ಸಾರಾಂಶ
ಇಂದು ಪೊಲೀಸರ ಸೇವೆ ಅಷ್ಟು ಸುಲಭವಾಗಿಲ್ಲ. 
ಹೊಸಪೇಟೆ: ಈಗಿನ ತಂತ್ರಜ್ಞಾನ ಯುಗದಲ್ಲಿ ಅಪರಾಧ ಪ್ರಕರಣ ಬೇಧಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರೆಹಮಾನ್ ನಂದಗಡಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಟಿಎಸ್‌ಪಿ ಆವರಣದಲ್ಲಿರುವ ಡಿಎಆರ್ ಹೊಸ ಪರೇಡ್ ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ನಿಮಿತ್ತ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಸೋಮವಾರ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.ಇಂದು ಪೊಲೀಸರ ಸೇವೆ ಅಷ್ಟು ಸುಲಭವಾಗಿಲ್ಲ. ಅಪರಾಧ ಪತ್ತೆಗೆ ದಿನನಿತ್ಯವೂ ಒಂದಲ್ಲ ಒಂದು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪೊಲೀಸ್ ಸೇವೆ ಕ್ಲಿಷ್ಟಕರವಾದರೂ ಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಕಾರ್ಯನಿರ್ವಹಿಸುವುದು ಅನಿವಾರ‍್ಯವಾಗಿದೆ. ಕರ್ತವ್ಯ ಪಾಲನೆಯಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ, ರಾಷ್ಟ್ರ ಗೌರವವನ್ನು ಕಾಪಾಡಿದ ಹುತಾತ್ಮ ಪೊಲೀಸರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.ಎಸ್ಪಿ ಬಿ.ಎಲ್. ಶ್ರೀ ಹರಿಬಾಬು ಮಾತನಾಡಿ, 2023-24ನೇ ಸಾಲಿನಲ್ಲಿ ದೇಶದಲ್ಲಿ ಒಟ್ಟು 213 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದಾರೆ. ರಾಜ್ಯದಲ್ಲಿ ಐವರು ಪೊಲೀಸ್ ಸಿಬ್ಬಂದಿ ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿದ್ದಾರೆ ಎಂದರು.
1959ರಲ್ಲಿ ಡಿವೈಎಸ್ಪಿ ಕರಣ್ ಸಿಂಗ್ ನೇತೃತ್ವದ ಸಿಆರ್‌ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿ ಗಸ್ತು ನಡೆಸುತ್ತಿರುವ ಸಂದರ್ಭದಲ್ಲಿ ಚೈನಾ ದೇಶದ ಸೈನಿಕರು, ಭಾರತದ ಸಿಆರ್‌ಪಿಎಫ್ ತುಕಡಿಯ ಮೇಲೆ ದಾಳಿ ಮಾಡುತ್ತಾರೆ. ಶತ್ರು ರಾಷ್ಟ್ರದ ಸೈನಿಕರು ಪ್ರಬಲ ಶಸ್ತ್ರಾಸ್ತ್ರ, ಆಯುಧಗಳನ್ನು ಹೊಂದಿದ್ದರು. ಸಾಮಾನ್ಯ ರೀತಿಯ ಬಂದೂಕುಗಳನ್ನು ಹೊಂದಿದ ನಮ್ಮ ದೇಶದ ಸಿಆರ್‌ಪಿಎಫ್ ತುಕಡಿ, ಚೈನಾ ಸೈನಿಕರೊಂದಿಗೆ ಧೈರ್ಯದಿಂದ ಹೋರಾಡಿ, ಹತ್ತು ಜನ ಸಿಆರ್‌ಪಿಎಫ್ ಜವಾನರು, ವೀರ ಮರಣ ಹೊಂದಿದ್ದರು. ಅಲ್ಲದೆ, 9 ಜನ ಚೈನಾ ಸೈನಿಕರನ್ನು ಸೆರೆ ಹಿಡಿದಿದ್ದರು. ಸಿಆರ್‌ಪಿಎಫ್ ಜವಾನರ ಆತ್ಮ ಸಮರ್ಪಣೆಯನ್ನು ದೇಶದೆಲ್ಲೆಡೆ ಗೌರವಿಸಲಾಗುತ್ತಿದೆ ಎಂದರು.ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿ-ಸಿಬ್ಬಂದಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ, ಗೌರವ ಸಲ್ಲಿಸಿದರು. ಹೆಚ್ಚುವರಿ ಎಸ್ಪಿ ಸಲೀಂ ಪಾಷಾ, ಹೊಸಪೇಟೆ ಡಿವೈಎಸ್ಪಿ ಟಿ.ಮಂಜುನಾಥ, ಕ್ಲೂಡಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಹರಪನಹಳ್ಳಿ ಡಿವೈಎಸ್‌ಪಿ ವೆಂಕಟಪ್ಪ ನಾಯಕ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು. ಶಿಕ್ಷಕ ಬಸವರಾಜ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))