ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಹೆಸರಿನಲ್ಲಿ ಮೂರು ದಿನದ ವಿಶೇಷ ಅಧಿವೇಶನ ಕರೆದು, ಕ್ಷೇತ್ರ ಮರು ವಿಂಗಡಣೆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದ ಕೇಂದ್ರ ಸರ್ಕಾರವು ಬದಲಾದ ವಿಧಾನದಿಂದ ಮುಖಭಂಗ ಅನುಭವಿಸಿದೆ ಎಂದು ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ಜನಪ್ರಿಯತೆ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಅತಿ ಅವಸರದಲ್ಲಿ ಜಾರಿಗೊಳಿಸಲು ಮುಂದಾಗಿತ್ತಲ್ಲದೇ, ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಅದರ ಲಾಭ ಪಡೆಯಲು ಪ್ರಯತ್ನಿಸಿತ್ತು ಎಂದರು.
ಯಾವಾಗಲೂ ನಾವು ಮಹಿಳಾ ಮೀಸಲಾತಿಗೆ ಬೆಂಬಲಿಸಿದ್ದೇವೆ. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿಷಯದಲ್ಲಿ ಎಂದಿಗೂ ವಿರೋಧಿಸಿಲ್ಲ. ಆದರೂ, ಇದನ್ನು ನಿಜವಾಗಿಯೂ ವಿರೋಧಿಸಿದ್ದೇ ಬಿಜೆಪಿ. 2023ರಲ್ಲೇ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಮಸೂದೆ ಮಂಡಿಸಿತು. ಆಗ ಕಾಂಗ್ರೆಸ್ ಪಕ್ಷವು ಬೆಂಬಲ ನೀಡಿದರೂ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರು ವಿಂಗಡಣೆ ಎರಡೂ ಪರಸ್ಪರ ಸಂಬಂಧಿಸಿವೆಯೆಂದು ಕೇಂದ್ರ ಹೇಳಿತು. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯು ಒಂದೇ ವೇಳೆ ಜಾರಿಗೊಳಿಸಬೇಕಾದರೂ ಈಗಾಗಲೇ ಇದು ಹೇಗೆ ಉಪಯುಕ್ತ ಎಂಬುದು ನಮ್ಮ ಪ್ರಶ್ನೆಯಾಗಿತ್ತು ಎಂದು ಹೇಳಿದರು.ಉತ್ತರ ಪ್ರದೇಶದಲ್ಲಿ 80 ಸ್ಥಾನ ಮೀರಿ, 120 ಸ್ಥಾನಕ್ಕಿಂತ ಹೆಚ್ಚು ಆಯ್ಕೆಗೆ ಅವಕಾಶ ಇದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕೇವಲ 42 ಸ್ಥಾನಗಳಷ್ಟೇ ಇರುತ್ತವೆ. ಶೇ.59 ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಘೋರ ಅನ್ಯಾಯವಾಗುತ್ತದೆ. ಭದ್ರತೆಗಾಗಿ, ಸಂವಿಧಾನದ ತಿದ್ದುಪಡಿಯು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಮತ್ತು ಶೇ.50 ರಾಜ್ಯಗಳ ಒಪ್ಪಿಗೆ ಪಡೆಯಬೇಕು. ನಾವು ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸಿದ್ದು, ಮಹಿಳಾ ಮೀಸಲಾತಿಗೆ ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉತ್ತರ ಅಧ್ಯಕ್ಷ ಕೆ.ಜಿ.ಶಿವಕುಮಾರ, ದಕ್ಷಿಣ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಎ.ನಾಗರಾಜ, ಮಂಜುಳಾ, ಮಂಗಳ, ರಾಜೇಶ್ವರಿ ಇತರರು ಇದ್ದರು.
ಲೋಕಸಭೆಯಲ್ಲಿ 2023ರಲ್ಲಿ 450 ಮತಗಳನ್ನು ಪಡೆದು ಅಂಗೀಕರಿಸಲಾದ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಜಾರಿಗೊಳಿಸಿದ್ದಿಲ್ಲವೆಂಬುದು ನಮ್ಮ ಪ್ರಶ್ನೆಯಾಗಿದೆ. ಕ್ಷೇತ್ರ ಪುನರ್ವಿಂಗಡಣೆಯನ್ನು ಬೇರ್ಪಡಿಸಿ, ಮಹಿಳಾ ಮೀಸಲಾತಿಯಡಿ ಮಸೂದೆ ಮಂಡಿಸಿದ್ದರೆ ಯಾವುದೇ ವಿರೋಧವೂ ಆಗುತ್ತಿರಲಿಲ್ಲ. ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿಗೆ ವಿರೋಧ ಮಾಡಿಲ್ಲ.
ಡಾ.ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಸಂಸದೆ, ದಾವಣಗೆರೆ.