ದೇವರಿಗೆ ಪ್ರಾರ್ಥನೆ ಮಾಡುವ ಪುತ್ತರಿ ನಮ್ಮೆಯ ಕುತ್ತಿಕಾರರಾದ ಪ್ರವೀಣ್‌ ಉತ್ತಪ್ಪ ತಪ್ಪಡ್ಕ ಕಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಟಿ ಕೆಲಸವನ್ನು ಎಲ್ಲಾರು ಒಂದಾಗಿ ಸೇರಿ ಮಾಡುವ ಮೂಲಕ ಹಿಂದಿನ ಕಾಲದ ಅವಿಭಕ್ತ ಕುಟುಂಬ ವ್ಯವಸ್ಥೆಯ ಮಹತ್ವವನ್ನು ಸಾರಿದ ಬೊಟ್ಟಿಯತ್ ನಾಡು ಹಳ್ಳಿಗಟ್ಟು ಗ್ರಾಮದ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರು ಇದೀಗ ಒಂದೆಡೆ ಸೇರಿ ಕದಿರು ತೆಗೆಯುವ ಮೂಲಕ ಪುತ್ತರಿ ನಮ್ಮೆಯನ್ನು ವಿಭಿನ್ನವಾಗಿ ಆಚರಿಸಿದ್ದರು.

ಇದಕ್ಕೂ ಮೊದಲು ಕುಟುಂಬದ ಬಲ್ಯಮನೆಯಲ್ಲಿ ಸೇರಿದ ಸದಸ್ಯರು ದೇವರಿಗೆ ಪ್ರಾರ್ಥನೆ ಮಾಡುವ ಪುತ್ತರಿ ನಮ್ಮೆಯ ಕುತ್ತಿಕಾರರಾದ ಪ್ರವೀಣ್ ಉತ್ತಪ್ಪ ತಪ್ಪಡ್ಕ ಕಟ್ಟಿ ಚಾಲನೆ ನೀಡಿದರು. ಬಳಿಕ ತಳಿತಕ್ಕಿ ಬೊಳಕಿನೊಂದಿಗೆ ದೂರದಲ್ಲಿರುವ ಗದ್ದೆಗೆ ತೆರಳಿ ಕುಟುಂಬದ ಪಟ್ಟೆದಾರ ಡಿಕ್ಕಿ ಕುಶಾಲಪ್ಪನವರ ಗದ್ದೆಯಲ್ಲಿ ನೆರೆಕಟ್ಟಿ ಕದಿರು ತೆಗೆಯುವ ಮೂಲಕ ಕುಟುಂಬದವರೆಲ್ಲ ಒಂದೇ ಸೂರಿನಡಿ ವಿಜೃಂಭಿಸಿದರು. ಪೊಲಿ ಪೊಲಿ ದೇವಾ.. ಎನ್ನುವ ಉದ್ಘೋಷ ಮುಗಿಲು ಮುಟ್ಟುತಿದ್ದಂತೆ ಕತ್ತಲೆಯನ್ನು ಬೆಳಕಾಗಿಸುವ ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಬಿಡಿಸಿ ಭೋರ್ಗರೆಯಿತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಊರು ತಕ್ಕರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ಬಹಳ ಹಿಂದಿನ ಕಾಲದಿಂದಲೂ ನಾವು ಊರಿನ ದೇವಸ್ಥಾನದಲ್ಲಿ ಕದಿರು ತೆಗೆದ ಬಳಿಕ ಅವರವರ ಮನೆ ಮನೆಯಲ್ಲಿ ಕದಿರು ತೆಗೆಯುತ್ತಿದ್ದು ಒಂದು ಮನೆಯಲ್ಲಿ ಒಬ್ಬರು ಇಬ್ಬರು ಸದಸ್ಯರು ಮಾತ್ರವಿದ್ದು ಪುತ್ತರಿಯ ಸಂಭ್ರಮ ಕಳೆಗುಂದಿತ್ತು. ಇದೀಗ ಕಳೆದ ವರ್ಷ ನಾವು ಒಂದಷ್ಟು ಸಮಾನ ಮನಸ್ಕರು ಸೇರಿ ರಸ್ತೆ ಬದಿಯ ಒಂದು ಗದ್ದೆಯನ್ನು ಸಾಮೂಹಿಕವಾಗಿ ಉತ್ತು-ಬಿತ್ತಿ ನಾಟಿ ನೆಡುವ ಮೂಲಕ ಪುತ್ತರಿಯನ್ನು ಸಂಭ್ರಮದಿಂದ ಆಚರಿಸುವ ಬಗ್ಗೆ ಚರ್ಚಿಸಿ ಈ ವಿಶೇಷ ಪರಿಕಲ್ಪನೆಗೆ ಚಾಲನೆ ನೀಡಲಾಯಿತು. ಇಂದಿನ ಯುವಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಗದ್ದೆ ಕೆಲಸ ಸೇರಿದಂತೆ ಹಬ್ಬದ ಆಚರಣೆಯನ್ನು ಪರಿಚಯಿಸುವ ಪರಿಕಲ್ಪನೆ ಕೂಡ ಇದಾಗಿದೆ. ಇದರಿಂದ ಕಳೆದ ಎರಡು ವರ್ಷದಿಂದ ಒಂದು ಗದ್ದೆಯನ್ನು ಉಳುಮೆ ಮಾಡಿ ಕುಟುಂಬಸ್ಥರು ಎಲ್ಲಾರು ಸೇರಿ ಒಟ್ಟಿಗೆ ನಾಟಿ ಕಾರ್ಯ ಮಾಡುವ ಮೂಲಕ ಹಿಂದಿನ ಕಾಲದ *ಕೂಟ್ ಪಣಿ ಅಥವಾ ಮುಯ್ಯಾಳ್ ವ್ಯವಸ್ಥೆ* ಮಹತ್ವವನ್ನು ತಿಳಿಸಲಾಗಿದೆ. ಇದೀಗ ಅದೇ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಪುತ್ತರಿ ಮಹತ್ವದ ಬಗ್ಗೆ ಮುಂದಿನ ಯುವ ಪೀಳಿಗೆಗೆ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಈ ವರ್ಷದ ನಾಟಿ ಕೆಲಸ ಸಂದರ್ಭದಲ್ಲಿ ದಾರಿಹೋಕ ಪ್ರವಾಸಿಗರಾಗಿ ಆಗಮಿಸಿ ನಾಟಿ ಕೆಲಸದಲ್ಲಿ ಸಂಭ್ರಮಿಸಿದ ಕೇರಳದ ಐದಾರು ಜನ ಯುವಕರ ತಂಡ ಇದೀಗ ಪುತ್ತರಿ ನಮ್ಮೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ನೆರೆದ ಎಲ್ಲಾರಿಗೂ ಸಾಮೂಹಿಕ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಳಿಕ ಸಾಂಪ್ರದಾಯಿಕ ವಾಲಗಕ್ಕೆ ಎಲ್ಲರು ಸಂಭ್ರಮಿಸಿದರು.