ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ಬಿಜಿಕೆರೆ ವಸುಂಧರ ಕೃಷಿ ಕ್ಷೇತ್ರದಲ್ಲಿ ರೈತ ಸ್ನೇಹಿ ನೀರಾ ಮಾರಾಟ ಮಾಡುವ ಪ್ರಗತಿ ಪರ ರೈತ ಎಸ್.ಸಿ.ವೀರಭದ್ರಪ್ಪನವರ ಮೇಲೆ ಪ್ರಕರಣ ದಾಖಲಿಸಿರುವ ಅಬಕಾರಿ ಅಧಿಕಾರಿಗಳ ಕ್ರಮ ಖಂಡನೀಯ. ಕೂಡಲೇ ಅವರ ಮೇಲಿನ ಪ್ರಕರಣ ರದ್ಧು ಪಡಿಸಿ ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಿ ಬಯಲು ಸೀಮೆ ಹಿತ ಚಿಂತಕ ಬಳಗದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿರುವ ಮುಖಂಡರು ಗ್ರಾಮೀಣ ಭಾಗದಲ್ಲಿ ದಿನಸಿ ಅಂಗಡಿಗಳಲ್ಲಿ ದಿನಸಿಯಂತೆ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದ ಅಬಕಾರಿ ಇಲಾಖೆ ನೀರಾ ಮಾರಾಟ ಮಾಡುವ ರೈತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ ಇದು ಖಂಡನೀಯ ಎಂದಿದ್ದಾರೆ.
ಗ್ರಾಮದ ಪ್ರಗತಿ ಪರ ರೈತ ಎಸ್.ಸಿ.ವೀರಭದ್ರಪ್ಪನವರು ಪ್ರಗತಿ ಪರ ರೈತರಾಗಿದ್ದು ಉತ್ತಮ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೆ ರಾಜ್ಯದ ವಿವಿಧ ಭಾಗಗಳ ರೈತರಿಗೆ ಮಾರ್ಗದರ್ಶಿಯಾಗಿದ್ದು, ರಾಜ್ಯದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಇಂತಹ ಪ್ರತಿಭಾನ್ವಿತ ರೈತ ವೀರಭದ್ರಪ್ಪನವರ ವಸುಂದರಾ ಕೃಷಿ ಕ್ಷೇತ್ರದಲ್ಲಿ ತೆಂಗಿನ ನೀರಾ ಇಳಿಸಿ ಮಾರಾಟ ಮಾಡಲಾಗುತ್ತಿದೆ.ತೆಂಗಿನ ಮರದ ನೀರಾ ರೈತ ಸ್ನೇಹಿಯಾಗಿದ್ದು ಆರೋಗ್ಯಕ್ಕೆ ತೊಂದರೆಯಾಗದೆ ಇದ್ದರೂ ಕೆಲವರ ಪಿತೂರಿಯಿಂದ ಪ್ರಕರಣ ದಾಖಲಿಸಿ ಅವರನ್ನು ಅವಮಾನಿಸಿದ್ದಾರೆ. ಅಧಿಕಾರಿಗಳು ಕೂಡಲೇ ಅವರ ಮೇಲಿನ ಪ್ರಕರಣ ರದ್ಧುಪಡಿಸಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ.ಪಿ.ಎಂ.ಮಂಜುನಾಥ, ಮಂಡಲ ಅಧ್ಯಕ್ಷ ಶ್ರೀರಾಮರೆಡ್ಡಿ, ವಿನಯ ಕುಮಾರ್, ಟಿ.ಎಂ.ಮಂಜುನಾಥ, ಸಿದ್ಧಾರ್ಥ, ಪ್ರಭಾಕರ, ಬಲರಾಮ, ಹರೀಶ್ ಕಡೆತೋಟ, ಹೇಮಂತ್ ಇದ್ದರು.