ಚಿಕ್ಕಮಗಳೂರುದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯೋಗ ಖಾತ್ರಿಯಾದ ಮನರೇಗಾ ಕಾಯ್ದೆಯನ್ನು ವಿಬಿ ಜಿ ರಾಮ್‌ ಜಿ ಎಂದು ಬದಲಾಯಿಸುವ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ಬಹುದೊಡ್ಡ ಪೆಟ್ಟು ನೀಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

- ಮನರೇಗಾ ಕಾಯ್ದೆಯನ್ನು ವಿಬಿ ಜಿ ರಾಮ್‌ ಜಿ ಹೆಸರು ಬದಲಾವಣೆ, ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿಣಿ ಸಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯೋಗ ಖಾತ್ರಿಯಾದ ಮನರೇಗಾ ಕಾಯ್ದೆಯನ್ನು ವಿಬಿ ಜಿ ರಾಮ್‌ ಜಿ ಎಂದು ಬದಲಾಯಿಸುವ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ಬಹುದೊಡ್ಡ ಪೆಟ್ಟು ನೀಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

ನಗರದ ಎಐಟಿ ವೃತ್ತದದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಮನರೇಗಾ ಬದಲಾವಣೆ ಕುರಿತು ಭಾರೀ ವಿರೋಧ ವ್ಯಕ್ತಪಡಿಸಿ ಜನರು ಚಳುವಳಿ ನಡೆಸಲು ನಿರ್ಣಯಿಸಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಸೇರಿದಂತೆ ವಿಧಾನ ಸಭೆಯಲ್ಲಿ ಬದಲಾವಣೆ ವಿರುದ್ಧ ಠರಾವು ಮಂಡಿಸಲಾಗಿದೆ ಎಂದು ಹೇಳಿದರು.

ಜನರಿಗೆ ಅನುಕೂಲವಾಗಿದ್ಧ ಮನರೇಗಾ ಕಾಯ್ದೆ ವಿಚಾರಗಳು ಕೇಂದ್ರ ಸರ್ಕಾರದ ದ್ವಂದ್ವ ನಿಲುವಿನಿಂದ ಬದಲಾವಣೆಯಾಗಿ ಭಾರೀ ಅನಾಹುತಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯಿಂದ, ಜಿಲ್ಲಾ ಮಟ್ಟದವರೆಗೂ ಹಂತ ಹಂತವಾಗಿ ಚಳುವಳಿ ನಡೆಸಲು ಕರೆ ನೀಡಲಾಗಿದೆ ಎಂದರು.

ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮನಾಥ್ ರೈ ಮಾತನಾಡಿ, ಮತದಾರರಿಗೆ ಸಂಬಂಧಪಟ್ಟ ಎಸ್. ಐ.ಆರ್. ಬಗ್ಗೆ ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ-2 ಗಳಿಗೆ ತಿಳುವಳಿಕೆ ನೀಡಿ ಅವರು ಪಕ್ಷದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.

ಈ ಪ್ರಯತ್ನದಿಂದ ಪಕ್ಷ ಮುಂಬರುವ ಜಿಪಂ, ತಾಪಂ, ಗ್ರಾಪಂ ಸೇರಿದಂತೆ ಪ್ರತಿಯೊಂದು ಚುನಾವಣೆ ಗಳಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ಎಂದು ಹೇಳಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕೈಗೊಳ್ಳುವ ಪ್ರತಿಯೊಂದು ಚಟುವಟಿಕೆ, ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ ಅವರು, ಪಕ್ಷ ಜಿಲ್ಲೆಯಲ್ಲಿ ಅತ್ಯಂತ ಸಕ್ರಿಯ, ಗಟ್ಟಿಯಾಗಿರುವಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಫೆ.2 ರಂದು ಜಿಲ್ಲಾ ಕೇಂದ್ರದಲ್ಲಿ ಮನರೇಗಾ ವಿಚಾರವಾಗಿ ಉಪವಾಸ ಸತ್ಯಾಗ್ರಹ ಚಳುವಳಿ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತರೀಕೆರೆ ಶಾಸಕ ಜಿ.ಎಚ್‌. ಶ್ರೀನಿವಾಸ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ಎಚ್.ಜಿ.ಸುರೇಂದ್ರ, ಪದಾಧಿಕಾರಿಗಳಾದ ಚಂದ್ರಪ್ಪ, ಕೆ.ವಿ.ಮಂಜುನಾಥ್, ರವೀಶ್ ಕ್ಯಾತನಬೀಡು, ಅನಂತ್, ಸೋಮೇಶ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇದೇ ವೇಳೆ ನೂತನವಾಗಿ ಇಂದಿರಾ ಕ್ಯಾಂಟೀನ್ ಗುಣಮಟ್ಟ ಪರಿಶೀಲನಾ ಮತ್ತು ಅನುಷ್ಟಾನ ಸಮಿತಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಪಂಚನಹಳ್ಳಿ ಪ್ರಸನ್ನ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಉಪ ಸಮಿತಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್, ಉಪ ಸಮಿತಿ ಸಹ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಕೆಪೆಕ್ಸ್ ಅಧ್ಯಕ್ಷ ಬಿ.ಎಚ್.ಹರೀಶ್ ಹಾಗೂ ಮುಖಂಡರು ಉಪಸ್ಥಿತರಿದ್ದರು. 24 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಬಿ.ಎಲ್. ಶಂಕರ್‌ ಉದ್ಘಾಟಿಸಿದರು.