ಗ್ರಾಮೀಣ ಭಾಗದ ಮುಗ್ಧ ಜನರ ಅನಾರೋಗ್ಯದ ಲಾಭ ಪಡೆದು, ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಕನಿಷ್ಠ ವಿದ್ಯಾಭ್ಯಾಸವು ಕೂಡ ಇಲ್ಲದ ಒಡಿಶಾ ಮೂಲದ ವಿಶ್ವಜೀತ ಎನ್ನುವ ನಕಲಿ ವೈದ್ಯನೊಬ್ಬನನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ(ಕೆ) ಗ್ರಾಮದಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಭಾಲ್ಕಿ
ಗ್ರಾಮೀಣ ಭಾಗದ ಮುಗ್ಧ ಜನರ ಅನಾರೋಗ್ಯದ ಲಾಭ ಪಡೆದು, ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಕನಿಷ್ಠ ವಿದ್ಯಾಭ್ಯಾಸವು ಕೂಡ ಇಲ್ಲದ ಒಡಿಶಾ ಮೂಲದ ವಿಶ್ವಜೀತ ಎನ್ನುವ ನಕಲಿ ವೈದ್ಯನೊಬ್ಬನನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ(ಕೆ) ಗ್ರಾಮದಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ.ಬೀದರ್ ಜಿಪಂ ಸಿಇಓ ಗಿಟ್ಟೆ ಮಾಧವ್ ವಿಠಲರಾವ್ ಅವರ ಸಮಯಪ್ರಜ್ಞೆ ಹಾಗೂ ದಿಟ್ಟ ಕ್ರಮದಿಂದಾಗಿ ದೊಡ್ಡದೊಂದು ನಕಲಿ ವೈದ್ಯರ ಜಾಲ ಬಯಲಿಗೆ ಬಂದಿದೆ.
ಆಡಳಿತವನ್ನು ಜನರ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಸಿಇಒ ನಡೆ ಗ್ರಾಮಗಳ ಕಡೆ’ ‘ಬೆಳಗಿನ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದ ಅಂಗವಾಗಿ, ಸಿಇಒ ಗಿಟ್ಟೆ ಮಾಧವ್ ವಿಠಲರಾವ್ ಅವರು ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು, ನೈರ್ಮಲ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ರೋಗಿಗಳಿಗೆ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ.ಆತನ ಹಾವಭಾವ ಹಾಗೂ ಚಿಕಿತ್ಸಾ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದ ಸಿಇಒ ಅವರಿಗೆ ಆತನ ಬಗ್ಗೆ ಬಲವಾದ ಅನುಮಾನ ಕಾಡಿದೆ. ತಕ್ಷಣವೇ ಆತನ ಬಳಿ ತೆರಳಿದ ಸಿಇಒ, ವೈದ್ಯಕೀಯ ಪದವಿಯ ಪ್ರಮಾಣಪತ್ರ ಹಾಗೂ ಪರವಾನಗಿ ದಾಖಲೆಗಳನ್ನು ತೋರಿಸುವಂತೆ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆತ ತಬ್ಬಿಬ್ಬಾಗಿದ್ದು, ಯಾವುದೇ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲನಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲೇ ಆತ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಮತ್ತು ಒಡಿಶಾ ರಾಜ್ಯದಿಂದ ಬಂದು 2019ರಿಂದ ಇದೇ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಲ್ಲಿ ನಕಲಿ ವೈದ್ಯನಾಗಿ ಅವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿದ್ದಾನೆ, ಮತ್ತು ಚಿಕಿತ್ಸೆ ವೆಚ್ಚ 50 ರು. ಪಡೆಯುತ್ತಿದ್ದಾನೆ ಎಂಬ ಆಘಾತಕಾರಿ ಸತ್ಯ ಸಾಬೀತಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದ್ದಾರೆ.ಜಾಲದ ಬೇರನ್ನು ಕಿತ್ತೊಗೆಯಿರಿ: ನಕಲಿ ವೈದ್ಯನ ಬಣ್ಣ ಬಯಲಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಇಒ ಗಿಟ್ಟೆ ಮಾಧವ್ ವಿಠ್ಠಲರಾವ್, ಕೇವಲ ಈತನ ಬಂಧನದಿಂದ ಸಮಸ್ಯೆ ಬಗೆಹರಿ ಯುವುದಿಲ್ಲ, ಈ ಜಾಲದ ಬೇರನ್ನು ಕಿತ್ತೊಗೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ಯಾವುದೇ ಮೆಡಿಕಲ್ ಸರ್ಟಿಫಿಕೇಟ್ ಅಥವಾ ಪರವಾನಗಿ ಇಲ್ಲದ ಈ ನಕಲಿ ವೈದ್ಯನಿಗೆ ಭಾರಿ ಪ್ರಮಾಣದಲ್ಲಿ ಔಷಧಿಗಳನ್ನು ಪೂರೈಕೆ ಮಾಡಿದವರು ಯಾರು? ಎಂಬುದು ಮೊದಲು ಪತ್ತೆಯಾಗಬೇಕು ಎಂದು ಸಿಇಓ ಗಿಟ್ಟೆ ಹೇಳಿದರು.