ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗುತ್ತಿಲ್ಲ

| Published : Dec 29 2024, 01:18 AM IST

ಸಾರಾಂಶ

ಖಾಸಗಿ ಕಂಪನಿಗಳು ಸರ್ಕಾರದ ಜವಾಬ್ದಾರಿ ಕಡಿಮೆ ಮಾಡಿ ಮೆರಿಟ್ ಇದ್ದವರಿಗೆ ನೌಕರಿ ನೀಡುತ್ತಿವೆ. ಇದು ಭಾರತದ ಸಂವಿಧಾನದ ಪೀಠಿಕೆಗೆ ವಿರುದ್ಧವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ತಿಳಿಸಿದರು.ನಗರದ ಮಹಾಜನ ಕಾನೂನು ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು 7 ಕಾನೂನು ಕಾಲೇಜುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಮಕಾಲೀನ ಯುಗದಲ್ಲಿ ಸಾಮಾಜಿಕ ನ್ಯಾಯದ ಬದಲಾದ ಮಜಲುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.ಖಾಸಗಿ ಕಂಪನಿಗಳು ಸರ್ಕಾರದ ಜವಾಬ್ದಾರಿ ಕಡಿಮೆ ಮಾಡಿ ಮೆರಿಟ್ ಇದ್ದವರಿಗೆ ನೌಕರಿ ನೀಡುತ್ತಿವೆ. ಇದು ಭಾರತದ ಸಂವಿಧಾನದ ಪೀಠಿಕೆಗೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯ ಎಂದರೆ ಬಡವರು, ದುರ್ಬಲ ವರ್ಗದವರು, ದೀನ ದಲಿತರು, ಮೀಸಲಾತಿ ಅಲ್ಲ. ಎಲ್ಲರಿಗೂ ಸಾಮಾಜಿಕ ಸ್ಥಾನಮಾನ ಅನುಷ್ಠಾನಕ್ಕೆ ಶ್ರಮಿಸುವುದು ಎಂದರು.ಪ್ರತಿ ವರ್ಷ ಕಂಪನಿಗಳು ಸಾಮಾಜಿಕ ಜವಾಬ್ದಾರಿಯಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಿಎಸ್ಆರ್ ಅನುದಾನ ನೀಡುತ್ತವೆ. ಅಷ್ಟು ಹಣ ಎಲ್ಲಿಗೆ ಹೋಗುತ್ತಿದೆ? ಒಂದೇ ಒಂದು ಗ್ರಾಮದಲ್ಲಿ ಅಭಿವೃದ್ಧಿ ಮಾಡಿದ ಉದಾಹರಣೆ ಇಲ್ಲ ಎಂದು ಅವರು ಹೇಳಿದರು.ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ 35 ಸಾವಿರ ಕೋಟಿ ರೂ. ಕೊಡುತ್ತಿದೆ. ಲೋಕೋಪಯೋಗಿ ಇಲಾಖೆಗಿಂತ ಹೆಚ್ಚಿನ ಅನುದಾನ ನೀಡುತ್ತಿದೆ. ಅಷ್ಟು ಹಣ ಎಲ್ಲಿಗೆ ಹೋಗುತ್ತಿದೆ? ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಪ್ರಾಮಾಣಿಕವಾಗಿ ನಡೆಯಬೇಕು ಎಂದು ಅವರು ತಿಳಿಸಿದರು. ಸಮಾನ ನ್ಯಾಯಕಾರ್ಯಾಗಾರ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಮಾತನಾಡಿ, ಸಾಮಾಜಿಕ ನ್ಯಾಯ ಎಂದರೆ ಜಾತಿ, ಲಿಂಗ, ವರ್ಣ, ವರ್ಗ, ಭಾಷೆ ಸಹಿತವಾಗಿ ಯಾವುದೇ ತಾರತಮ್ಯ ಇಲ್ಲದೇ ಎಲ್ಲರನ್ನೂ ಒಳಗೊಳ್ಳುವುದಾಗಿದೆ. ಭಾರತಾಂಬೆಯ ಮಕ್ಕಳಾದ ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೇ ಸಮಾನ ನ್ಯಾಯ ಕೊಡುವುದಾಗಿದೆ ಎಂದು ಹೇಳಿದರು.ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅದ್ಭುತ ದಾಖಲೆಯಾದ ಸಂವಿಧಾನವನ್ನು ಎಲ್ಲರೂ ನಂಬುವುದು ಮತ್ತು ಅನುಷ್ಠಾನಕ್ಕೆ ತರಲು ಶ್ರಮಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಆಳವಾದ ಬದ್ಧತೆಯಿಂದ ಸಂವಿಧಾನ ರಚಿಸಿದ್ದಾರೆ. ಇದರಡಿ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕಿದೆ ಎಂದು ಅವರು ತಿಳಿಸಿದರು.ರಾಜ್ಯ ಕಾನೂನು ಆಯೋಗದ ಮುಖ್ಯಸ್ಥ ಡಾ. ಅಶೋಕ ಬಿ. ಹಿಂಚಿಗೇರಿ ಮಾತನಾಡಿ, ಲಿಂಗ ಸಮಾನತೆಯೇ ಸಾಮಾಜಿಕ ನ್ಯಾಯ. ದೇಶದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರಿದ್ದಾರೆ. ಪುರುಷ ಮತ್ತು ಮಹಿಳೆಯರ ನಡುವೆ ಅಸಮಾನತೆ ಇರಬಾರದು. ವರ್ತಮಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಕ್ತಿಯುತವಾಗಿದ್ದಾರೆ. ಪ್ರತಿ ಜೀವಿಯೂ ಸಮಾನರು ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ ವಾದೀರಾಜ್, ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ವಿಜಯಲಕ್ಷ್ಮೀ ಮುರಳಿಧರ್ ಇದ್ದರು.----ಕೋಟ್...ಭಾರತದ ಸಂವಿಧಾನ ಜಾರಿಗೊಂಡು 75 ವರ್ಷಗಳಾಗಿದ್ದು, ಇದರ ಬಗ್ಗೆ ಲಘುವಾಗಿ ಮಾತಾಡುವುದು ಸಲ್ಲದು. ವೈವಿಧ್ಯಮಯ ದೇಶವನ್ನು ಅಭಿವೃದ್ಧಿಯತ್ತ ಮುನ್ನೆಡೆಸಿದ ಭಾರತದ ಸಂವಿಧಾನವೂ ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. ಸಂವಿಧಾನದ ಬಗ್ಗೆ ಲಘುವಾದ ಮಾತುಗಳು ಅನುಚಿತವಾದವು. ಉಳಿದಿರುವುದನ್ನು ಕೊಡುವುದಲ್ಲ. ಸಮಾನವಾಗಿ ಹಂಚಿಕೊಳ್ಳುವುದೇ ಸಾಮಾಜಿಕ ನ್ಯಾಯ.- ವಾದಿರಾಜ್, ಸಾಮಾಜಿಕ ಹೋರಾಟಗಾರ