ಸಾರಾಂಶ
ಉಡುಪಿ ನೇಜಾರಿನಲ್ಲಿ ನಡೆದ ತಾಯಿ, ಮಕ್ಕಳ ಕೊಲೆ ಪ್ರಕರಣ ಆರೋಪಿ ಪ್ರವೀಣ್ಣ್ ಚೌಗುಲೆಗೆ ನ್ಯಾಯಾಂಗ ಬಂಧನ, ತನಿಖೆ ಚುರುಕುಗೊಳಿಸಿರುವ ಪೊಲೀಸರು
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ನೇಜಾರು ಗ್ರಾಮದಲ್ಲಿ ಒಂದೇ ಕುಟುಂಬದ ತಾಯಿ ಮತ್ತು ಮೂವರು ಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿ ಪ್ರವೀಣ್ ಚೌಗುಲೆಯ ಪೊಲೀಸ್ ತನಿಖೆ ಬಹುತೇಕ ಮುಕ್ತಾಯಗೊಂಡಿದೆ. ಕೊಲೆ ನಡೆದ 72 ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನೂ ಸಂಗ್ರಹಿಸಿದ್ದಾರೆ.ಆರೋಪಿಯನ್ನು ನ.28ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದ್ದರೂ, ಪೊಲೀಸರ ತನಿಖೆ, ಸ್ಥಳ ಮಹಜರು ಮುಗಿರುವುದರಿಂದ ಅವಧಿಗೆ ಮೊದಲೇ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ಡಿ.5ರವರೆಗೆ ನ್ಯಾಯಾಂಗ ಬಂದನಕ್ಕೆ ಆದೇಶಿಸಿತು.
ಸ್ಕೂಟರ್ - ಬಟ್ಟೆ ಪತ್ತೆ: ಆರಂಭದಲ್ಲಿ ಆರೋಪಿ ಚೌಗುಲೆ ತಪ್ಪು ಮಾಹಿತಿ ನೀಡಿ ಪೊಲೀಸರ ದಾರಿ ತಪ್ಪಿಸುತ್ತಿದ್ದ, ಇದೀಗ ಪೊಲೀಸರು ಆರೋಪಿಯಿಂದ ಕೊಲೆಯ ಪೂರ್ಣ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ನ.12ರಂದು ನಾಲ್ಕು ಮಂದಿಯನ್ನು ಕೊಲೆದ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆಗೆ ರಕ್ತ ತಗಲಿದ್ದು, ಅದನ್ನು ಕಾರಿನಲ್ಲಿ ಮಂಗಳೂರಿಗೆ ಹಿಂದಕ್ಕೆ ತೆರಳುವಾಗ, ಮಧ್ಯೆ ಬಪ್ಪನಾಡಿನಲ್ಲಿ ತೆಗೆದು ರಸ್ತೆ ಪಕ್ಕದಲ್ಲಿ ಸುಟ್ಟು ಹಾಕಿದ್ದ. ಅಲ್ಲಿಗೆ ಆರೋಪಿಯನ್ನು ಕರೆದೊಯ್ದ ಪೊಲೀಸರು, ಸುಟ್ಟ ಬಟ್ಟೆಯ ಅವಶೇಷಗಳನ್ನು ಸಂಗ್ರಹಿಸಿದ್ದಾರೆ.
ಜೊತೆಗೆ ಆರೋಪಿ ಬಳಸುತ್ತಿದ್ದ ಸ್ಕೂಟರನ್ನು ಕೂಡ, ಕೊಲೆಯಾದ ಐನಾಝ್ ಳ ಮಂಗಳೂರಿನ ಬಾಡಿಗೆ ಮನೆಯ ಪಕ್ಕದಲ್ಲಿ ಪೊಲೀಸರು ವಶ ಪಡೆದುಕೊಂಡಿದ್ದಾರೆ. ಈ ಸ್ಕೂಟರ್ ಯಾಕೆ ಐನಾಝ್ ಮನೆ ಪಕ್ಕದಲ್ಲಿ ಇತ್ತು ಎನ್ನುವ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ.ಈಗಾಗಲೇ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚೂರಿ, ಸಿಸಿ ಕ್ಯಾಮರಗಳಿಗೆ ಮುಖದ ಗುರುತು ಮರೆಮಾಚಲು ಹಾಕಿಕೊಂಡಿದ್ದ ಮಾಸ್ಕ್, ಮಂಗಳೂರಿಗೆ ತೆರಳುವುದಕ್ಕೆ ಬಳಸಿದ್ದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.