ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೂ ಕಾಯ್ದೆ ಮೂಲಕ ಅನೇಕ ಸುಧಾರಣೆ ತಂದರು. ಲಕ್ಷಾಂತರ ಬಡ ರೈತರಿಗೆ ಭೂಮಿ ನೀಡುವ ಮೂಲಕ ಸಾಮಾಜಿಕ ಪರಿವರ್ತನೆ ಹಾಗೂ ಸಾಮಾಜಿಕ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಉಳುವವನೇ ಭೂಮಿಯ ಒಡೆಯ ಎನ್ನುವ ತತ್ವದಡಿ ಕ್ರಾಂತಿಕಾರಿ ಭೂ ಕಾಯ್ದೆ ಜಾರಿಗೊಳಿಸಿ ರಾಜ್ಯದ ಲಕ್ಷಾಂತರ ಬಡ ರೈತರಿಗೆ ನೆರವಿಗೆ ಧಾವಿಸಿ ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಹಾರರಾಗಿದ್ದಾರೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೂ ಕಾಯ್ದೆ ಮೂಲಕ ಅನೇಕ ಸುಧಾರಣೆ ತಂದರು ಎಂದರು.
ಲಕ್ಷಾಂತರ ಬಡ ರೈತರಿಗೆ ಭೂಮಿ ನೀಡುವ ಮೂಲಕ ಸಾಮಾಜಿಕ ಪರಿವರ್ತನೆ ಹಾಗೂ ಸಾಮಾಜಿಕ ಏಳಿಗೆಗೆ ಹಾಗೂ ಹಿಂದುಳಿದ ವರ್ಗಗಳ, ಶೋಷಿತರ ಅಭಿವೃದ್ಧಿಗೆ ಶ್ರಮಿಸಿರುವ ಅವರು ರಾಜ್ಯದಲ್ಲಿ ಭೂ ಸುಧಾರಣೆಗಳು, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಹಾಗೂ ದೀನ ದಲಿತ ಸಮುದಾಯಗಳಿಗೆ ರಾಜಕೀಯ ಧ್ವನಿಯಾಗಿ ಅವರ ಸಬಲೀಕರಣಕ್ಕಾಗಿ ದುಡಿದಿರುವ ಮಹಾನ್ ನಾಯಕ ಅರಸು ಎಂದು ಬಣ್ಣಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಬಡ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡಿ ಅವರ ಏಳಿಗೆಗೆ ಶ್ರಮಿಸಿ ಮುಂಚೂಣಿಗೆ ಬರುವಂತೆ ಮಾಡಿದ್ದರು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ ಮಾತನಾಡಿ, ಹಿಂದುಳಿದ ವರ್ಗಗಳ ಆಶಾದೀಪವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸ್ಥಾಪನೆಗಳ ಮೂಲಕ ಅವರ ಶೈಕ್ಷಣಿಕ, ಆರ್ಥಿಕ ಸಮಗ್ರ ಚಿಂತನೆಗಳ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದರು. ಇಂಥ ಮಹನೀಯರ ಆದರ್ಶಗಳನ್ನು ಯುವಕರು ಅರಿತುಕೊಳ್ಳಬೇಕು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಕೆ.ಎಸ್.ವಿನೋದ್ ಕುಮಾರ್ ಮಾತನಾಡಿ, ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂಬ ಆಶಯದೊಂದಿಗೆ ವಸತಿ ನಿಲಯಗಳನ್ನು ಸ್ಥಾಪನೆ ಮಾಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯ ಕಲ್ಪಿಸಿ ಮಾದರಿಯಾಗಿದ್ದಾರೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ನಾಡಿನ ಬಡ ಜನರ ಅಭಿವೃದ್ಧಿಗೆ ಅನೇಕ ಸುಧಾರಣೆಗಳನ್ನು ಜಾರಿ ತರಲು ಶ್ರಮಿಸಿದ ಮಹಾನ್ ನಾಯಕನ ಸ್ಮರಣೆ ಮುಖ್ಯ ಎಂದರು.ಸವಿತ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಕೆಂಪರಾಜು ಮಾತನಾಡಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಎ.ಎಂ.ಸೋಮಶೇಖರ್, ಪಂಚಾಯತ್ ರಾಜ್ ಇಲಾಖೆ ಎಇಇ ಅಪ್ಪಣ್ಣ ಬೋವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ರಂಗಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.