ಸಾರಾಂಶ
ಸಂಘದ ಆವರಣದಲ್ಲಿ ನಡೆದ ಸಭೆಯ ಅರ್ಧದಲ್ಲೇ ಮುಖ್ಯ ನಿರ್ವಾಹಣಾಧಿಕಾರಿ ಕೆ.ವಿಜಯ್ ಅವರು ಸಂಘದ ನಿರ್ಣಯದ ಪುಸ್ತಕದೊಂದಿಗೆ ಸೀಲ್ ಹಾಗೂ ಸದಸ್ಯರ ಹಾಜರಾತಿ ಪುಸ್ತಕದ ಸಮೇತ ಪರಾರಿಯಾಗಿದ್ದಾರೆ. ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂಬುದಾಗಿ ಬರುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಲಕ್ಷ್ಮಿಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರು ಹಣ ಮತ್ತು ಲೆಕ್ಕ ಪರಿಶೋಧನೆಯಲ್ಲಿ ಹಣ ದುರುಪಯೋಗ, ಅವ್ಯವಹಾರ ಮಾಡಿರುವ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಭೆ ನಡೆಸದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ನಿರ್ದೇಶಕ ಎಲ್.ಡಿ.ಮಹೇಶ್ ಆರೋಪಿಸಿದರು.ಸಂಘದ ಆವರಣದಲ್ಲಿ ಗುರುವಾರ ನಡೆದ ಸಭೆಯ ಅರ್ಧದಲ್ಲೇ ಮುಖ್ಯ ನಿರ್ವಾಹಣಾಧಿಕಾರಿ ಕೆ.ವಿಜಯ್ ಅವರು ಸಂಘದ ನಿರ್ಣಯದ ಪುಸ್ತಕದೊಂದಿಗೆ ಸೀಲ್ ಹಾಗೂ ಸದಸ್ಯರ ಹಾಜರಾತಿ ಪುಸ್ತಕದ ಸಮೇತ ಪರಾರಿಯಾಗಿದ್ದಾರೆ. ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂಬುದಾಗಿ ಬರುತ್ತಿದೆ ಎಂದರು.
ವಿಜಯ್ ಅವರ ಚಿಕ್ಕಪ್ಪ ಸಂಘದ ಹಾಲಿ ನಿರ್ದೇಶಕರಾಗಿರುವ ಜೈಕೃಷ್ಣ ಕೂಡ ಸುಮಾರು 4 ಲಕ್ಷ ರು.ವರೆಗೆ ಅವ್ಯವಹಾರ ನಡೆಸಿದ್ದಾರೆ. ವಿಜಯ ಸುಮಾರು 5 ವರ್ಷಗಳಿಂದಲೂ ಇಲ್ಲಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ಸುಮಾರು 3 ವರ್ಷಗಳಿಂದ ಸಾಲಗಾರ ಸದಸ್ಯರ ಷೇರುಹಣ ಜಮೆಯಾಗದೆ ದುರುಪಯೋಗ, ಲೆಕ್ಕಪರಿಶೋಧನೆ ವರದಿಯಲ್ಲಿ ದುರುಪಯೋಗ ನಡೆಸಿ ಅವ್ಯವಹಾರ ಮಾಡುತ್ತಿರುವುದು ಆಡಳಿತ ಮಂಡಳಿ ವರದಿಯಲ್ಲಿ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷರ ಗಮನಕ್ಕೆ ತಾರದೆ ಡಿ.17ರಂದು ಮುಂದಿನ ಆಡಳಿತ ಮಂಡಳಿ ಚುನಾವಣೆ ನಡೆಸಲು ದಿನಾಂಕ ನಿಗದಿ ಪಡಿಸುವ ಬಗ್ಗೆ ವಿಷಯ ತಂದಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಆದ್ದರಿಂದ ಕಾರ್ಯನಿರ್ವಹಣಾಧಿಕಾರಿ ಕೆ.ವಿಜಯ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.