ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು

| Published : Dec 07 2024, 12:33 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ರಾಜೇಂದ್ರಶ್ರೀಗಳ 109ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು. ಹನೂರು ಶಾಸಕ ಮಂಜುನಾಥ್, ಸಾಲೂರು ಶ್ರೀಗಳು, ಗುಂಡೇಗಾಲ ಶ್ರೀಗಳು ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳೇಗಾಲ

ಪ್ರಸ್ತುತ ದಿನಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಸಾಲೂರು ಮಠದ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಂಡು ಆರೋಗ್ಯ ಶಿಬಿರ ಯಶಸ್ವಿಗೆ ಉತ್ತಮ ಸಂದೇಶ ನೀಡಿದ್ದು ಹೆಮ್ಮೆಯ ವಿಷಯ ಎಂದರು. ಶ್ರೀಕ್ಷೇತ್ರ ಅನ್ನ, ಅಕ್ಷರ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಇದರಿಂದಾಗಿ ಸಾವಿರಾರು, ಲಕ್ಷಾಂತರ ಮಂದಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶವಾಗಿದೆ ಎಂದರು. ಆರೋಗ್ಯದ ಬಗ್ಗೆ ಯಾರು ನಿರ್ಲಕ್ಷ್ಯ ಮಾಡಬೇಡಿ, ರಾಜಕಾರಣಿಗಳು ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರವಾಗಿದ್ದು ಯಾವುದೇ ಸಂದರ್ಭದಲ್ಲೂ ಆರೋಗ್ಯದ ಬಗ್ಗೆ ತಾತ್ಸಾರ ಭಾವನೆ ಮಾಡಿಕೊಳ್ಳದೆ ರಾಜಕಾರಣಿಗಳು ಜನರ ಒತ್ತಡಕ್ಕೆ, ಪ್ರೀತಿಗೆ ಮಣಿಯಲೆಬೇಕಿದೆ. ಹಾಗಾಗಿ ಆರೋಗ್ಯದಲ್ಲೂ ಇತ್ತಿಚಿನ ದಿನಗಳಲ್ಲಿ ಏರು-ಪೇರಾಗುತ್ತಿರುವುದು ವಾಸ್ತವ ಸಂಗತಿ. ಹಾಗಾಗಿ ಯಾರು ಆರೋಗ್ಯದ ಬಗ್ಗೆ ತಾತ್ಸಾರ ಮಾಡಬಾರದು ಎಂದರು.

ವೈದ್ಯರೇ ದೇವರು, ಎಲ್ಲರೂ ಆರೋಗ್ಯವಂತರಾಗಿ ಬಾಳಿ ಎಂಬ ಸಂದೇಶದ ಈ ಶಿಬಿರ ಯಶಸ್ವಿಯಾಗಲಿದೆ ಎಂದರು. ಗ್ಯಾರಂಟಿ ಯೋಜನಾ ಜಿಲ್ಲಾಧ್ಯಕ್ಷ ಚಂದ್ರು ಅವರನ್ನು ವೈದ್ಯರೊಬ್ಬರು ಕಾಳಜಿ ವಹಿಸಿದ ಪರಿಣಾಮ ಇಂದು ಗುಣಮುಖರಾಗಿದ್ದಾರೆ, ಅವರ ಗುಣಮುಖಕ್ಕೆ ಸ್ಪಂದಿಸಿದ ವೈದ್ಯರೆ ದೇವರು ಎಂದು ವ್ಯಾಖ್ಯಾನಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಜೆಎಸ್ಎಸ್ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಉತ್ತಮವಾದ ಕೆಲಸ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಜಿ‌.ಎನ್.ನಂಜುಂಡಸ್ವಾಮಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಡಿಎಚ್ಒ ಡಾ.ಚಿದಂಬರ್, ತಹಸೀಲ್ದಾರ್ ಬಸವರಾಜು, ಉದ್ಯಮಿ ನಿಶಾಂತ್, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ನಗರಸಭೆ ಅಧ್ಯಕ್ಷ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಪುಟ್ಟಣ್ಣ, ತಿಮ್ಮರಾಜಿಪುರ ರಾಜು, ಪ್ರಾಂಶುಪಾಲ ಮಹದೇಸ್ವಾಮಿ, ಗುಂಡೇಗಾಲ ಮಠಾಧ್ಯಕ್ಷ ಕಾಂತ ಮಹದೇಸ್ವಾಮಿಜಿ, ಸೆಲ್ವರಾಜು ಇನ್ನಿತರರಿದ್ದರು.ಸುತ್ತೂರು ಸಂಸ್ಥೆ ಮಾನವೀಯ ಕೆಲಸಗಳಲ್ಲಿ ಮುಂದಿದೆ. ಹೆಣ್ಣು ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕೆ ಸ್ಪಂದಿಸಿದವರು ರಾಜೇಂದ್ರ ಶ್ರೀಗಳು. ಅವರು ಹಾಕಿಕೊಟ್ಟ ಬುನಾದಿಯಡಿ ನಾವೆಲ್ಲರೂ ಸಾಗಬೇಕು. ಅವರ ತತ್ವಾದರ್ಶ ಯುವ ಪೀಳಿಗೆಗೆ ಮಾದರಿಯಾಗಬೇಕು, ಇಂದಿನ ಶಿಬಿರದಲ್ಲಿ ಸಾಲೂರು ಶ್ರೀಗಳು ರಕ್ತದಾನಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ, ಅವರ ನೀಡಿದ ಈ ಸಂದೇಶವನ್ನು ಎಲ್ಲರೂ ಪಾಲಿಸುವಂತಾಗಬೇಕು. ನಿಶಾಂತ್, ಬಿಜೆಪಿ ನಾಯಕರು, ಹನೂರು ಕ್ಷೇತ್ರ

ಶ್ರೀ ಮಠ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ಆರೋಗ್ಯ ಶಿಬಿರ ಆಯೋಜಿಸಿರುವುದು ಎಲ್ಲರೂ ಹೆಮ್ಮೆ ಪಡುವ ಸಂಗತಿ. ಇದೊಂದು ಅಚ್ಚುಕಟ್ಟಾದ ಕಾರ್ಯಕ್ರಮ, ರಾಜೇಂದ್ರ ಶ್ರೀಗಳ ದಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದು, ಅವರ ಕನಸು ಈಡೇರಿಸುವ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ಶ್ರೀ ಮಠ ದಾಸೋಹಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಸೇವೆಗೈಯುತ್ತಿದೆ. ದೇಶಾದ್ಯಂತ ಶ್ರೀಕ್ಷೇತ್ರ 350ಕ್ಕೂ ಹೆಚ್ಚು ಶಾಖೆ ಹೊಂದಿ ಸೇವೆಗೈಯುತ್ತಿರುವುದು ಪ್ರಶಂಸನೀಯ ವಿಚಾರ. -ಮಂಜುನಾಥ್, ಹನೂರು ಕ್ಷೇತ್ರದ ಶಾಸಕರು