ಬಿಸಿಲನಾಡು ರಾಯಚೂರಿನಲ್ಲಿ ಭೂಗಳ್ಳರಿಂದ ಅರಣ್ಯ ಪ್ರದೇಶದ ಸಂರಕ್ಷಣೆ ಕಾರ್ಯವು ಸವಾಲು

| N/A | Published : Apr 08 2025, 01:47 AM IST / Updated: Apr 08 2025, 01:07 PM IST

ಬಿಸಿಲನಾಡು ರಾಯಚೂರಿನಲ್ಲಿ ಭೂಗಳ್ಳರಿಂದ ಅರಣ್ಯ ಪ್ರದೇಶದ ಸಂರಕ್ಷಣೆ ಕಾರ್ಯವು ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲನಾಡು ರಾಯಚೂರಿನಲ್ಲಿ ಅರಣ್ಯ ಪ್ರದೇಶದ ಸಂರಕ್ಷಣೆ ಕಾರ್ಯವು ಸವಾಲಾಗಿ ಮಾರ್ಪಟ್ಟಿದೆ.

ರಾಮಕೃಷ್ಣ ದಾಸರಿ 

 ರಾಯಚೂರು : ಬಿಸಿಲನಾಡು ರಾಯಚೂರಿನಲ್ಲಿ ಅರಣ್ಯ ಪ್ರದೇಶದ ಸಂರಕ್ಷಣೆ ಕಾರ್ಯವು ಸವಾಲಾಗಿ ಮಾರ್ಪಟ್ಟಿದೆ.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ಲಿಂಗಸುಗೂರು, ಮಾನ್ವಿ, ದೇವದುರ್ಗ, ಸಿಂಧನೂರು, ಮಸ್ಕಿ ಹಾಗೂ ಸಿರವಾರ ತಾಲೂಕುಗಳ್ಳಿ ಅರಣ್ಯ ಪ್ರದೇಶವಿದ್ದು ಸಾಗುವಳಿ ಭೂಮಿಗಳಾಗಿ, ಪ್ರಭಾವಿಗಳ ಕಪಿಮುಷ್ಠಿಯಲ್ಲಿ ಒತ್ತುವರಿಯಾಗಿ ನುಂಗಿರುವ ಸಾವಿರಾರು ಎಕರೆಗಳ ರಕ್ಷಣೆಗೆ ಇದುವರೆಗೂ ಯಾವುದೇ ರೀತಿಯ ಪರಿಣಾಮಕಾರಿಯಾದ ಕಠಿಣ ಕ್ರಮದ ಜರುಗಿಲ್ಲ.

 ಇದು ಭೂಗಳ್ಳರಿಗೆ ಅದರಲ್ಲಿಯೂ ಅರಣ್ಯ ಜಮೀನನ್ನು ಕಬಳಿಸಿದವರ ಧೈರ್ಯವನ್ನು ಹೆಚ್ಚಿಸುವಂತೆ ಮಾಡಿದೆ.ರಾಯಚೂರು ಜಿಲ್ಲೆಯಲ್ಲಿ ಕೇವಲ ಸುಮಾರು 34,000 (ಶೇ.4 ರಷ್ಟು) ಮಾತ್ರ ಅರಣ್ಯ ಪ್ರದೇಶವಿದೆ. ಇದರಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿದ್ದು, ಬಂದಂತಹ ದೂರು ಹಾಗೂ ಅರಣ್ಯ ಇಲಾಖೆಯಿಂದ ಸ್ವಯಂ ಪ್ರೇರಿತವಾಗಿ ಇಲ್ಲಿ ತನಕ ಅಂದಾಜು 175 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ.

ನಿಗಾವಹಿಸುವವರೇ ಇಲ್ಲ :

