ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿದ್ದ ಮಹಾತ್ಮಾಗಾಂಧಿಜಿ ಹೆಸರಿಗೆ ಬದಲಾಗಿ ವಿಬಿ ಗ್ರಾಮ್ ಜಿ ಎಂದು ಬದಲಾಯಿಸಿ ಗಾಂಧಿ ತತ್ವವನ್ನೇ ಬದಲಾಯಿಸಿಸುವ ಹುನ್ನಾರ ನಡೆಸುತ್ತಿದೆ ಎಂದು ಶಿವಮೊಗ್ಗ ಭದ್ರಾಕಾಡಾ ನಿಗಮ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.ಮಂಗಳವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನರೇಗ ಯೋಜನೆ ಯೋಜನೆಯ ಪ್ರಯೋಜನ ಹಾಗೂ ವಿಬಿ ಗ್ರಾಮ್ ಜಿ ದುಷ್ಪರಿಣಾಮಗಳ ಕರ ಪತ್ರಗಳನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನರೇಗಾ ಯೋಜನೆಯನ್ನು ತಿರುಚುವ ಪ್ರಯತ್ನವಾಗಿದೆ. ಗ್ರಾಮೀಣರ ಬದುಕನ್ನು ನಾಶ ಮಾಡುವ ಮೂಲಕ ರೈತರ, ಬಡವರ ಮೇಲೆ ನಿರಂತರವಾಗಿ ತೊಂದರೆ ನೀಡಿ ದಾಳಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಜನಾಂದೋಲನ ರೂಪದಲ್ಲಿ ಹೋರಾಟ ರೂಪಿಸಲಾಗುತ್ತಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ನರೇಗ ಯೋಜನೆಯನ್ನು ಸರ್ಕಾರ ಜನರ ಬದುಕನ್ನು ಹಸನಾಗಿಸಲು, ನಿರುದ್ಯೋಗ ಸಮಸ್ಯೆ ನಿವಾರಿಸಲು 2005 ಸೆ.5 ರಂದು ಸಂವಿಧಾನದಡಿ ಆರ್ಟಿಕಲ್ 41 ರ ಮೂಲಕ ಜಾರಿಗೆ ತಂದಿದೆ. ದೇಶದ ಪ್ರತಿಯೊಬ್ಬ ಪ್ರಜೆ ಉದ್ಯೋಗ ಪಡೆಯಲು ಹಕ್ಕುಳ್ಳವ ನಾಗಿದ್ದಾನೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರ, ರೈತರ, ಬಡವರ, ಕೂಲಿ ಕಾರ್ಮಿಕರ ಬದುಕನ್ನು ಸುಧಾರಿಸಿದೆ.
ಈ ಯೋಜನೆ ಜಾರಿಗೆ ತರಲು ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ 13 ತಿಂಗಳ ಕಾಲ ಸಮಾಲೋಚಿಸಿ ಸಾಧಕ, ಬಾಧಕಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಜಾರಿಗೆ ತಂದಿದೆ. ಆದರೆ, ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸದನದಲ್ಲಿ ಹಾಗೂ ವಿರೋಧ ಪಕ್ಷದೊಂದಿಗೆ ಯಾವುದೇ ಚರ್ಚೆ ನಡೆಸದೆ ಏಕಾ ಏಕಿ ಯೋಜನೆ ಹೆಸರು ಹಾಗೂ ಉದ್ದೇಶ ಬದಲಾಯಿಸುವ ಹುನ್ನಾರ ಮಾಡಿದೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.ನರೇಗಾ ಯೋಜನೆಯಲ್ಲಿ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಫಲಾನುಭವಿಗಳ ಆಯ್ಕೆ ಮಾಡಲು ವಿಶೇಷ ಗ್ರಾಮಸಭೆ ಆಯೋಜಿಸುವ ಮೂಲಕ ಪಾರದರ್ಶಕವಾಗಿ ಯೋಜನೆ ಸವಲತ್ತು ದೊರಕುತ್ತಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರ ಈ ಎಲ್ಲಾ ಅಧಿಕಾರ ಕಿತ್ತುಕೊಂಡು ಯೋಜನೆ ಅನುಷ್ಠಾನವನ್ನು ಕೇಂದ್ರ ಸರ್ಕಾರವೇ ಆಯ್ಕೆ ಮಾಡುತ್ತದೆ. ಇದಕ್ಕಾಗಿ ದೇಹಲಿಯಲ್ಲಿ ಸಮಿತಿ ರಚಿಸಲಾಗಿದೆ. ದೆಹಲಿಯಲ್ಲಿ ಕುಳಿತವರಿಗೆ ಗ್ರಾಮೀಣ ಭಾಗದ ಜನರ, ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅರಿವು ಇರುವುದೇ? ಹಿಂದಿನ ನರೇಗಾ ಯೋಜನೆಯಲ್ಲಿ ಉದ್ಯೋಗ ಅರಸಿ ಬಂದವರಿಗೆ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ಕೊಡಲು ಅವಕಾಶವಿತ್ತು. ಆದರೆ, ಈಗ ಗ್ರಾ.ಪಂ. ಅಧಿಕಾರವನ್ನೇ ಕಿತ್ತುಕೊಳ್ಳಲು ಈಗಿನ ಕೇಂದ್ರ ಸರ್ಕಾರ ಹೊರಟಿದೆ. ಹಿಂದೆ ಕಾಮಗಾರಿ ಸಾಮಾಗ್ರಿ ಮೊತ್ತದಲ್ಲಿ ಶೇ. 75 ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ.25 ರಷ್ಟು ರಾಜ್ಯ ಸರ್ಕಾರ ನೀಡಬೇಕಾಗಿತ್ತು. ಆದರೆ, ಹೊಸ ನಿಯಮದ ಪ್ರಕಾರ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ನೀಡಬೇಕಿದೆ. ಇದೊಂದು ಅವೈಜ್ಞಾನಿಕ ಚಿಂತನೆ ಎಂದರು.ನರೇಗಾ ಯೋಜನೆ ಉಳಿಸಲು ಪ್ರತೀ ಗ್ರಾಪಂ ಮಟ್ಟದಲ್ಲೂ ಜನಾಂದೋಲನದ ರೀತಿ ಹೋರಾಟ ರೂಪಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಕಾಂಗ್ರೆಸ್ ಮುಖಂಡರಾದ ಬೆನ್ನಿ, ಸುನೀಲ್‌ಕುಮಾರ್, ಬಿ.ವಿ.ಉಪೇಂದ್ರ, ರತನ್ ಗೌಡ ಅರಗಿ, ದೇವಂತ್ ರಾಜ್ ಗೌಡ, ಈ.ಸಿ.ಜೋಯಿ, ಜುಬೇದಾ, ಎಸ್.ಡಿ.ರಾಜೇಂದ್ರ, ಎಚ್.ಎಂ.ಶಿವಣ್ಣ, ಅಂಜುಮ್, ಮಂಜುನಾಥ್, ಗಂಗಾಧರ ಮತ್ತಿತರರು ಇದ್ದರು.