ಕಬ್ಬು ಬೆಳೆಗೆ ದರ ನಿಗದಿ ಕೇಂದ್ರ ಸರ್ಕಾರ ಮಾಡಬೇಕು

| Published : Nov 06 2025, 01:30 AM IST

ಸಾರಾಂಶ

ಕಬ್ಬಿನ ಬೆಲೆ ನಿಗದಿ ತೀರ್ಮಾನ ಮಾಡುವುದು ರಾಜ್ಯ ಸರ್ಕಾರವಲ್ಲ. ಮಹಾರಾಷ್ಟ್ರದಲ್ಲಿ ಕಬ್ಬಿಗೆ ಬೆಲೆ ಜಾಸ್ತಿ ಕೊಡ್ತಿದ್ದಾರೆ. ಅದಕ್ಕೆ ಸಮನಾಗಿ ರಾಜ್ಯದಲ್ಲೂ ನೀಡುವ ಬೇಡಿಕೆಯನ್ನು ರೈತರು ಇಟ್ಟಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟಿಲ್, ತಿಮ್ಮಾಪುರ್, ಎಂಬಿ ಪಾಟೀಲ್‌ ಕಬ್ಬು ಬೆಳೆಗಾರರ ಜತೆ ಚರ್ಚೆ ನಡೆಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ರೈತರು ಕಬ್ಬು ದರ ನಿಗದಿಗೆ ಹೋರಾಟ ಮಾಡುತ್ತಿದ್ದು, ಕಬ್ಬು ದರ ನಿಗದಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಆದರೂ ರೈತರೊಂದಿಗೆ ಚರ್ಚೆ ನಡೆಸಲು ಸಚಿವರಿಗೂ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ಎನ್.ಎನ್ ಸಿಟಿಯಲ್ಲಿ ಮಂಗಳವಾರ ರಾತ್ರಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಬ್ಬು ದರ ನಿಗದಿಗೆ ರೈತರ ಹೋರಾಟ ನಡೆಸುತ್ತಿದ್ದಾರೆ. ದರ ನಿಗದಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ರೈತರ ಜತೆ ಸಚಿವರ ಚರ್ಚೆ

ಕಬ್ಬಿನ ಬೆಲೆ ನಿಗದಿ ತೀರ್ಮಾನ ಮಾಡುವುದು ರಾಜ್ಯ ಸರ್ಕಾರವಲ್ಲ. ಮಹಾರಾಷ್ಟ್ರದಲ್ಲಿ ಕಬ್ಬಿಗೆ ಬೆಲೆ ಜಾಸ್ತಿ ಕೊಡ್ತಿದ್ದಾರೆ. ಅದಕ್ಕೆ ಸಮನಾಗಿ ರಾಜ್ಯದಲ್ಲೂ ನೀಡುವ ಬೇಡಿಕೆಯನ್ನು ರೈತರು ಇಟ್ಟಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟಿಲ್, ತಿಮ್ಮಾಪುರ್, ಎಂಬಿ ಪಾಟೀಲ್‌ಗೆ ರೈತರೊಂದಿಗೆ ಮಾತನಾಡಲು ಹೇಳಿದ್ದೇನೆ ಎಂದರು.

ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಯೋಜನೆಯು ವಿಳಂಬವಾಗುತ್ತಿದೆ. ಮುಂದಿನ ೨ ವರ್ಷದಲ್ಲಿ ಯೋಜನೆ ಪೂರ್ಣ ಮಾಡಲು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಅವಕಾಶ ಸಿಗಲಿದೆ ಎಂಬ ಭರವಸೆ ನೀಡಿದರು.

ರಾಜ್ಯ ಸರಕಾರವು ಕೋಲಾರ ಜಿಲ್ಲೆಯನ್ನು ಎಂದಿಗೂ ಕಡೆಗಣಿಸಿಲ್ಲ. ಜಿಲ್ಲೆಗೆ ಪಿಪಿಪಿ ಮಾಡಲ್‌ನಲ್ಲಿ ಮೆಡಿಕಲ್ ಕಾಲೇಜು ನೀಡಿದ್ದೇವೆ. ಮುಂದೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡವ ಬಗ್ಗೆ ಚಿಂತನೆ ಮಾಡುತ್ತೇವೆ. ಕೆಜಿಎಫ್‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಕೋಲಾರ ಬೆಂಗಳೂರು ಮಧ್ಯೆ ರೈಲ್ವೆ ಯೋಜನೆಯ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಭೂಮಿ ನೀಡಬೇಕು ಎಂಬುದು ಯಾವ ಕಾನೂನಿನಲ್ಲಿದೆ. ರೈಲ್ವೆ ಟಿಕೇಟ್ ಮತ್ತು ಸರಕು ಸಾಗಾಣಿಕೆಯಿಂದ ಬರುವ ಆದಾಯವನ್ನು ಪಡೆದುಕೊಳ್ಳುವವರು ಯಾರು, ಕೇಂದ್ರ ಸರಕಾರವೇ ಅಥವಾ ರಾಜ್ಯ ಸರಕಾರವೇ ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರಕ್ಕೆ ರಾಜ್ಯದಿಂದ ೪.೫೦ ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಆದರೆ ೧ ರುಪಾಯಿನಲ್ಲಿ ನಮಗೆ ವಾಪಾಸ್ ಬರ್ತಿರೊದು ಕೇವಲ ೧೪ ರಿಂದ ೧೫ ಪೈಸೆ ಅಷ್ಟೆ. ೮೫ ಪೈಸೆ ತೆರಿಗೆ ದುಡ್ಡು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಶ್ರೀನಿವಾಸಪುರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಅಂತ ಶಾಸಕ ವೆಂಕಟಶಿವಾರೆಡ್ಡಿ ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಇದ್ದಾಗ ಎಷ್ಟು ಕೋಟಿ ಅನುದಾನ ಕೊಟ್ಟಿದ್ದರು, ರಮೇಶ್ ಕುಮಾರ್ ಶಾಸಕರಾಗಿದ್ದಾಗ ಅವರಿಗೆ ಎಷ್ಟು ಅನುದಾನ ನೀಡಿದ್ದರು. ಕೇಂದ್ರ ಸರ್ಕಾರ ಈಗ ಆಂಧ್ರ ಹಾಗು ಬಿಹಾರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಆದರೆ ನಮಗೆ ಯಾಕೆ ನೀಡಲಿಲ್ಲ, ಇದು ತಾರತಮ್ಯ ಅಲ್ವಾ ಎಂದು ಪತ್ರಕರ್ತರನ್ನು ಪ್ರಶ್ನೆ ಮಾಡಿದರು. ಇತ್ತ ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೀವಿ ಎಂದು ವಿಕ್ಟರಿ ಸಂಕೇತ ತೋರಿಸಿದರು.