ಅರಣ್ಯ ವಲಯವು ಕಡಿಮೆ ಪ್ರಮಾಣದಲ್ಲಿರುವ ಕಾರಣಕ್ಕೆ ಜನಪ್ರತಿನಿಧಿಗಳು, ಆಡಳಿತ ವರ್ಗ ಹಾಗೂ ಸಾರ್ವಜನಿಕರಿಗೆ ಸಹಜವಾಗಿಯೇ ಅರಣ್ಯ ಇಲಾಖೆಯ ಮೇಲೆ ಆಸಕ್ತಿ ಕಡಿಮೆ ಇರುವ ಕಾರಣಕ್ಕೆ ಅರಣ್ಯ ಭೂಮಿ, ಒತ್ತುವರಿ, ವನ್ಯಜೀವಿಗಳ ಅಂಕಿ-ಸಂಖ್ಯೆ, ಅವುಗಳ ಸಂರಕ್ಷಣೆ, ಯಾವ ಯಾವ ಯೋಜನೆಗಳಿವೆ ಮತ್ತು ಅಧಿಕಾರಿ, ಸಿಬ್ಬಂದಿ ವರ್ಗವು ಯಾವ ರೀತಿ ಕೆಲಸ-ಕಾರ್ಯಗಳನ್ನು ಮಾಡುತ್ತಿದೆ ಎನ್ನುವುದರ ಬಗ್ಗೆ ನಿಗಾವಹಿಸುವವರೇ ಇಲ್ಲದಂತಾಗಿದೆ. ಇದರಿಂದಾಗಿ ಎಷ್ಟು ಎಕರೆ, ಒತ್ತುವರಿ ಎಷ್ಟು ಹಾಗೂ ವನ್ಯಜೀವಿಗಳ ಸಂಖ್ಯೆ ಎಷ್ಟು ಎನ್ನುವುದರ ಬಗ್ಗೆ ನಿಖರ ಮಾಹಿತಿ ಸಿಗದಂತಾಗಿದ್ದು, ಇದನ್ನು ಸಾರ್ವಜನಿಕಗೊಳಿಸಲು ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರದೇ ಇರುವುದು ಎದ್ದು ಕಾಣಿಸುತ್ತಿದೆ.

ಜಂಟಿ ಸರ್ವೇಗೆ ಸೂಚನೆ :

ಸುಮಾರು ವರ್ಷಗಳ ಅರಣ್ಯ ಪ್ರದೇಶ ಸರ್ವೇ ಕಾರ್ಯ ನಡೆಯದ ಹಿನ್ನೆಲೆಯಲ್ಲಿ ಜಂಟಿ ಸರ್ವೇ ನಡೆಸಲು ಕೋರ್ಟ್‌ ಸೂಚನೆ ನೀಡಿದೆ. ಕಂದಾಯ, ಭೂ ಮಾಪನ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ಮಾಡಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಮೂರು ಇಲಾಖೆಗಳು ಸಂಯೋಜನೆಗೊಂಡು ಸರ್ವೇ ಕಾರ್ಯವನ್ನು ಆರಂಭಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ವನ್ಯಜೀವಿಗಳ ಗಣತಿ ಹಲವಾರು ವರ್ಷಗಳಿಂದ ವನ್ಯಜೀವಿಗಳ ಗಣತಿ ಕಾರ್ಯ ನಡೆಯದ ಕಾರಣಕ್ಕೆ ಪ್ರಸಕ್ತ ಸಾಲಿನ ಜನವರಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ವನ್ಯಜೀವಿಗಳ ಗಣತಿಯನ್ನು ಮಾಡಿ ಆನ್‌ಲೈನ್ ಅಪ್‌ ಲೋಡ್‌ ಮಾಡಲಾಗಿದೆ. ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಸೂಚನೆಯಂತೆ ಈ ಕಾರ್ಯವನ್ನು ಮಾಡಿ ಜಿಲ್ಲೆಯಲ್ಲಿ ಯಾವ ಯಾವ (ಸಸ್ಯಹಾರಿ, ಮಾಂಸಹಾರಿ ಹಾಗೂ ಇತರೆ) ಪ್ರಾಣಿಗಳು ಎಷ್ಟಿವೆ ಎನ್ನುವುದರ ಮಾಹಿತಿಯನ್ನು ಆನ್‌ಲೈನ್‌ನಲ್ಲಿಯೇ ಸಂಗ್ರಹಿಸಿ ಕಳುಹಿಸಿಕೊಡಲಾಗಿದ್ದು, ಇಷ್ಟರಲ್ಲಿಯೇ ವರದಿಯು ಸಹಬಹಿರಂಗಗೊಳ್ಳುವ ಸಾಧ್ಯತೆಗಳಿವೆ.

ರಾಯಚೂರು ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದ ಜಂಟಿ ಸರ್ವೇ ಕಾರ್ಯಕ್ಕೆ ಸೂಚನೆ ಬಂದಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು. ಇಲಾಖೆಯಿಂದ ಇಲ್ಲಿ ತನಕ 175 ಎಕರೆ ಪ್ರದೇಶದ ಒತ್ತುವರಿ ತೆರವುಗೊಳಿಸಿದ್ದು, ಸರ್ವೇ ವರದಿ ದೊರೆತಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ತೆರವು ಕಾರ್ಯಾಚರಣೆ ನಡೆಸಲು ಅನುಕೂಲವಾಗಲಿದೆ. ವನ್ಯಜೀವಿಗಳ ಗಣತಿಯನ್ನು ಮಾಡಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ವರದಿ ಬಹಿರಂಗಗೊಳ್ಳಬೇಕಿದೆ

- ಪ್ರವೀಣ.ಎಸ್, ಡಿಎಫ್ಒ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ರಾಯಚೂರು