಹುಲ್ ಗಾಂಧಿಯವರು ಸಚಿವರ ಪಟ್ಟಿಗೆ ಫೈನಲ್ ಟಚ್ ನೀಡುವ ಪ್ರಯತ್ನ ನಡೆಸಿದರು.
ಈ ವೇಳೆ ರಾಜ್ಯ ನಾಯಕರು ನೀಡಿರುವ ಪಟ್ಟಿ ಹಾಗೂ ಆ ಪಟ್ಟಿಯಲ್ಲಿ ಇರುವವರ ಬಗ್ಗೆ ನೀಡಿರುವ ಅಭಿಪ್ರಾಯವನ್ನು ಪರಿಗಣಿಸಲಾಗಿದೆ.ಜತೆಗೆ, ತಮ್ಮದೇ ಮೂಲಗಳಿಂದ (ಕನಿಗೋಲು ಹಾಗೂ ಸಂಸದ ಶಶಿಕಾಂತ ಸೆಂಥಿಲ್) ಪಡೆದಿರುವ ವರದಿಯನ್ನು ಈ ಅಭಿಪ್ರಾಯದೊಂದಿಗೆ ತಾಳೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ, ಹೈಕಮಾಂಡ್ ಸಹ ಕೆಲ ಹೆಸರನ್ನು ಪ್ರಸ್ತಾಪಿಸಿದೆ. ಹೀಗಾಗಿಯೇ ಮಾಯಕೊಂಡದ ಬಸಂತಪ್ಪ ಅವರಂತಹ ಹೊಸ ಹೆಸರು ಕೇಳಿ ಬರತೊಡಗಿದೆ.
ಬಸವರಾಜ ರಾಯರೆಡ್ಡಿ ಸ್ಪೀಕರ್?:
ಕುತೂಹಲಕರ ಸಂಗತಿಯೆಂದರೆ ರಾಜ್ಯ ನಾಯಕರು ಸ್ಪೀಕರ್ ಸ್ಥಾನಕ್ಕೆ ಬಿ.ಆರ್. ಪಾಟೀಲ್ ಅವರ ಹೆಸರನ್ನು ಶಿಫಾರಸು ಮಾಡಿದ್ದರೆ, ಹೈಕಮಾಂಡ್ ಇದೀಗ ಆ ಸ್ಥಾನಕ್ಕೆ ಬಸವರಾಜ ರಾಯರೆಡ್ಡಿ ಅವರ ಹೆಸರು ಪರಿಗಣಿಸುತ್ತಿದೆ ಎನ್ನಲಾಗಿದೆ.
